ಮ್ಯಾಂಚೆಸ್ಟರ್(ಸೆ.12): ಜೋಸ್ ಹೇಜಲ್‌ವುಡ್‌ ಹಾಗೂ ಆಡಂ ಜಂಪಾ ಅವರ ಪರಿಣಾಮಕಾರಿ ದಾಳಿಯ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 19 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಸೇಡು ತೀರಿಸಿಕೊಂಡಿದೆ.

ಹೌದು, 2019ರ ಐಸಿಸಿ ಏಕದಿನ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಮುಗ್ಗರಿಸಿ ಫೈನಲ್ ಪ್ರವೇಶಿಸುವ ಅವಕಾಶವನ್ನು ಕೈಚೆಲ್ಲಿತ್ತು. ಇದಾಗಿ ಸುಮಾರು ಒಂದು ವರ್ಷಗಳ ಬಳಿಕ ಉಭಯ ತಂಡಗಳು ಮೊದಲ ಬಾರಿಗೆ ಏಕದಿನ ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗಿದ್ದವು. 

ಆಸ್ಟ್ರೆಲಿಯಾದ ನೀಡಿದ್ದ 296 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಜೇಸನ್ ರಾಯ್(3) ಹಾಗೂ ಜೋ ರೂಟ್(1) ಎರಡಂಕಿ ಮೊತ್ತ ಕಲೆ ಹಾಕಲು ವಿಫಲವಾದರು. ಇನ್ನು ನಾಯಕ ಇಯಾನ್ ಮಾರ್ಗನ್(23) ಹಾಗೂ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರನ್ನು ಆಡಂ ಜಂಪಾ ಪೆವಿಲಿಯನ್ ದಾರಿ ತೋರಿಸಿದರು. 

ವ್ಯರ್ಥವಾದ ಬಿಲ್ಲಿಂಗ್ಸ್ ಬೇರ್‌ಸ್ಟೋವ್ ಹೋರಾಟ: ಬೃಹತ್ ಮೊತ್ತ ಬೆನ್ನತ್ತಿದ್ದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಒಂದು ಹಂತದಲ್ಲಿ 57 ರನ್‌ಗಳಿಗೆ 4  ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖಮಾಡಿತ್ತು. ಆದರೆ 5ನೇ ವಿಕೆಟ್‌ಗೆ ಜತೆಯಾದ ಜಾನಿ ಬೇರ್‌ಸ್ಟೋವ್(84) ಹಾಗೂ ಸ್ಯಾಮ್ ಬಿಲ್ಲಿಂಗ್ಸ್(118) ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಬೇರ್‌ಸ್ಟೋವ್ ತಮ್ಮ ಆಟಕ್ಕೆ ವ್ಯತಿರಿಕ್ತ ಎನ್ನುವಂತೆ ಮಂದಗತಿಯಲ್ಲಿ ಬ್ಯಾಟ್ ಬೀಸಿದರೆ, ಬಿಲ್ಲಿಂಗ್ಸ್ ವೇಗವಾಗಿಯೇ ಶತಕ ಸಿಡಿಸಿದರು. ಬೇರ್‌ಸ್ಟೋವ್ ವಿಕೆಟ್ ಪತನದ ಬಳಿಕ ಮತ್ತೆ ಇಂಗ್ಲೆಂಡ್ ನಾಟಕೀಯ ಕುಸಿತ ಕಂಡಿತು. ಅಂತಿಮವಾಗಿ ಇಂಗ್ಲೆಂಡ್ 9 ವಿಕೆಟ್ ಕಳೆದುಕೊಂಡು 275 ರನ್ ಗಳಿಸಲಷ್ಟೇ ಶಕ್ತವಾಯಿತು.

ಬಯಲಾಯ್ತು ಸೀಕ್ರೇಟ್: KXIP ಮ್ಯಾಕ್ಸ್‌ವೆಲ್ ದುಬಾರಿ ಮೊತ್ತಕ್ಕೆ ಖರೀದಿಸಿದ್ದೇಕೆ..?

ಇಂಗ್ಲೆಂಡ್ ಪರ ಜಾನಿ ಬೇರ್‌ಸ್ಟೋವ್(84), ಇಯಾನ್ ಮಾರ್ಗನ್(84), ಸ್ಯಾಮ್ ಬಿಲ್ಲಿಂಗ್ಸ್(118) ಹಾಗೂ ಕ್ರಿಸ್ ವೋಕ್ಸ್(10) ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ.
ಅತ್ಯಂತ ಶಿಸ್ತುಬದ್ಧ ದಾಳಿ ನಡೆಸಿದ ಜೋಸ್ ಹೇಜಲ್‌ವುಡ್ 10 ಓವರ್‌ಗಳಲ್ಲಿ 3 ಮೇಡನ್ ಸಹಿತ 26 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಜಂಪಾ 55 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇನ್ನು ಮಿಚೆಲ್ ಮಾರ್ಷ್ ಹಾಗೂ ಕಮಿನ್ಸ್ ತಲಾ ಒಂದೊಂದು ವಿಕೆಟ್ ಪಡೆದರು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿತು. ತಂಡ 13 ರನ್‌ ಗಳಿಸುವಷ್ಟರಲ್ಲಿ ಡೇವಿಡ್ ವಾರ್ನರ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಆ ಬಳಿಕ ಸಂಘಟಿತ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ಒಂದು ಹಂತದಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 100 ರನ್ ಬಾರಿಸಿತ್ತು. ಆದರೆ ಆಸೀಸ್ ತನ್ನ ಖಾತೆಗೆ ಇನ್ನು 25 ರನ್ ಸೇರಿಸುವಷ್ಟರಲ್ಲಿ ಮತ್ತೆರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಆಸರೆಯಾದ ಮ್ಯಾಕ್ಸಿ-ಮಾರ್ಷ್: 

ತಂಡದ ಮೊತ್ತ ಕೇವಲ 125 ರನ್‌ಗಳಾಗುವಷ್ಟರಲ್ಲಿ ಆಸ್ಟ್ರೇಲಿಯಾದ ಅರ್ಧ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದ್ದರು. ಈ ವೇಳೆ ಆರನೇ ವಿಕೆಟ್‌ಗೆ ಜತೆಯಾದ ಆಲ್ರೌಂಡರ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್(77) ಹಾಗೂ ಮಿಚೆಲ್ ಮಾರ್ಷ್(73) ಶತಕದ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ಮುನ್ನೂರರ ಸಮೀಪ ಕೊಂಡ್ಯೊಯ್ದರು.

ಜೋಸ್ ಹ್ಯಾಜಲ್‌ವುಡ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಇದೀಗ ಎರಡನೇ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ಸೆಪ್ಟೆಂಬರ್ 13ರಂದು ನಡೆಯಲಿದೆ.