30ನೇ ಟೆಸ್ಟ್ ಶತಕ ಚಚ್ಚಿದ ಸ್ಟೀವ್ ಸ್ಮಿತ್; ಕ್ರಿಕೆಟ್ ದಂತಕಥೆ ಬ್ರಾಡ್ಮನ್ ದಾಖಲೆ ಬ್ರೇಕ್..!
ಸಿಡ್ನಿ ಟೆಸ್ಟ್‌ನಲ್ಲೂ ಹರಿಣಗಳ ಮೇಲೆ ಕಾಂಗರೂ ಸವಾರಿ
ಆಕರ್ಷಕ ಶತಕ ಸಿಡಿಸಿ ಮಿಂಚಿದ ಉಸ್ಮಾನ್ ಖವಾಜ, ಸ್ಟೀವ್ ಸ್ಮಿತ್
ಡಾನ್ ಬ್ರಾಡ್ಮನ್ ದಾಖಲೆ ಅಳಿಸಿ ಹಾಕಿದ ಸ್ಟೀವ್ ಸ್ಮಿತ್

ಸಿಡ್ನಿ(ಜ.05): ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಮತ್ತೊಮ್ಮೆ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ಅನಾವರಣ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ವೃತ್ತಿಜೀವನದ 30ನೇ ಟೆಸ್ಟ್ ಶತಕ ಸಿಡಿಸುವ ಮೂಲಕ ಕ್ರಿಕೆಟ್ ದಂತಕಥೆ ಸರ್ ಡಾನ್ ಬ್ರಾಡ್ಮನ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ದಕ್ಷಿಣ ಆಫ್ರಿಕಾದ ವೇಗಿ ಏನ್ರಿಚ್ ನೋಕಿಯಾ ಬೌಲಿಂಗ್‌ನಲ್ಲಿ ಸ್ಟೀವ್ ಸ್ಮಿತ್ ಆಕರ್ಷಕವಾಗಿ ಫುಲ್ ಶಾಟ್ ಮೂಲಕ ಬೌಂಡರಿ ಬಾರಿಸುವುದರೊಂದಿಗೆ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು. ಒಟ್ಟು 190 ಎಸೆತಗಳನ್ನು ಎದರಿಸಿ ಸ್ಮಿತ್, ಟೆಸ್ಟ್ ವೃತ್ತಿಜೀವನದ 30ನೇ ಶತಕ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ಡಾನ್ ಬ್ರಾಡ್ಮನ್ ಅವರ 29 ಶತಕಗಳ ದಾಖಲೆಯನ್ನು ಬ್ರೇಕ್ ಮಾಡುವಲ್ಲಿ ಸ್ಟೀವ್ ಸ್ಮಿತ್ ಯಶಸ್ವಿಯಾದರು. ಅಂತಿಮವಾಗಿ ಸ್ಟೀವ್ ಸ್ಮಿತ್ 192 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 104 ರನ್ ಬಾರಿಸಿ ಕೇಶವ್ ಮಹಾರಾಜ್‌ಗೆ ವಿಕೆಟ್ ಒಪ್ಪಿಸಿದರು.
ಆಸೀಸ್ ಪರ ನಾಲ್ಕನೇ ಗರಿಷ್ಠ ರನ್ ಸರದಾರ: ಈ ಶತಕದ ಜತೆಗೆ ಸ್ಟೀವ್ ಸ್ಮಿತ್, ಆಸ್ಟ್ರೇಲಿಯಾ ಪರ ಗರಿಷ್ಠ ಟೆಸ್ಟ್ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೈಕಲ್ ಕ್ಲಾರ್ಕ್ ಅವರನ್ನು ಹಿಂದಿಕ್ಕಿ 4ನೇ ಗರಿಷ್ಠ ರನ್ ಸರದಾರರಾಗಿ ಹೊರಹೊಮ್ಮಿದ್ದಾರೆ. ಕ್ಲಾರ್ಕ್ 115 ಟೆಸ್ಟ್ ಪಂದ್ಯಗಳನ್ನಾಡಿ 8643 ರನ್ ಬಾರಿಸಿದ್ದರು. ಇದೀಗ ಸ್ಟೀವ್ ಸ್ಮಿತ್ ಕೇವಲ 92 ಟೆಸ್ಟ್ ಪಂದ್ಯಗಳನ್ನಾಡಿ 8,647 ರನ್ ಬಾರಿಸುವ ಮೂಲಕ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಇನ್ನುಳಿದಂತೆ ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟರ್‌ಗಳಾದ ರಿಕಿ ಪಾಂಟಿಂಗ್(13,378), ಅಲೆನ್ ಬಾರ್ಡರ್(11,174) ಹಾಗೂ ಸ್ಟೀವ್ ವಾ(10,927) ಸ್ಮಿತ್ ಅವರಿಗಿಂತ ಮುಂದಿದ್ದಾರೆ.
ಬೃಹತ್ ಮೊತ್ತದತ್ತ ಆಸ್ಟ್ರೇಲಿಯಾ:
ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡವು ಆರಂಭಿಕ ಆಘಾತ ಅನುಭವಿಸಿತಾದರೂ ಆ ಬಳಿಕ ಚೇತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸದ್ಯ ಎರಡನೇ ದಿನದಾಟದಂತ್ಯದ ವೇಳೆಗೆ ಆಸ್ಟ್ರೇಲಿಯಾ ತಂಡವು 4 ವಿಕೆಟ್ ಕಳೆದುಕೊಂಡು 475 ರನ್ ಗಳಿಸಿದೆ. ಉಸ್ಮಾನ್ ಖವಾಜ ಅಜೇಯ 195 ರನ್ ಬಾರಿಸಿದ್ದು, ದ್ವಿಶತಕದ ಹೊಸ್ತಿಲಲ್ಲಿದ್ದಾರೆ. ಇನ್ನು ಮಾರ್ನಸ್ ಲಬುಶೇನ್(79), ಸ್ಟೀವ್ ಸ್ಮಿತ್(104) ಹಾಗೂ ಟ್ರಾವಿಸ್ ಹೆಡ್(70) ಅವರು ಉಪಯುಕ್ತ ರನ್ ಕಾಣಿಕೆ ನೀಡಿದರು. ಇನ್ನು ಮ್ಯಾಟ್ ರೆನ್‌ಶೋ(5*) ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು.
29 ಶತಕ, 10 ಸಾವಿರಕ್ಕೂ ಅಧಿಕ ರನ್... ಈ 13 ವರ್ಷದ ಯುವ ಕ್ರಿಕೆಟಿಗ ಭವಿಷ್ಯದ ಆಶಾಕಿರಣ..!
ಈಗಾಗಲೇ ಸರಣಿ ಗೆದ್ದಿರುವ ಆಸೀಸ್: ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು 2-0 ಅಂತರದಲ್ಲಿ ಗೆಲುವು ಸಾಧಿಸಿದೆ. ಮೆಲ್ಬರ್ನ್ ಟೆಸ್ಟ್ ಪಂದ್ಯವನ್ನು 182 ರನ್‌ಗಳಿಂದ ಜಯಿಸಿದ್ದ ಕಾಂಗರೂ ಪಡೆ, ಬ್ರಿಸ್ಬೇನ್ ಟೆಸ್ಟ್ ಪಂದ್ಯವನ್ನು 6 ವಿಕೆಟ್‌ಗಳಿಂದ ಕೈವಶ ಮಾಡಿಕೊಂಡಿತ್ತು. ಇದೀಗ ಆಸ್ಟ್ರೇಲಿಯಾ ತಂಡವು ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ವಿಶ್ವಾಸದಲ್ಲಿದೆ.