- Home
- Sports
- Cricket
- ಅಕ್ಟೋಬರ್ 01ರಿಂದ ICC ಹೊಸ ಕ್ರಿಕೆಟ್ ನಿಯಮಗಳು ಜಾರಿ; ಫ್ಯಾನ್ಸ್ ತಿಳಿದಿರಬೇಕಾದ ಸಂಗತಿಗಳಿವು..!
ಅಕ್ಟೋಬರ್ 01ರಿಂದ ICC ಹೊಸ ಕ್ರಿಕೆಟ್ ನಿಯಮಗಳು ಜಾರಿ; ಫ್ಯಾನ್ಸ್ ತಿಳಿದಿರಬೇಕಾದ ಸಂಗತಿಗಳಿವು..!
ದುಬೈ(ಸೆ.20): ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಮತ್ತಷ್ಟು ರೋಚಕತೆ ಹಾಗೂ ಸ್ಪರ್ಧಾತ್ಮಕತೆಯನ್ನು ತರುವಂತೆ ಮಾಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಮುಂದಾಗಿದೆ. ಇದರ ಭಾಗವಾಗಿ, ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ ನೇತೃತ್ವದ ಐಸಿಸಿ ಸಮಿತಿಯು ಹೊಸ ನಿಯಮಗಳ ಅಳವಡಿಕೆಗೆ ಹಸಿರು ನಿಶಾನೆ ತೋರಿದೆ. ಐಸಿಸಿಯ ನೀತಿ ನಿರೂಪಣೆ ಮಾಡುವ ಎಂಸಿಸಿ(ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್) 2017ರಲ್ಲಿ ರೂಪಿಸಲಾಗಿದ್ದ ನಿಯಮಗಳ ಬಗ್ಗೆಯೂ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗಿದೆ. ಎಲ್ಲಾ ಹೊಸ ನಿಯಮಗಳು ಅಕ್ಟೋಬರ್ 01, 2022ರಿಂದಲೇ ಅಧಿಕೃತವಾಗಿ ಜಾರಿಗೆ ಬರಲಿವೆ. ಹೀಗಾಗಿ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಸಹಾ ಐಸಿಸಿ ಹೊಸ ನಿಯಮಗಳಿಗೆ ನೀವು ಸಾಕ್ಷಿಯಾಗಬಹುದು.ಇಂದು ಐಸಿಸಿ ಪರಿಚಯಿಸಿದ ನೂತನ ನಿಯಮಗಳ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

* ಕ್ಯಾಚ್ ಔಟ್ ಆದ ಬಳಿಕ ಹೊಸ ಬ್ಯಾಟರ್ ಸ್ಟ್ರೈಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ:
ಬ್ಯಾಟರ್ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರೆ, ಕ್ರೀಸ್‌ಗಿಳಿಯುವ ಹೊಸ ಬ್ಯಾಟರ್ ಸ್ಟ್ರೈಕ್‌ನಲ್ಲಿ ಬ್ಯಾಟಿಂಗ್ ನಡೆಸಬೇಕು. ಈ ಮೊದಲು ಕ್ಯಾಚ್ ಹಿಡಿಯುವ ಮುನ್ನ ಒಬ್ಬರನ್ನೊಬ್ಬರು ದಾಟಿದ್ದರೆ, ಹೊಸ ಬ್ಯಾಟರ್‌ನಲ್ಲಿ ನಾನ್ ಸ್ಟ್ರೈಕರ್‌ನಲ್ಲಿ ಇರುವ ಅವಕಾಶವಿತ್ತು. ಇನ್ನು ಮುಂದೆ ಅದು ಸಾಧ್ಯವಿಲ್ಲ.
* ಚೆಂಡಿಗೆ ಎಂಜಲು ಹಚ್ಚಿ, ಚೆಂಡು ಹೊಳಪುಗೊಳಿಸಲು ಇಲ್ಲ ಅವಕಾಶ:
ಕೋವಿಡ್ 19 ಬಂದ ಬಳಿಕ ತಾತ್ಕಾಲಿಕವಾಗಿ ಚೆಂಡಿಗೆ ಎಂಜಲು ಹಚ್ಚಿ ಚೆಂಡನ್ನು ಹೊಳಪುಗೊಳಿಸುವ ಕ್ರಮವನ್ನು ಐಸಿಸಿ ತಾತ್ಕಾಲಿಕವಾಗಿ ನಿಷೇಧಿಸಿತ್ತು. ಇದೀಗ ಆ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತಂದಿದ್ದು, ಚೆಂಡಿಗೆ ಉಗುಳು ಹಚ್ಚುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
* ಹೊಸ ಬ್ಯಾಟರ್, ಕ್ರೀಸ್‌ಗಿಳಿಯಲು ತಡ ಮಾಡುವಂತಿಲ್ಲ:
ವಿಕೆಟ್ ಪತನದ ಬಳಿಕ ಹೊಸ ಬ್ಯಾಟರ್ ಕ್ರೀಸ್‌ಗಿಳಿದು ಚೆಂಡನ್ನು ಎದುರಿಸಲು ತಡ ಮಾಡುವಂತಿಲ್ಲ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಬ್ಯಾಟರ್ ಕೇವಲ 2 ನಿಮಿಷಗಳೊಳಗಾಗಿ ಚೆಂಡನ್ನು ಎದುರಿಸಲು ಸಿದ್ದರಿರಬೇಕು. ಇನ್ನು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 90 ಸೆಕೆಂಡ್‌ಗಳೊಳಗಾಗಿ ಸಿದ್ದರಿರಬೇಕು.
* ಪಿಚ್ ಆಚೆಗೆ ಬೌಲ್ ಮಾಡಿದರೆ ನೋ ಬಾಲ್:
ಬ್ಯಾಟರ್‌ಗಳು ಪಿಚ್ ಏರಿಯಾದೊಳಗಿದ್ದೇ ಚೆಂಡನ್ನು ಬಾರಿಸಲು ಎಲ್ಲಾ ಅವಕಾಶವಿರುತ್ತದೆ. ಪಿಚ್‌ನಾಚೆ ಹೋಗುವ ಎಸೆತಗಳನ್ನು ನೋ ಬಾಲ್ ಎಂದು ಅಂಪೈರ್ ಘೋಷಿಸಲಿದ್ದು, ಆ ಎಸೆತವನ್ನು ಬಾರಿಸಲು ಬ್ಯಾಟರ್‌ಗೆ ಅವಕಾಶವಿರಲಿದೆ.
* ಫೀಲ್ಡರ್‌ಗಳು ಕ್ರಮವಲ್ಲದ ಚಲನವಲನ ಮಾಡುವಂತಿಲ್ಲ:
ಬೌಲರ್‌ಗಳು ಓಡಿಬಂದು ಬೌಲಿಂಗ್ ಮಾಡುವ ಸಂದರ್ಭದಲ್ಲಿ ಕ್ಷೇತ್ರರಕ್ಷಕರಾದವರು ಕ್ರಮವಲ್ಲದ ಅಥವಾ ಉದ್ದೇಶಪೂರ್ವಕವಾಗಿ ಫೀಲ್ಡರ್‌ಗಳು ಚಲನವಲನ ಮಾಡಿದರೆ, ಅಂಪೈರ್ ಪೆನಾಲ್ಟಿ ರೂಪದಲ್ಲಿ ಬ್ಯಾಟಿಂಗ್ ತಂಡಕ್ಕೆ 5 ರನ್‌ಗಳನ್ನು ನೀಡಲಿದ್ದಾರೆ. ಇದರ ಜತೆಗೆ ಆ ಎಸೆತವನ್ನು ಅಂಪೈರ್ ಡೆಡ್‌ಬಾಲ್ ಎಂದು ಘೋಷಿಸಲಿದ್ದಾರೆ.
* ಬೌಲಿಂಗ್ ಮುನ್ನ ನಾನ್ ಸ್ಟ್ರೈಕರ್ ಕ್ರೀಸ್ ತೊರೆದರೆ ರನೌಟ್‌ಗೆ ಅವಕಾಶ:
ಪದೇ ಪದೇ ಮಂಕಡಿಂಗ್ ರನೌಟ್ ಚರ್ಚೆ ಆಗುತ್ತಲೇ ಇರುತ್ತದೆ. ಈ ವಿಚಾರದ ಕುರಿತಂತೆ ಐಸಿಸಿ ಸ್ಪಷ್ಟ ನಿಲುವನ್ನು ಪ್ರಕಟಿಸಿದ್ದು, ನ್ಯಾಯಬದ್ದವಲ್ಲದ ಆಟಕ್ಕೆ ಬ್ರೇಕ್ ಹಾಕಿದೆ. ನಾನ್ ಸ್ಟ್ರೈಕರ್‌ನಲ್ಲಿರುವ ಆಟಗಾರ ಬೌಲಿಂಗ್‌ಗೂ ಮುನ್ನ ಕ್ರೀಸ್ ತೊರೆದರೆ ರನೌಟ್ ಮಾಡಲು ಅವಕಾಶ ನೀಡಿದೆ.
* ಸ್ಟ್ರೈಕ್‌ನಲ್ಲಿದ್ದ ಬ್ಯಾಟರ್‌ನನ್ನು ಬೌಲಿಂಗ್ ಮಾಡುವ ಮುನ್ನ ಬೌಲರ್ ರನೌಟ್ ಮಾಡುವಂತಿಲ್ಲ:
ಈ ಮೊದಲು, ಸ್ಟ್ರೈಕ್‌ನಲ್ಲಿದ್ದ ಬ್ಯಾಟರ್, ವಿಕೆಟ್ ಬಿಟ್ಟು ಮುಂದೆ ಬಂದು ನಿಂತರೆ, ಬೌಲರ್ ನೇರವಾಗಿ ವಿಕೆಟ್‌ಗೆ ಥ್ರೋ ಮಾಡಿ ರನೌಟ್ ಮಾಡಲು ಅವಕಾಶ ನೀಡಲಾಗಿತ್ತು. ಆದರೆ ಇದೀಗ ಆ ನಿಯಮವನ್ನು ರದ್ದುಪಡಿಸಲಾಗಿದ್ದು, ಹಾಗೇನಾದರೂ ಬೌಲರ್ ಪ್ರಯತ್ನಿಸಿದರೆ ಅಂಪೈರ್ ಅದನ್ನು ಡೆಡ್ ಬಾಲ್ ಎಂದು ಘೋಷಿಸಲಿದ್ದಾರೆ.
ಇನ್ನುಳಿದಂತೆ ಕಳೆದ ಜನವರಿ 2022ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಪರಿಚಯಿಸಲಾಗಿದ್ದ ಪೆನಾಲ್ಟಿ ನಿಯಮ(ಬೌಲಿಂಗ್ ತಂಡವು ನಿಗದಿತ ಸಮಯದಲ್ಲಿ ಓವರ್ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಕಂಡು ಬಂದಾಗ ಇನ್ನುಳಿದ ಓವರ್‌ಗಳಲ್ಲಿ ಫೀಲ್ಡರ್‌ನನ್ನು ಸರ್ಕಲ್‌ನೊಳಗೆ ಕರೆಸಿಕೊಳ್ಳುವ ನಿಯಮ)ವನ್ನು ಇದೀಗ ಏಕದಿನ ಕ್ರಿಕೆಟ್‌ಗೂ ವಿಸ್ತರಿಸಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.