ಏಷ್ಯಾಕಪ್ ಗೆದ್ದ ಭಾರತ ತಂಡ, ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ನಖ್ವಿಯ ಹಠದಿಂದಾಗಿ ಟ್ರೋಫಿ ಪ್ರದಾನ ಸಮಾರಂಭದಲ್ಲಿ ವಿವಾದ ಸೃಷ್ಟಿಯಾಗಿದ್ದು, ಈ ನಡೆಯನ್ನು ಬಿಸಿಸಿಐ ತೀವ್ರವಾಗಿ ಖಂಡಿಸಿದೆ ಮತ್ತು ಪ್ರತಿಭಟನೆ ದಾಖಲಿಸುವ ಎಚ್ಚರಿಕೆ ನೀಡಿದೆ.

ದುಬೈ: ಏಷ್ಯಾಕಪ್ ಗೆದ್ದ ತಂಡಕ್ಕೆ ಏಷ್ಯನ್ ಕ್ರಿಕೆಟ್‌ನ ಮುಖ್ಯಸ್ಥ ಮೊಹ್ಸಿನ್ ನ ಟ್ರೋಫಿ ಹಸ್ತಾಂತರಿಸುವುದು ಶಿಷ್ಟಾಚಾರ. ಆದರೆ ಭಾರತೀಯ ಆಟಗಾರರು ನಖ್ವಿಯಿಂದ ಟ್ರೋಫಿ ಸ್ವೀಕರಿಸಲ್ಲ ಎಂದು ನಿರ್ಧರಿಸಿದ್ದರು. ಇದೇನು ಸಮಸ್ಯೆ ಆಗಿರಲಿಲ್ಲ. ಯಾಕೆಂದರೆ, ವಿವಾದವನ್ನು ತಪ್ಪಿಸುವ ಎಲ್ಲಾ ಅವಕಾಶವೂ ನಖ್ವಿಗೆ ಇತ್ತು. ಆದರೆ ಪಾಕ್‌ನ ಗೃಹ ಸಚಿವರೂ ಆಗಿರುವ ನಖ್ವಿ ತನ್ನಿಂದ ಟ್ರೋಫಿ ಸ್ವೀಕರಿಸುವುದಾದರೆ ಸ್ವೀಕರಿಸಿ, ಇಲ್ಲದಿದ್ದರೆ ಇಲ್ಲ ಎಂಬಂತೆ ವರ್ತಿಸಿದ್ದು ಭಾರತೀಯರ ಕೆಂಗಣ್ಣಿಗೆ ಗುರಿಯಾಯಿತು. ನಖ್ವಿಯ ನಡೆಗೆ ಇಡೀ ಭಾರತವೇ ಧಿಕ್ಕಾರ ಕೂಗಿದೆ.

ನಖ್ವಿಯಿಂದ ಟ್ರೋಫಿ ಸ್ವೀಕರಿಸಲ್ಲ ಎಂದಿದ್ದ ಜಯ್‌ ಶಾ

ನಖ್ವಿಯಿಂದ ಟ್ರೋಫಿ ಸ್ವೀಕರಿಸಲ್ಲ ಎಂದು ಸಮಾರಂಭಕ್ಕೂ ಮೊದಲೇ ಭಾರತ ಸ್ಪಷ್ಟಪಡಿಸಿತ್ತು. ಹೀಗಾಗಿ ಇತರ ಅಧಿಕಾರಿಗಳಿಂದ ಭಾರತಕ್ಕೆ ಟ್ರೋಫಿ ಕೊಡಿಸುವ ಆಯ್ಕೆ ನ ಮುಂದೆ ಇತ್ತು. ಆದರೆ ನಖ್ವಿ ಪಟ್ಟು ಬಿಡಲಿಲ್ಲ. ತಾನೇ ಟ್ರೋಫಿ ಕೊಡಬೇಕೆಂದು ಹಠಕ್ಕೆ ಬಿದ್ದು, ದೊಡ್ಡ ವಿವಾದಕ್ಕೆ ಕಾರಣರಾದರು. 'ನನ್ನ ಟ್ರೋಫಿ, ನನ್ನಿಷ್ಟ ಎಂಬಂತೆ ಮೊಹ್ಸಿನ್ ನಖ್ವಿ ನಡೆದುಕೊಂಡಿದ್ದು ಎಷ್ಟು ಸರಿ? ಎಂಬ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಈ ಹಿಂದೆ, 2022ರಲ್ಲಿ ಆಗಿನ ಏಷ್ಯನ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಜಯ್‌ ಶಾ ನಡೆದುಕೊಂಡ ರೀತಿಯೂ ಈಗ ವೈರಲ್ ಆಗುತ್ತಿದೆ. 2022ರ ಏಷ್ಯಾಕಪ್‌ನಲ್ಲಿ ಶ್ರೀಲಂಕಾ-ಪಾಕಿಸ್ತಾನ ಫೈನಲ್‌ಗೇರಿದ್ದವು. ಪಾಕ್ ಆಡುವ ಕಾರಣಕ್ಕೆ ಜಯ್ ಶಾ, ಪಂದ್ಯ ನಡೆಯುತ್ತಿದ್ದ ದುಬೈ ಕ್ರೀಡಾಂಗಣಕ್ಕೆ ಆಗಮಿಸಿರಲಿಲ್ಲ. ಟ್ರೋಫಿ ಹಸ್ತಾಂತರಕ್ಕೂ ಬರಲಿಲ್ಲ. ಆದರೆ ಚಾಂಪಿಯನ್ ತಂಡಕ್ಕೆ ಟ್ರೋಫಿ ಕೊಡುವುದನ್ನು ಜಯ್ ಶಾ ತಪ್ಪಿಸಿರಲಿಲ್ಲ. ತಾವೇ ಕೊಡಬೇಕೆಂದು ಹಠಕ್ಕೆ ಬಿದ್ದಿರಲಿಲ್ಲ. ಬದಲಾಗಿ, ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧಿಕಾರಿಗಳಿಂದಲೇ ಶ್ರೀಲಂಕಾ ತಂಡಕ್ಕೆ ಟ್ರೋಫಿ ಕೊಡಿಸಿದ್ದರು. ಪಾಕ್ ಗೆದ್ದಿದ್ದರೂ ಲಂಕಾ ಅಧಿಕಾರಿಗಳೇ ಟ್ರೋಫಿ ಕೊಡುತ್ತಿದ್ದರು.

ಟ್ರೋಫಿ ಕೊಡದ ನಖ್ವಿ ವಿರುದ್ದ ಬಿಸಿಸಿಐ ಕೆಂಡ!

ಮುಂಬೈ: ಪಾಕಿಸ್ತಾನ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಭಾರತ ತಂಡದ ನಡೆಯನ್ನು ಬಿಸಿಸಿಐ ದೇವಜಿತ್ ಸೈಕಿಯಾ ಸಮರ್ಥಿಸಿಕೊಂಡಿದ್ದಾರೆ. ಆದರೆ ಭಾರತಕ್ಕೆ ಟ್ರೋಫಿ ನೀಡದೆ ತೆರಳಿದ ನಖ್ವಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ತೀವ್ರ ಪ್ರತಿಭಟನೆ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, 'ಭಾರತದ ವಿರುದ್ಧ ಯುದ್ಧ ಮಾಡುವ ದೇಶದ ವ್ಯಕ್ತಿಯಿಂದ ನಾವು ಟ್ರೋಫಿ ಸ್ವೀಕರಿಸಲ್ಲ, ನಖ್ವಿಯಿಂದ ಟ್ರೋಫಿ ಸ್ವೀಕರಿಸದಿರಲು ನಾವು ನಿರ್ಧರಿಸಿದ್ದೆವು. ಆದರೆ ಟ್ರೋಫಿ ಹಾಗೂ ಮೆಡಲ್‌ಗಳನ್ನು ಹೊತ್ತೊಯ್ಯುವ ಅವಕಾಶ ಅವರಿಗಿಲ್ಲ. ಈ ನಡೆ ಸ್ವೀಕಾರಾರ್ಹವಲ್ಲ. ನಖ್ವಿ ಬಹಳ ಅಪ್ರಬುದ್ಧ ಮಕ್ಕಳಂತೆ ನಡೆದುಕೊಂಡಿದ್ದಾರೆ. ನಮ್ಮ ಟ್ರೋಫಿ, ಮೆಡಲ್‌ಗಳನ್ನು ನಮಗೆ ಕಳಿಸಿಕೊಡಲಿ' ಎಂದಿದ್ದಾರೆ.

ನವೆಂಬರ್ ಮೊದಲ ವಾರ ದುಬೈನಲ್ಲೇ ಐಸಿಸಿ ಸಭೆ ನಡೆಯಲಿದೆ. ಆ ವೇಳೆ ತೀವ್ರ ಪ್ರತಿಭಟನೆ ನಡೆಸಲಿದ್ದೇವೆ' ಎಂದಿದ್ದಾರೆ. ಇನ್ನು, ತೀವ್ರ ವಿರೋಧದ ನಡುವೆಯೂ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ 12-15 ವರ್ಷಗಳಿಂದ ದ್ವಿಪಕ್ಷೀಯ ಸರಣಿಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡುತ್ತಿಲ್ಲ. ಆದರೆ ಬಹುರಾಷ್ಟ್ರೀಯ ಟೂರ್ನಿ ಯಲ್ಲಿ ನಾವು ಆಡಲೇಬೇಕಿದೆ. ಬಹಿಷ್ಕರಿಸಿದರೆ ನಮ್ಮ ಕ್ರೀಡೆ ಹಾಗೂ ಮಂಡಳಿಗೆ ಸಮಸ್ಯೆಯಾಗಲಿದೆ. ಅಂ.ರಾ. ಒಕ್ಕೂಟದಿಂದ ಅಮಾನತುಗೊಳ್ಳಲಿದ್ದೇವೆ' ಎಂದಿದ್ದಾರೆ.

2025ರ ಏಷ್ಯಾಕಪ್ ಟೂರ್ನಿಯ ಫೈನಲ್‌ನಲ್ಲಿ ಬದ್ದ ಎದುರಾಳಿ ಪಾಕಿಸ್ತಾನ ಎದುರು ಟೀಂ ಇಂಡಿಯಾ 5 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ದಾಖಲೆಯ 9ನೇ ಬಾರಿಗೆ ಏಷ್ಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ.