ಅಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ Rodney Marsh ಮಾರ್ಶ್ ಇನ್ನಿಲ್ಲ, ಹೃದಯಾಘಾತದಿಂದ ಕೊನೆಯುಸಿರು..!
* ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ರಾಡ್ನಿ ಮಾರ್ಶ್ ಹೃದಯಾಘಾತದಿಂದ ನಿಧನ
* ಆಸ್ಟ್ರೇಲಿಯಾ ಪರ 96 ಟೆಸ್ಟ್ ಪಂದ್ಯಗಳನ್ನಾಡಿದ್ದ ವಿಕೆಟ್ ಕೀಪರ್ ಬ್ಯಾಟರ್
* ರಾಡ್ನಿ ಮಾರ್ಶ್ ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಮೊದಲ ವಿಕೆಟ್ ಕೀಪರ್
ಮೆಲ್ಬೊರ್ನ್(ಮಾ.04): ಆಸ್ಟ್ರೇಲಿಯಾ ಕ್ರಿಕೆಟ್ (Australia Cricket Team) ಕಂಡ ದಿಗ್ಗಜ ಆಟಗಾರ ರಾಡ್ನಿ ಮಾರ್ಶ್ (Rodney Marsh) ಶುಕ್ರವಾರ(ಮಾ.04)ವಾದ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ರಾಡ್ ಮಾರ್ಶ್ ಅವರು ಹೃದಯಾಘಾತದಿಂದ (Heart Attack) ಕೊನೆಯುಸಿರೆಳೆದಿದ್ದಾರೆ. ಆಸ್ಟ್ರೇಲಿಯಾದ ದಿಗ್ಗಜ ವಿಕೆಟ್ ಕೀಪರ್ ರಾಡ್ ಅವರಿಗೆ 74 ವರ್ಷ ವಯಸ್ಸಾಗಿತ್ತು. ಕ್ವೀನ್ಸ್‌ಲ್ಯಾಂಡ್‌ನಲ್ಲಿ ದೇಣಿಗೆ ಸಂಗ್ರಹಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಡ್ ಮಾರ್ಶ್ ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ.
1970ರಿಂದ 1984ರ ಅವಧಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರ 96 ಟೆಸ್ಟ್ ಪಂದ್ಯಗಳನ್ನಾಡಿದ್ದ ದ ಸ್ಪೋರ್ಟ್ ಆಸ್ಟ್ರೇಲಿಯಾ ಹಾಲ್ ಆಫ್ ಫೇಮ್ ಪ್ರಶಸ್ತಿ ವಿಜೇತ ರಾಡ್ ಮಾರ್ಶ್, ಅಡಿಲೇಡ್‌ನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ರಾಡ್ ಮಾರ್ಶ್ ವಿಕೆಟ್ ಹಿಂದೆ ನಿಂತು ಬರೋಬ್ಬರಿ 355 ಬಲಿ ಪಡೆದಿದ್ದಾರೆ. ಅದರಲ್ಲೂ ಆಸೀಸ್ ವೇಗದ ಬೌಲರ್ ಡೇನಿಸ್ ಲಿಲ್ಲಿ (Dennis Lillee) ಹಾಗೂ ರಾಡ್ ಮಾರ್ಶ್ ಉತ್ತಮ ಹೊಂದಾಣಿಕೆ ಹೊಂದಿದ್ದರು. ಹೀಗಾಗಿಯೇ ಡೇನಿಸ್ ಲಿಲ್ಲಿ ಬೌಲಿಂಗ್‌ನಲ್ಲಿಯೇ ರಾಡ್ ಮಾರ್ಶ್ ವಿಕೆಟ್ ಹಿಂದೆ ನಿಂತು 95 ವಿಕೆಟ್ ಪಡೆದಿದ್ದರು. ಬೌಲಿಂಗ್ ಹಾಗೂ ವಿಕೆಟ್ ಕೀಪಿಂಗ್‌ನಲ್ಲಿ ಲಿಲ್ಲಿ ಹಾಗೂ ಮಾರ್ಶ್ ಅತ್ಯಂತ ಯಶಸ್ವಿ ಜೋಡಿ ಎನಿಸಿಕೊಂಡಿದೆ.
ಇದಷ್ಟೇ ಅಲ್ಲದೇ ರಾಡ್ ಮಾರ್ಶ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರ 92 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಕೊನೆಯದಾಗಿ 1984ರ ಫೆಬ್ರವರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ತಮ್ಮ ವರ್ಣರಂಜಿತ ಕ್ರಿಕೆಟ್‌ಗೆ ರಾಡ್ ಮಾರ್ಶ್ ತೆರೆ ಎಳೆದಿದ್ದರು. ಎಡಗೈ ಬ್ಯಾಟರ್ ಆಗಿದ್ದ ರಾಡ್ ಮಾರ್ಶ್, ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ (Test Cricket) ಶತಕ ಬಾರಿಸಿದ ಮೊದಲ ವಿಕೆಟ್ ಕೀಪರ್ ಎನ್ನುವ ದಾಖಲೆಯನ್ನು ಬರೆದಿದ್ದರು. ಅಂತಿಮವಾಗಿ ರಾಡ್ ಮಾರ್ಶ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರು ಶತಕಗಳನ್ನು ಬಾರಿಸಿದ್ದರು.
Virat Kohli 100th Test: ನೂರನೇ ಟೆಸ್ಟ್ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ
ರಾಡ್ ಮಾರ್ಶ್ ನಿಧನಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಟ್ವೀಟ್ ಮೂಲಕ ಕಂಬನಿ ಮಿಡಿದಿದೆ. ರಾಡ್ ಮಾರ್ಶ್ ನಿಧನದ ಸುದ್ದಿ ನಮಗೆಲ್ಲ ತೀವ್ರ ದುಃಖವನ್ನುಂಟು ಮಾಡಿದೆ. ಅತ್ಯದ್ಭುತ ವಿಕೆಟ್ ಕೀಪರ್ ಹಾಗೂ ಸ್ಪೋಟಕ ಬ್ಯಾಟರ್ ಆಗಿದ್ದ ರಾಡ್ ಮಾರ್ಶ್, ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಅಸಾಧಾರಣ ಕಾಣಿಕೆ ನೀಡಿದ್ದರು. ಅವರ ನಿಧನವನ್ನು ಕ್ರಿಕೆಟ್ ಜಗತ್ತು ಮಿಸ್ ಮಾಡಿಕೊಳ್ಳಲಿದೆ. ರಾಡ್ ಅವರ ಪತ್ನಿ ರಾಸ್, ಮಕ್ಕಳಾದ ಪೌಲ್, ಡ್ಯಾನ್, ಜೇಮಿ ಹಾಗೂ ಅವರ ಅಪಾರ ಸ್ನೇಹಿತರಿಗೆ ಈ ನೋವು ಮರೆಯುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಟ್ವೀಟ್ ಮೂಲಕ ಸಂತಾಪ ಸೂಚಿಸಿದೆ.
ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ರಾಡ್ ಮಾರ್ಶ್, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನಲ್ಲಿ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗಳನ್ನು (National Cricket Academies) ಮುನ್ನಡೆಸಿದ್ದರು. ಇದಾದ ಬಳಿಕ ದುಬೈನಲ್ಲಿ (Dubai) ಸ್ಥಾಪಿಸಲಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ(ಐಸಿಸಿ) ವಿಶ್ವ ಕೋಚಿಂಗ್ ಅಕಾಡೆಮಿಯ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದರು. ಇನ್ನು 2014ರಲ್ಲಿ ರಾಡ್ ಮಾರ್ಶ್, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದರು. ಎರಡು ವರ್ಷಗಳ ಕಾಲ ರಾಡ್ ಮಾರ್ಶ್ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದರು. 1985ರಲ್ಲಿ ರಾಡ್ ಮಾರ್ಶ್ ಅವರಿಗೆ ಸ್ಪೋರ್ಟ್ ಅಸ್ಟ್ರೇಲಿಯಾ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.