ಮುಂಬೈ(ಸೆ.24): ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್(59 ವರ್ಷ) ಮುಂಬೈನಲ್ಲಿಂದು(ಸೆ.24) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಐಪಿಎಲ್ ಟೂರ್ನಿಗೆ ವೀಕ್ಷಕ ವಿವರಣೆ ಮಾಡಲು ಆಸೀಸ್ ಮಾಜಿ ಬ್ಯಾಟ್ಸ್‌ಮನ್‌ ಮುಂಬೈಗೆ ಬಂದಿದ್ದರು.

ಹೌದು, ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯಲ್ಲಿ ಐಪಿಎಲ್ ಕಾಮೆಂಟೇಟರಿ ಮಾಡುತ್ತಿದ್ದ ಡೀನ್‌ ಜೋನ್ಸ್ ಕ್ರಿಕೆಟ್ ಜಗತ್ತು ಕಂಬನಿ ಮಿಡಿದಿದೆ. 1984ರಲ್ಲಿ ಆಸ್ಟ್ರೇಲಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಜೋನ್ಸ್ 52 ಟೆಸ್ಟ್ ಹಾಗೂ 192 ಏಕದಿನ ಪಂದ್ಯಗಳನ್ನಾಡಿ 1992ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಡೀನ್ ಜೋನ್ಸ್ ಕೆಲಕಾಲ ಕೋಚ್‌ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಬಳಿಕ ವೀಕ್ಷಕ ವಿವರಣೆಗಾರರಾಗಿ ಮುಂದುವರೆದಿದ್ದರು.  

ರಸ್ತೆ ಬದಿ ಪಾನಿಪೂರಿ ಮಾಡುತ್ತಿದ್ದ ಹುಡುಗ, ಐಪಿಎಲ್‌ ಪಾದಾರ್ಪಣೆ ವೇಳೆ ಧೋನಿಗೆ ಕೈ ಮುಗಿದ..!

ಭಾರತದ ಖ್ಯಾತ ವೀಕ್ಷಕ ವಿವರಣೆಗಾರ ಹರ್ಷಾ ಬೋಗ್ಲೆ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಈ ವಿಚಾರವನ್ನು ಖಚಿತಪಡಿಸಿದ್ದು, ನನಗೆ ಮಾತೇ ಹೊರಡುತ್ತಿಲ್ಲ, ಆಘಾತಕ್ಕೊಳಗಾಗಿದ್ದೇನೆ. ಈ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಭಾರತದ ಕ್ರಿಕೆಟ್ ವೀಕ್ಷಕರ ಪಾಲಿಗೆ ಡೀನ್ಸ್ ಜೋನ್ಸ್ ಚಿರಪರಿಚಿತ ಹೆಸರು. ತಮ್ಮ ಅಮೋಘವಾದ ವಾಕ್‌ಚಾತುರ್ಯ ಹಾಗೂ ಒಳನೋಟದ ವೀಕ್ಷಕ ವಿವರಣೆಯ ಮೂಲಕ ಅಭಿಮಾನಿಗಳ ಮನಗೆದ್ದಿದ್ದರು. ಇನ್ನು ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲೂ ಜೋನ್ಸ್ ತಮ್ಮ ಕೈಚಳಕ ತೋರಿಸಿದ್ದರು.