Asianet Suvarna News Asianet Suvarna News

ಮ್ಯಾಕ್ಸಿ-ಕ್ಯಾರಿ ಭರ್ಜರಿ ಶತಕ: ಹಾಲಿ ಚಾಂಪಿಯನ್ನರ ವಿರುದ್ಧ ಆಸೀಸ್ ಜಯಭೇರಿ

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 3 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಸರಣಿ ಕೈವಶ ಮಾಡಿಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Australia win against England in Manchester Final ODI by 3 wickets
Author
Manchester, First Published Sep 17, 2020, 1:50 PM IST

ಮ್ಯಾಂಚೆಸ್ಟರ್(ಸೆ.17): ಹಾಲಿ ವಿಶ್ವಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಅವರ ನೆಲದಲ್ಲೇ ಸೋಲಿನ ರುಚಿ ತೋರಿಸುವಲ್ಲಿ ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿದೆ. ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ಅಲೆಕ್ಸ್ ಕ್ಯಾರಿ ಹಾಗೂ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಆಕರ್ಷಕ ಶತಕದ ನೆರವಿನಿಂದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಅಂತರದಲ್ಲಿ ಜಯಭೇರಿ ಬಾರಿಸಿದೆ.

ಇಂಗ್ಲೆಂಡ್‌ ನೀಡಿದ್ದ 303 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಒಂದು ಹಂತದಲ್ಲಿ 73 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಆದರೆ 6ನೇ ವಿಕೆಟ್‌ಗೆ ಜತೆಯಾದ ಅಲೆಕ್ಸ್ ಕ್ಯಾರಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಜೋಡಿ 212 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.  

ಅಲೆಕ್ಸ್ ಕ್ಯಾರಿ 114 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 106 ರನ್ ಬಾರಿಸಿ ಆರ್ಚರ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಗ್ಲೆನ್ ಮ್ಯಾಕ್ಸ್‌ವೆಲ್ 90 ಎಸೆತಗಳಲ್ಲಿ 4 ಬೌಂಡರಿ ಹಾಗೂ 7 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ 108 ರನ್ ಬಾರಿಸಿ ಆದಿಲ್‌ ರಶೀದ್‌ಗೆ ವಿಕೆಟ್‌ ಒಪ್ಪಿಸಿದರು. 

ಇಂದು ಆಸೀಸ್‌- ಇಂಗ್ಲೆಂಡ್‌ ನಿರ್ಣಾಯಕ ಏಕದಿನ ಕದನ

ಕೊನೆಯ ಓವರ್‌ನಲ್ಲಿ ಆಸ್ಟ್ರೇಲಿಯಾ ಗೆಲ್ಲಲು 10 ರನ್‌ಗಳ ಅಗತ್ಯವಿತ್ತು. ಮಿಚೆಲ್ ಸ್ಟಾರ್ಕ್‌ ಒಂದು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿ ತಂಡಕ್ಕೆ 3 ವಿಕೆಟ್‌ಗಳ ರೋಚಕ ಜಯ ತಂದಿತ್ತರು. ಅಂದಹಾಗೆ ಇಂಗ್ಲೆಂಡ್ ತಂಡ 2015ರ ಬಳಿಕ ತವರಿನಲ್ಲಿ ಇದೇ ಮೊದಲ ಬಾರಿಗೆ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಮುಖಭಂಗ ಅನುಭವಿಸಿದೆ.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡಕ್ಕೆ ಮಿಚೆಲ್ ಸ್ಟಾರ್ಕ್‌ ಮೊದಲ ಓವರ್‌ನ ಮೊದಲೆರಡು ಎಸೆತಗಳಲ್ಲಿ ಜೇಸನ್ ರಾಯ್ ಹಾಗೂ ಜೋ ರೂಟ್ ವಿಕೆಟ್ ಕಬಳಿಸಿ ಆಘಾತ ನೀಡಿದ್ದರು. ಬಳಿಕ ಜಾನಿ ಬೇರ್‌ಸ್ಟೋವ್(112) ಆಕರ್ಷಕ ಶತಕ ಹಾಗೂ ಸ್ಯಾಮ್‌ ಬಿಲ್ಲಿಂಗ್ಸ್(57) ಮತ್ತು ಕ್ರಿಸ್ ವೋಕ್ಸ್(53) ಸಮಯೋಚಿತ ಅರ್ಧಶತಕಗಳ ನೆರವಿನಿಂದ ತಂಡದ ಮೊತ್ತವನ್ನು ಮುನ್ನೂರರ ಗಡಿ ದಾಟಿಸಿದ್ದರು.

Follow Us:
Download App:
  • android
  • ios