ಸೆಂಚೂರಿಯನ್‌(ಏ.03): ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಬಾಬರ್ ಅಜಂ ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಪಾಕಿಸ್ತಾನ ಕೊನೆಯ ಎಸೆತದಲ್ಲಿ ರೋಚಕ ಗೆಲುವು ದಾಖಲಿಸುವ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಶುಭಾರಂಭ ಮಾಡಿದೆ.

ಇಲ್ಲಿನ ಸೂಪರ್‌ಸ್ಪೋರ್ಟ್‌ ಪಾರ್ಕ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬಾಬರ್ ಅಜಂ ವೃತ್ತಿಜೀವನ 13ನೇ ಏಕದಿನ ಶತಕ ಬಾರಿಸಿ ಮಿಂಚಿದ್ದಾರೆ. ಇದರೊಂದಿಗೆ ಕ್ರಿಕೆಟ್‌ ದಿಗ್ಗಜರಾದ ಹಾಶೀಂ ಆಮ್ಲಾ, ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಪಾಕಿಸ್ತಾನದ ನಾಯಕ ಯಶಸ್ವಿಯಾಗಿದ್ದಾರೆ. ಬಾಬರ್ ಅಜಂ ಕೇವಲ 76 ಇನಿಂಗ್ಸ್‌ಗಳಲ್ಲಿ 13 ಏಕದಿನ ಶತಕ ಬಾರಿಸುವ ಮೂಲಕ ಅತಿ ಕಡಿಮೆ ಇನಿಂಗ್ಸ್‌ನಲ್ಲಿ 13 ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್‌ ಎನ್ನುವ ಕೀರ್ತಿಗೆ ಬಾಬರ್ ಪಾತ್ರರಾಗಿದ್ದಾರೆ.

ಐಸಿಸಿ ಟಿ20 ವಿಶ್ವಕಪ್‌: ಪಾಕ್‌ ಕ್ರಿಕೆಟಿಗರಿಗೆ ವೀಸಾ ಭರವಸೆ ನೀಡಿದ ಬಿಸಿಸಿಐ
 
ಹೌದು, ಈ ಮೊದಲು ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ 83 ಇನಿಂಗ್ಸ್‌ಗಳನ್ನಾಡಿ 13 ಶತಕ ಪೂರೈಸಿದ್ದರು. ಇನ್ನು ಬರೋಬ್ಬರಿ 86 ಇನಿಂಗ್ಸ್‌ಗಳನ್ನಾಡಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 13ನೇ ಏಕದಿನ ಶತಕ ಪೂರೈಸಿದ್ದರು. 

ದಕ್ಷಿಣ ಆಫ್ರಿಕಾ ವಿರುದ್ದ ಪಾಕಿಸ್ತಾನಕ್ಕೆ ರೋಚಕ ಜಯ:

ಸೆಂಚುರಿಯನ್‌: ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ 3 ವಿಕೆಟ್‌ಗಳ ಜಯ ಸಾಧಿಸಿದ ಪಾಕಿಸ್ತಾನ, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 
ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ, ವ್ಯಾನ್ ಡರ್‌ ಡುಸ್ಸೆನ್‌(123*) ಶತಕದ ನೆರವಿನಿಂದ 6 ವಿಕೆಟ್‌ಗೆ 273 ರನ್‌ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕಿಸ್ತಾನ ನಾಯಕ ಬಾಬರ್ ಅಜಂ(103) ಶತಕ ಬಾರಿಸಿ ಪಾಕಿಸ್ತಾನ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯದ ಕೊನೆಯ ಎಸೆತದಲ್ಲಿ ಪಾಕಿಸ್ತಾನ ರೋಚಕ ಗೆಲುವು ದಾಖಲಿಸಿದೆ.