ದಕ್ಷಿಣ ಆಫ್ರಿಕಾದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ತಂಡವು ಆಫ್ರಿಕಾ ಪ್ರವಾಸದಿಂದ ಹಿಂದೆ ಸರಿದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಕ್ಯಾನ್‌ಬೆರ್ರಾ(ಫೆ.02): ದಕ್ಷಿಣ ಆಫ್ರಿಕಾದಲ್ಲಿ ನಡೆಯಬೇಕಿದ್ದ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಿಂದ ಅಸ್ಟ್ರೇಲಿಯಾ ಹಿಂದೆ ಸರಿದಿದೆ. ಆಫ್ರಿಕಾ ನಾಡಿನಲ್ಲಿ ಕೊರೋನಾ ಪ್ರಕರಣಗಳು ದಿಢೀರ್ ಆಗಿ ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕಾಂಗರೂ ಪಡೆ ಆಫ್ರಿಕಾ ಪ್ರವಾಸದಿಂದ ಹಿಂದೆ ಸರಿದಿದೆ. ಇದರೊಂದಿಗೆ ಆಸ್ಟ್ರೇಲಿಯಾ ತಂಡವು ಚೊಚ್ಚಲ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ರೇಸ್‌ನಿಂದ ಹೊರಬಿದ್ದಂತೆ ಆಗಿದೆ.

ಆಸ್ಟ್ರೇಲಿಯಾ ತಂಡವು ಹರಿಣಗಳ ನಾಡಿನಲ್ಲಿ 3 ಪಂದ್ಯಗಳ ಟೆಸ್ಟ್‌ ಸರಣಿಯಾಡಬೇಕಿತ್ತು. ಈ ಟೆಸ್ಟ್ ಸರಣಿ ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳ ಅವಧಿಯಲ್ಲಿ ನಡೆಯಬೇಕಿತ್ತು. ಈ ಸರಣಿಗೆ ವೇಳಾಪಟ್ಟಿ ನಿಗದಿಯಾಗಿರಲಿಲ್ಲ. ಆದರೆ ಇದಕ್ಕೂ ಮೊದಲೇ ಕ್ರಿಕೆಟ್ ಆಸ್ಟ್ರೇಲಿಯಾ 19 ಆಟಗಾರರನ್ನೊಳಗೊಂಡ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿತ್ತು.

Scroll to load tweet…

ದಕ್ಷಿಣ ಆಫ್ರಿಕಾ ಎದುರಿನ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ; ನಾಯಕತ್ವ ಉಳಿಸಿಕೊಂಡ ಟಿಮ್‌ ಪೈನ್‌

ಆಸ್ಟ್ರೇಲಿಯಾದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಕನಸು ಭಗ್ನ: ಭಾರತ ವಿರುದ್ದ ತವರಿನಲ್ಲೇ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿ ಕೈಚೆಲ್ಲಿ ಮುಖಭಂಗ ಅನುಭವಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ ಇದೀಗ ಆಫ್ರಿಕಾ ಪ್ರವಾಸ ರದ್ದಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಸರಣಿ ರದ್ದಾಗಿರುವುದರಿಂದ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ರೇಸ್‌ನಿಂದ ಆಸ್ಟ್ರೇಲಿಯಾ ಹೊರಬಿದ್ದಿದ್ದು, ಇದೀಗ ನ್ಯೂಜಿಲೆಂಡ್ ತಂಡ ಫೈನಲ್‌ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ. ಇನ್ನು ಇದೇ ಜೂನ್ 18ರಿಂದ ಲಾರ್ಡ್ಸ್‌ ಮೈದಾನದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಭಾರತ ಇಲ್ಲವೇ ಇಂಗ್ಲೆಂಡ್ ವಿರುದ್ದ ಪ್ರಶಸ್ತಿಗಾಗಿ ನ್ಯೂಜಿಲೆಂಡ್ ತಂಡ ಸೆಣೆಸಲಿದೆ