ನವದೆಹಲಿ(ಏ.02): ಇದೇ ವರ್ಷ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ಭಾರತ ಸರ್ಕಾರದಿಂದ ವೀಸಾ ಕೊಡಿಸುವುದಾಗಿ ಬಿಸಿಸಿಐ, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಗೆ ಭರವಸೆ ನೀಡಿದೆ. 

ಇನ್ನೊಂದು ತಿಂಗಳಲ್ಲಿ ವೀಸಾ ಸಮಸ್ಯೆ ಬಗೆಹರಿಯಲಿದೆ ಎಂದು ಬಿಸಿಸಿಐ ತಿಳಿಸಿದೆ. ಉಭಯ ದೇಶಗಳ ನಡುವಿನ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟಿಗರಿಗೆ ವೀಸಾ ಮಂಜೂರು ಮಾಡುವುದು ಅನುಮಾನವೆನಿಸಿತ್ತು. ಈ ವರ್ಷಾಂತ್ಯದ ವೇಳೆಗೆ 7ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಭಾರತದಲ್ಲಿ ಜರುಗಲಿದೆ. ಪಾಕಿಸ್ತಾನ ತಂಡ, ಪತ್ರಕರ್ತರು ಹಾಗೂ ಅಭಿಮಾನಿಗಳಿಗೆ ವೀಸಾ ಕೊಡಿಸುವ ಭರವಸೆಯನ್ನು ಬಿಸಿಸಿಐ ನೀಡದಿದ್ದರೆ ವಿಶ್ವಕಪ್‌ ಟೂರ್ನಿಯನ್ನು ಭಾರತದಿಂದ ಸ್ಥಳಾಂತರಿಸುವಂತೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಮುಖ್ಯಸ್ಥ ಎಹ್ಸಾನ್‌ ಮಣಿ ಆಗ್ರಹಿಸಿದ್ದರು.

ಟಿ20 ವಿಶ್ವಕಪ್‌ಗೆ ವೀಸಾ ಕೊಡಿ, ಇಲ್ಲವೇ ಭಾರತದಿಂದ ವಿಶ್ವಕಪ್‌ ಎತ್ತಂಗಡಿ ಮಾಡಿ: ಪಾಕ್‌ ಎಚ್ಚರಿಕೆ

2012-13ರಿಂದೀಚೆಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಇದುವರೆಗೂ ಒಂದೇ ಒಂದು ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ. ಕಳೆದ 8 ವರ್ಷಗಳ ಅವಧಿಯಲ್ಲಿ ಉಭಯ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಹಾಗೂ ಏಷ್ಯಾಕಪ್‌ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಭಾರತದಲ್ಲಿ 2016ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಪಾಕಿಸ್ತಾನ ತಂಡವು ವೀಸಾ ಪಡೆದು ಟೂರ್ನಿಯಲ್ಲಿ ಪಾಲ್ಗೊಂಡಿತ್ತು. ಇದಾದ ಬಳಿಕ ಪಾಕಿಸ್ತಾನ ಕ್ರಿಕೆಟ್‌ ತಂಡ ಭಾರತಕ್ಕೆ ಕಾಲಿಟ್ಟಿಲ್ಲ.