* ಇಂಗ್ಲೆಂಡ್ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಪಾಕ್ ಜಯಭೇರಿ* ಮೊದಲ ವಿಕೆಟ್‌ಗೆ ವಿಶ್ವದಾಖಲೆಯ ಜತೆಯಾಟ ನಿಭಾಯಿಸಿದ ಅಜಂ-ರಿಜ್ವಾನ್* ಮೊದಲ ವಿಕೆಟ್‌ಗೆ ದ್ವಿಶತಕದ ಜತೆಯಾಟವಾಡಿದ ಪಾಕ್ ಆರಂಭಿಕ ಜೋಡಿ
ಕರಾಚಿ(ಸೆ.23): ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡವು 10 ವಿಕೆಟ್‌ಗಳ ಐತಿಹಾಸಿಕ ಗೆಲುವ ದಾಖಲಿಸುವ ಮೂಲಕ 7 ಪಂದ್ಯಗಳ ಟಿ20 ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಪಾಕಿಸ್ತಾನದ ಆರಂಭಿಕ ಜೋಡಿಯಾದ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ದ್ವಿಶತಕದ ಜತೆಯಾಟವಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಇಲ್ಲಿನ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಂ ಕೇವಲ 66 ಎಸೆತಗಳಲ್ಲಿ 11 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 110 ರನ್ ಬಾರಿಸಿದರೆ, ಮತ್ತೊಂದು ತುದಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಕೇವಲ 51 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಆಕರ್ಷಕ 88 ರನ್ ಸಿಡಿಸಿದರು. ಈ ಮೂಲಕ ಮೊದಲ ವಿಕೆಟ್‌ಗೆ ಮುರಿಯದ 203 ರನ್‌ಗಳ ಜತೆಯಾಟವಾಡಿ ವಿಶ್ವದಾಖಲೆ ನಿರ್ಮಿಸಿತು. ಈ ಮೊದಲು ಈ ಇಬ್ಬರು ಆಟಗಾರರೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ಗೆ 197 ರನ್‌ಗಳ ಜತೆಯಾಟ ನಿಭಾಯಿಸಿದ್ದರು. ಆದರೀಗ ಈ ಜೋಡಿ ತಮ್ಮದೇ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿದ್ದಾರೆ. ಇದರ ಜತೆಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಯಾವುದೇ ವಿಕೆಟ್‌ಗೆ ದಾಖಲಾದ 5ನೇ ಗರಿಷ್ಠ ರನ್‌ಗಳ ಜತೆಯಾಟ ಕೂಡಾ ಎನಿಸಿಕೊಂಡಿತು.
ಇಂಗ್ಲೆಂಡ್ ತಂಡವು ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ 7 ಪಂದ್ಯಗಳ ಟಿ20 ಸರಣಿಯನ್ನಾಡಲು ಪಾಕಿಸ್ತಾನಕ್ಕೆ ಬಂದಿಳಿದಿದೆ. ಮೊದಲ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿತ್ತು. ಮೊದಲ ಪಂದ್ಯದ ಸೋಲಿನಿಂದ ಎಚ್ಚೆತ್ತುಕೊಂಡ ಪಾಕಿಸ್ತಾನ ತಂಡವು ಎರಡನೇ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡಕ್ಕೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿತ್ತು. ಈ ಮೊದಲು 2021ರಲ್ಲಿ ಯುಎಇನಲ್ಲಿ ಭಾರತ ವಿರುದ್ದ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲೂ ಸಹ ಪಾಕಿಸ್ತಾನ ತಂಡವು 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಆಗ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ಜೋಡಿ 150+ ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಿತ್ತು.
ಅಕ್ಟೋಬರ್ 01ರಿಂದ ICC ಹೊಸ ಕ್ರಿಕೆಟ್ ನಿಯಮಗಳು ಜಾರಿ; ಫ್ಯಾನ್ಸ್ ತಿಳಿದಿರಬೇಕಾದ ಸಂಗತಿಗಳಿವು..!
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡವು 42 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಡಕೆಟ್(43), ಹ್ಯಾರಿ ಬ್ರೂಕ್(31) ಹಾಗೂ ಹಂಗಾಮಿ ನಾಯಕ ಮೋಯಿನ್ ಅಲಿ ಅಜೇಯ 55 ರನ್‌ಗಳ ನೆರವಿನಿಂದ ಇಂಗ್ಲೆಂಡ್ ತಂಡವು 5 ವಿಕೆಟ್ ಕಳೆದುಕೊಂಡು 199 ರನ್ ಕಲೆಹಾಕಿತ್ತು. ಪಾಕಿಸ್ತಾನ ತಂಡದ ಪರ ಹ್ಯಾರಿಸ್ ರೌಫ್, ಶೆನ್‌ವಾರಿ ದಹಾನಿ ತಲಾ 2 ವಿಕೆಟ್ ಪಡೆದರೆ, ನವಾಜ್ ಒಂದು ವಿಕೆಟ್ ಕಬಳಿಸಿದರು.
