ಖ್ಯಾತ ಕ್ರಿಕೆಟಿಗ ಡೇಮಿಯನ್‌ ಮಾರ್ಟಿನ್‌ ಅವರು ಮೆನಿಂಜೈಟಿಸ್‌ನಿಂದ ಬಳಲುತ್ತಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋಮಾಗೆ ಜಾರಿದ್ದ ಅವರ ಆರೋಗ್ಯದಲ್ಲಿ ಸಕಾರಾತ್ಮಕ ಲಕ್ಷಣಗಳು ಕಂಡುಬರುತ್ತಿವೆ ಎಂದು ಮಾಜಿ ಸಹ ಆಟಗಾರ ಆಡಮ್ ಗಿಲ್‌ಕ್ರಿಸ್ಟ್‌ ಮಾಹಿತಿ ನೀಡಿದ್ದಾರೆ.

ಬೆಂಗಳೂರು (ಜ.1): 90ರ ದಶಕದಲ್ಲಿ ಆಸ್ಟ್ರೇಲಿಯಾ ತಂಡದ ಕ್ರಿಕೆಟ್‌ ಕಂಡವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುತ್ತಿದ್ದ ಡೇಮಿಯನ್‌ ಮಾರ್ಟಿನ್‌ ಅನ್ನೋ ಹೆಸರನ್ನು ಮರೆಯೋಕೆ ಸಾಧ್ಯವೇ ಇಲ್ಲ. ಡೇಮಿಯನ್‌ ಮಾರ್ಟಿನ್‌ ಒಮ್ಮೆ ಕ್ರೀಸ್‌ ಕಚ್ಚಿಕೊಂಡು ನಿಂತು ಬ್ಯಾಟಿಂಗ್‌ ಆರಂಭಿಸಿದರೆ, ಅವರನ್ನು ಔಟ್‌ ಮಾಡುವುದೇ ಹರಸಾಹಸವಾಗುತ್ತಿತ್ತು. ನಿವೃತ್ತಿಯಾದ ಬಳಿಕ ಎಲ್ಲಿಯೂ ಕಾಣಿಸಿಕೊಳ್ಳದೆ ತೆರೆಮರೆಗೆ ಸರಿದುಹೋಗಿದ್ದ ಡೇಮಿಯನ್‌ ಮಾರ್ಟಿನ್‌ ಈಗ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೋಮಾಗೆ ಜಾರಿದ್ದಾರೆ ಎಂದು ಗಿಲ್‌ಕ್ರಿಸ್ಟ್‌ ತಿಳಿಸಿದ್ದಾರೆ. ಕ್ವೀನ್ಸ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಮೆನಿಂಜೈಟಿಸ್‌ನೊಂದಿಗೆ ಹೋರಾಡುತ್ತಿರುವ ಡೇಮಿಯನ್ ಮಾರ್ಟಿನ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ಆಡಮ್ ಗಿಲ್‌ಕ್ರಿಸ್ಟ್ ಆರೋಗ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇತ್ತೀಚಿನ ಪರೀಕ್ಷೆಗಳು ಚೇತರಿಕೆಯ ಕೆಲವು ಸಕಾರಾತ್ಮಕ ಲಕ್ಷಣಗಳನ್ನು ತೋರಿಸಿವೆ ಎಂದಿದ್ದಾರೆ.

ಆಸ್ಟ್ರೇಲಿಯಾದ ಕ್ರಿಕೆಟ್ ಐಕಾನ್ ಆಡಮ್ ಗಿಲ್‌ಕ್ರಿಸ್ಟ್ ತಮ್ಮ ಮಾಜಿ ಸಹ ಆಟಗಾರ ಡೇಮಿಯನ್ ಮಾರ್ಟಿನ್ ಮೆನಿಂಜೈಟಿಸ್‌ನಿಂದ ಬಳಲುತ್ತಿರುವ ಬಗ್ಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಾ, 54 ವರ್ಷದ ಡೇಮಿಯನ್ ಮಾರ್ಟಿನ್ "ಇನ್ನೂ ಆಸ್ಪತ್ರೆಯಲ್ಲಿದ್ದಾರೆ ಮತ್ತು ಅವರು ನಡೆಸುತ್ತಿರುವ ವಿವಿಧ ಪರೀಕ್ಷೆಗಳಿಂದ ಕೆಲವು ಸಕಾರಾತ್ಮಕ ಲಕ್ಷಣಗಳು ಹೊರಬರುತ್ತಿವೆ" ಎಂದಿದ್ದಾರೆ.

2000ದ ದಶಕದಲ್ಲಿ ಆಸ್ಟ್ರೇಲಿಯಾದ ಅತ್ಯಂತ ಪ್ರತಿಷ್ಠಿತ ಕ್ರಿಕೆಟಿಗರಲ್ಲಿ ಒಬ್ಬರಾದ ಮತ್ತು ಟೀಮ್‌ನ ಸುವರ್ಣ ಯುಗದ ಭಾಗವಾಗಿದ್ದ ಮಾರ್ಟಿನ್, ಬಾಕ್ಸಿಂಗ್ ಡೇ ದಿನದಂದು ಅನಾರೋಗ್ಯಕ್ಕೆ ಒಳಗಾದ ನಂತರ ಕ್ವೀನ್ಸ್‌ಲ್ಯಾಂಡ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರು ಮೆನಿಂಜೈಟಿಸ್‌ನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಮಾಜಿ ಬ್ಯಾಟ್ಸ್‌ಮನ್ ಅವರನ್ನು ಕೋಮಾದಲ್ಲಿ ಇರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Scroll to load tweet…

ಚೇತರಿಕೆ ಕಾಣಬಹುದು ಎಂದ ಗಿಲ್‌ಕ್ರಿಸ್ಟ್‌

ಫಾಕ್ಸ್ ಕ್ರಿಕೆಟ್‌ನಲ್ಲಿ ಮಾತನಾಡಿದ ಗಿಲ್‌ಕ್ರಿಸ್ಟ್, "ಅವರು ಇನ್ನೂ ಆಸ್ಪತ್ರೆಯಲ್ಲಿದ್ದಾರೆ. ಹೆಚ್ಚಿನ ವಿವರಗಳು ಕೈಗೆ ಬರುತ್ತಿದ್ದಂತೆ ಮತ್ತಷ್ಟು ಮಾಹಿತಿ ಸಿಗಲಿದೆ. ಆದರೆ ಕಳೆದ 24 ಗಂಟೆಗಳಲ್ಲಿ, ಅವರು ನಡೆಸುತ್ತಿರುವ ವಿವಿಧ ಪರೀಕ್ಷೆಗಳಿಂದ ಕೆಲವು ಸಕಾರಾತ್ಮಕ ಚಿಹ್ನೆಗಳು ಹೊರಬರುತ್ತಿವೆ" ಎಂದು ಹೇಳಿದರು. "ಅವರ ಬಗ್ಗೆ ತುಂಬಾ ಆಸಕ್ತಿ ಮತ್ತು ಪ್ರೀತಿ ಇದೆ. ಒಳ್ಳೆಯ ಆಟಗಾರ, ಅದ್ಭುತ ಗೆಳೆಯ. ಅವರು ತಮ್ಮ ಚೇತರಿಕೆಯನ್ನು ಮುಂದುವರಿಸಬಹುದೆಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.

"ಡೇಮಿಯನ್ ಮಾರ್ಟಿನ್ ಗೋಲ್ಡ್ ಕೋಸ್ಟ್ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ" ಎಂದು ಫಾಕ್ಸ್ ಉಲ್ಲೇಖಿಸಿ ನೈನ್ ವರದಿ ಮಾಡಿರುವಂತೆ ಗೋಲ್ಡ್ ಕೋಸ್ಟ್ ಆರೋಗ್ಯ ಸಂಸ್ಥೆಯ ವಕ್ತಾರರು ಬುಧವಾರ ತಿಳಿಸಿದ್ದಾರೆ.

54 ವರ್ಷದ ಅವರು 1992 ಮತ್ತು 2006 ರ ನಡುವೆ ಆಸ್ಟ್ರೇಲಿಯಾ ಪರ 67 ಟೆಸ್ಟ್, 208 ಏಕದಿನ ಮತ್ತು ನಾಲ್ಕು ಟಿ20ಐಗಳನ್ನು ಆಡಿದ್ದಾರೆ. ಇಂದಿಗೂ, ಅವರನ್ನು ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಏಕದಿನ ಫಿನಿಷರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಆದರೆ, ವೃತ್ತಿಜೀವನದ ಉದ್ದಕ್ಕೂ ರಿಕಿ ಪಾಂಟಿಂಗ್‌ ನೆರಳಿನಲ್ಲಿಯೇ ಅವರು ಇರಬೇಕಾಯಿತು.

ಕ್ರಿಕೆಟ್‌ನ ಅತ್ಯುತ್ತಮ ಸ್ಟ್ರೋಕ್‌ ಮೇಕರ್‌ಗಳಲ್ಲಿ ಒಬ್ಬರಾದ ಡೇಮಿಯನ್‌ ಮಾರ್ಟಿನ್‌, ತಮ್ಮ 6ಞ7 ಟೆಸ್ಟ್‌ ಪಂದ್ಯಗಳಿಂದ 4406 ರನ್‌ ಬಾರಿಸಿದರು. ಅವರ ಸರಾಸರಿ 46.37, ಇದರಲ್ಲಿ 13 ಶತಕ ಹಾಗೂ 23 ಅರ್ಧಶತಕ ಸೇರಿವೆ. ಏಕದಿನದಲ್ಲಿ ಮಾರ್ಟಿನ್‌ 208 ಪಂದ್ಯಗಳಿಂದ 5346 ರನ್‌ ಬಾರಿಸಿದ್ದು, ಅವರ ಸರಾಸರಿ 40.80. ಇದರಲ್ಲಿ ಐದು ಶತಕ ಹಾಗೂ 37 ಅರ್ಧಶತಕ ಸೇರಿವೆ.

ಭಾರತದಲ್ಲಿ ಆಸೀಸ್‌ನ ಕೊನೇ ಟೆಸ್ಟ್‌ ಸರಣಿ ಗೆಲುವಿಗೆ ನೆರವಾಗಿದ್ದ ಮಾರ್ಟಿನ್‌

ಆಸ್ಟ್ರೇಲಿಯಾ ಕೊನೆಯ ಬಾರಿಗೆ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಾಗ ಅವರನ್ನು ಸರಣಿಶ್ರೇಷ್ಠ ಎಂದು ಹೆಸರಿಸಲಾಯಿತು. 2004 ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾದ ಎಂಟು ಇನ್ನಿಂಗ್ಸ್‌ಗಳಲ್ಲಿ ನಾಲ್ಕರಲ್ಲಿ ಅಗ್ರ ಸ್ಕೋರರ್ ಆಗಿದ್ದರು. ನಾಲ್ಕು ಟೆಸ್ಟ್‌ಗಳಲ್ಲಿ 55.50 ಸರಾಸರಿಯಲ್ಲಿ 444 ರನ್ ಬಾರಿಸಿದ್ದರು. ಎಂಟು ಇನ್ನಿಂಗ್ಸ್‌ಗಳಲ್ಲಿ ಎರಡು ಶತಕಗಳು ಮತ್ತು ಎರಡು ಅರ್ಧಶತಕ ಸೇರಿದ್ದವು. ಆಸ್ಟ್ರೇಲಿಯಾ 342 ರನ್‌ಗಳಿಂದ ಗೆದ್ದು ಸರಣಿಯನ್ನು ವಶಪಡಿಸಿಕೊಂಡ ಮೂರನೇ ನಾಗ್ಪುರ ಟೆಸ್ಟ್‌ನಲ್ಲಿ 114 ರನ್ ಬಾರಿಸಿ ಮಿಂಚಿದ್ದರು.

1999 ಮತ್ತು 2003 ರಲ್ಲಿ ಎರಡು ಬಾರಿ ಐಸಿಸಿ ಕ್ರಿಕೆಟ್ ವಿಶ್ವಕಪ್ ವಿಜೇತರಾದ ಮಾರ್ಟಿನ್, 2003 ರ ಫೈನಲ್‌ನಲ್ಲಿ ಭಾರತದ ವಿರುದ್ಧ ಕೇವಲ 84 ಎಸೆತಗಳಲ್ಲಿ ಅಜೇಯ 88 ರನ್‌ ಬಾರಿಸಿದ್ದರು. ಟೂರ್ನಿಯ 10 ಪಂದ್ಯದಿಂದ 323 ರನ್‌ ಬಾರಿಸಿದ್ದರು. 8 ಇನ್ನಿಂಗ್ಸ್‌ಗಳಿಂದ ಅವರ ಸರಾಸರಿ 64.60 ಆಗಿತ್ತು. ಇದರಲ್ಲಿ ನಾಲ್ಕು ಅರ್ಧಶತಕ ಸೇರಿದ್ದವು.2006ರಲ್ಲಿ ಭಾರತದಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಗರಿಷ್ಠ ರನ್‌ ಬಾರಿಸಿದ ಮೂರನೇ ಆಟಗಾರ ಎನಿಸಿದ್ದರು. 5 ಇನ್ನಿಂಗ್ಸ್‌ಗಳಿಂದ 80.33 ಸರಾಸರಿಯಲ್ಲ 2 ಅರ್ಧಶತಕದೊಂದಿಗೆ 241 ರನ್‌ ಬಾರಿಸಿದ್ದರು.