ಅಯೋಧ್ಯೆಯಲ್ಲಿ ರಾಮ ಮಂದಿರ: ಐತಿಹಾಸಿಕ ಕ್ಷಣವೆಂದು ಬಣ್ಣಿಸಿದ ಪಾಕ್ ಕ್ರಿಕೆಟಿಗ..!
ಅಯೋಧ್ಯಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕೊಂಡಾಡಿದ್ದಾರೆ. ಯಾರು ಅ ಕ್ರಿಕೆಟಿಗ? ಏನಂದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಬೆಂಗಳೂರು(ಆ.06): ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಬುಧವಾರ(ಆ.05)ದಂದು ಗುದ್ದಲಿ ಪೂಜೆ ನೆರವೇರಿಸಿದರು. ಇಡೀ ದೇಶವೇ ಈ ಸಂಭ್ರಮಕ್ಕೆ ಸಾಕ್ಷಿಯಾಯಿತು. ಇನ್ನು ನೆರೆಯ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕೂಡಾ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಹೌದು, ನೀವು ಓದುತ್ತಿರುವುದು ಅಕ್ಷರಶಃ ನಿಜ.ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದನೀಶ್ ಕನೇರಿಯಾ ರಾಮ ಮಂದಿರದ ಭೂಮಿ ಪೂಜೆಯನ್ನು ಜಗತ್ತಿನಾದ್ಯಂತ ಇರುವ ಹಿಂದುಗಳ ಪಾಲಿಗೆ ಐತಿಹಾಸಿಕ ದಿನವೆಂದು ಬಣ್ಣಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಎರಡನೇ ಹಿಂದು ಎನಿಸಿಕೊಂಡಿದ್ದ ಕನೇರಿಯಾ, ಧರ್ಮದ ಕಾರಣದಿಂದಾಗಿ ತಮ್ಮನ್ನು ಟಾರ್ಗೆಟ್ ಮಾಡಲಾಯಿತು ಎಂದು ಈ ಹಿಂದೆ ತಮ್ಮ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದರು.
ರಾಮ ಮಂದಿರಕ್ಕೆ ಅಡಿಗಲ್ಲು ಹಾಕಿದ ವಿಚಾರದ ಬಗ್ಗೆ ಬುಧವಾರ ರಾತ್ರಿ ಟ್ವೀಟ್ ಮಾಡಿದ ಕನೇರಿಯಾ, ಜಗತ್ತಿನಾದ್ಯಂತ ನೆಲೆಸಿರುವ ಹಿಂದುಗಳ ಪಾಲಿಗಿಂದು ಐತಿಹಾಸಿಕ ದಿನ. ಶ್ರೀರಾಮ ಪ್ರಭುವೇ ನಮಗೆಲ್ಲ ಆದರ್ಶ ಎಂದು ಟ್ವೀಟ್ ಮಾಡಿದ್ದಾರೆ.
ರಾಹುಲ್ ರೋಷನ್ ಎನ್ನುವವರು ಸೇಫ್ ಆಗಿರಿ ಎಂದು ಟ್ವೀಟ್ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಕನೇರಿಯಾ, ನಾವು ಸೇಫ್ ಆಗಿಯೇ ಇದ್ದೇವೆ. ನಮ್ಮ ಧಾರ್ಮಿಕ ನಂಬಿಕೆಗಳು ಯಾರಿಗೂ ಯಾವುದೇ ತೊಂದರೆಯನ್ನುಂಟು ಮಾಡಿಲ್ಲ. ಪ್ರಭು ಶ್ರೀರಾಮ ನಮಗೆ ಹೇಗೆ ಒಗ್ಗಟ್ಟು ಹಾಗೂ ಬ್ರಾತೃತ್ವದಿಂದ ಬದುಕಬೇಕು ಎನ್ನುವುದನ್ನು ಕಲಿಸಿದ್ದಾರೆ ಎಂದು ಹೇಳಿದ್ದಾರೆ.
ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಕನೇರಿಯಾ, ಶ್ರೀರಾಮ ತಮ್ಮ ಚಾರಿತ್ರ್ಯದ ಗುಣದಿಂದಾಗಿ ನಮ್ಮ ಮನದಲ್ಲಿ ಉಳಿದಿದ್ದಾನೆಯೇ ಹೊರತು ಕೇವಲ ಹೆಸರಿನಿಂದಲ್ಲ. ಅವನು ದುಷ್ಟರ ವಿರುದ್ಧ ಗೆಲುವಿನ ಸಂಕೇತ. ಇಡೀ ಜಗತ್ತೇ ಸಂತೋಷದಿಂದ ಇಂದು ತುಂಬಿ ತುಳುಕುತ್ತಿದೆ. ಇಂದು ನನ್ನ ಪಾಲಿಗೆ ಸಂತೃಪ್ತಿಯ ಕ್ಷಣ. ಜೈ ಶ್ರೀರಾಮ್ ಎಂದು ಟ್ವೀಟ್ ಮಾಡಿದ್ದಾರೆ.
39 ವರ್ಷದ ದನೀಶ್ ಕನೇರಿಯಾ ಪಾಕಿಸ್ತಾನ ಪರ 61 ಟೆಸ್ಟ್ ಹಾಗೂ 18 ಏಕದಿನ ಪಂದ್ಯಗಳನ್ನಾಡಿದ್ದಾರೆ. ಪಾಕಿಸ್ತಾನ ತಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ. ಬಿಸಿಸಿಐ ನೆರವನ್ನು ಎದುರು ನೋಡುತ್ತಿರುವುದಾಗಿ ಕೆಲವು ದಿನಗಳ ಹಿಂದೆ ಹೇಳಿದ್ದರು. ಈ ವಿಚಾರವನ್ನು ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್ ಅಖ್ತರ್ ಕೂಡಾ ಅನುಮೋದಿಸಿದ್ದರು.
ಈ ಸುದ್ದಿಯನ್ನು ಇಂಗ್ಲೀಷ್‌ನಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ