Virat Kohli 100th Test: ನೂರನೇ ಟೆಸ್ಟ್ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ
* 100ನೇ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ
* ಭಾರತ ಪರ 100ನೇ ಟೆಸ್ಟ್ ಆಡುತ್ತಿರುವ 12ನೇ ಆಟಗಾರ ವಿರಾಟ್ ಕೊಹ್ಲಿ
* ಅಪರೂಪದ ದಾಖಲೆ ಬರೆಯಲು ಸಜ್ಜಾದ ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್
ಮೊಹಾಲಿ(ಮಾ.04): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 100ನೇ ಟೆಸ್ಟ್ ಪಂದ್ಯದ ಸಂಭ್ರಮದಲ್ಲಿದ್ದಾರೆ. ಶುಕ್ರವಾರ ಮೊಹಾಲಿಯಲ್ಲಿ ಆರಂಭವಾಗುವ ಶ್ರೀಲಂಕಾ ವಿರುದ್ಧದ ಪಂದ್ಯ ಕೊಹ್ಲಿ ಪಾಲಿಗೆ 100ನೇ ಟೆಸ್ಟ್ ಆಗಲಿದೆ. 2011ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿರಿಸಿದ್ದ ಕೊಹ್ಲಿ ಈವರೆಗೆ 99 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 100ನೇ ಟೆಸ್ಟ್ ಆಡುವ ಮೂಲಕ ಈ ಮೈಲಿಗಲ್ಲು ತಲುಪಲಿರುವ ಭಾರತದ 12ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಇದಕ್ಕೂ ಮೊದಲು ಗವಾಸ್ಕರ್, ವೆಂಗ್‌ಸರ್ಕಾರ್, ಕಪಿಲ್ ದೇವ್, ತೆಂಡುಲ್ಕರ್, ಕುಂಬ್ಳೆ, ದ್ರಾವಿಡ್, ಗಂಗೂಲಿ, ಲಕ್ಷ್ಮಣ್, ಸೆಹ್ವಾಗ್, ಹರ್ಭಜನ್ ಹಾಗೂ ಇಶಾಂತ್ ಶರ್ಮಾ 100 ಪಂದ್ಯಗಳನ್ನು ಆಡಿದ್ದಾರೆ. ಟೀಂ ಇಂಡಿಯಾದ ಹಲವು ದಿಗ್ಗಜ ಮಾಜಿ ಕ್ರಿಕೆಟಿಗರು ವಿರಾಟ್ ಕೊಹ್ಲಿಯವರ ನೂರನೇ ಟೆಸ್ಟ್ ಪಂದ್ಯಕ್ಕೆ ಶುಭ ಹಾರೈಸಿದ್ದಾರೆ.
8000 ರನ್ ಹೊಸ್ತಿಲಲ್ಲಿ ಕೊಹ್ಲಿ
ಕೊಹ್ಲಿ ಇದುವರೆಗೆ 99 ಪಂದ್ಯಗಳ 168 ಇನ್ನಿಂಗ್ಸ್‌ಗಳಲ್ಲಿ 7962 ರನ್ ಕಲೆ ಹಾಕಿದ್ದು, 8000 ರನ್ ಮೈಲಿಗಲ್ಲು ತಲುಪಲು ಇನ್ನು 38 ರನ್ ಬೇಕಿದೆ. 8000 ರನ್ ಕ್ಲಬ್‌ಗೆ ಸೇರಲಿರುವ ಭಾರತದ 6ನೇ ಹಾಗೂ ಒಟ್ಟಾರೆ 32ನೇ ಆಟಗಾರ ಆಗಲಿದ್ದಾರೆ. ಸಚಿನ್, ದ್ರಾವಿಡ್, ಗವಾಸ್ಕರ್, ಸೆಹ್ವಾಗ್ ಹಾಗೂ ಲಕ್ಷ್ಮಣ್ ಟೆಸ್ಟ್‌ನಲ್ಲಿ 8 ಸಾವಿರ ರನ್ ಗಳಿಸಿದ್ದಾರೆ.
ಭಾರತ ಹಾಗೂ ಲಂಕಾ ನಡುವಿನ ಸರಣಿಯೊಂದರಲ್ಲಿ ಗರಿಷ್ಠ ರನ್ ಬಾರಿಸಿದ ದಾಖಲೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 2017-18ರ ಲಂಕಾ ಪ್ರವಾಸದಲ್ಲಿ ಭಾರತ ತಂಡವು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ 5 ಇನಿಂಗ್ಸ್‌ಗಳಲ್ಲಿ 152.5ರ ಬ್ಯಾಟಿಂಗ್ ಸರಾಸರಿಯಲ್ಲಿ 3 ಶತಕ ಹಾಗೂ ಒಂದು ಅರ್ಧಶತಕ ಸಹಿತ 610 ರನ್ ಬಾರಿಸಿದ್ದಾರೆ.
ನಾನು 100 ಟೆಸ್ಟ್ ಆಡುತ್ತೇನೆಂದು ಒಮ್ಮೆಯೂ ಭಾವಿಸಿರಲಿಲ್ಲ. ಇದೊಂದು ಸುದೀರ್ಘ ಪಯಣ. ಈ ಮೈಲಿಗಲ್ಲು ತಲುಪಲು ಸಾಧ್ಯವಾಗಿದ್ದಕ್ಕೆ ಸಂತೋಷವಿದೆ. ಫಿಟ್ನೆಸ್ ಕಾಯ್ದುಕೊಳ್ಳಲು ತುಂಬಾ ಕಷ್ಟಪಟ್ಟಿದ್ದೇನೆ. 100ನೇ ಟೆಸ್ಟ್ ನನಗೆ, ನನ್ನ ಕುಟುಂಬ ಹಾಗೂ ಕೋಚ್‌ಗೆ ಶ್ರೇಷ್ಠ ಕ್ಷಣ’
-ವಿರಾಟ್ ಕೊಹ್ಲಿ
ತವರಿನಲ್ಲಿ ಲಂಕಾ ವಿರುದ್ಧ ಸೋತಿಲ್ಲ ಟೀಂ ಇಂಡಿಯಾ
ಭಾರತ ತಂಡ ಲಂಕಾ ವಿರುದ್ಧ ತನ್ನ ಅಜೇಯ ಓಟ ಮುಂದುವರಿಸುವ ಉತ್ಸಾಹದಲ್ಲಿದೆ. ತಂಡ ಈ ವರೆಗೂ ತವರಿನಲ್ಲಿ ಲಂಕಾ ವಿರುದ್ಧ 20 ಟೆಸ್ಟ್ ಆಡಿದ್ದು, 11ರಲ್ಲಿ ಜಯಗಳಿಸಿ 9ರಲ್ಲಿ ಡ್ರಾ ಸಾಧಿಸಿದೆ. ಅಲ್ಲದೇ ಲಂಕಾ ವಿರುದ್ಧ ಒಟ್ಟು 20 ಗೆಲುವು ಸಾಧಿಸಿರುವ ಭಾರತ, ಇನ್ನೊಂದು ಗೆಲುವು ಕಂಡರೆ 21 ಗೆಲುವು ಸಾಧಿಸಿದ ಮೊದಲ ತಂಡ ಎನಿಸಲಿದೆ. ಲಂಕಾ ವಿರುದ್ಧ ಪಾಕಿಸ್ತಾನ ಸಹ 20 ಟೆಸ್ಟ್‌ಗಳನ್ನು ಗೆದ್ದಿದೆ.
ಗರಿಷ್ಠ ವಿಕೆಟ್: ಅಶ್ವಿನ್‌ಗೆ ಕಪಿಲ್ ದಾಖಲೆ ಮುರಿಯುವ ಗುರಿ
84 ಟೆಸ್ಟ್‌ಗಳಲ್ಲಿ 430 ವಿಕೆಟ್ ಉರುಳಿಸಿರುವ ಆರ್.ಅಶ್ವಿನ್, ಇನ್ನು 5 ವಿಕೆಟ್ ಕಬಳಿಸಿದರೆ ಕಪಿಲ್ ದೇವ್(434 ವಿಕೆಟ್)ರನ್ನು ಹಿಂದಿಕ್ಕಿ ಅತಿಹೆಚ್ಚು ವಿಕೆಟ್ ಕಬಳಿಸಿದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲಿದ್ದಾರೆ. ಕುಂಬ್ಳೆ 619 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಈ ಸರಣಿಯಲ್ಲಿ ಅಶ್ವಿನ್ 10 ವಿಕೆಟ್ ಕಿತ್ತರೆ, ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಲಿದ್ದಾರೆ. ಹ್ಯಾಡ್ಲಿ(431), ಹೆರಾತ್ (433), ಕಪಿಲ್ (434), ಸ್ಟೈನ್(439) ಅಶ್ವಿನ್‌ಗಿಂತ ಮುಂದಿದ್ದಾರೆ.