2025ರ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದರೂ, ಭಾರತ ತಂಡವು ಪಾಕ್ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದೆ. ಈ ಘಟನೆಯಿಂದಾಗಿ ನಖ್ವಿ ಟ್ರೋಫಿಯನ್ನು ತಮ್ಮೊಂದಿಗೆ ಹೋಟೆಲ್‌ಗೆ ಕೊಂಡೊಯ್ದಿದ್ದು, ಇದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ದುಬೈ: 2025ರ ಏಷ್ಯಾಕಪ್ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನವನ್ನು ರೋಚಕವಾಗಿ ಬಗ್ಗುಬಡಿದಿದೆ. ಆದರೆ ಸೂರ್ಯಕುಮಾರ್ ಯಾದವ್ ಪಡೆಗೆ ಇನ್ನೂ ಟ್ರೋಫಿ ಸಿಕ್ಕಿಲ್ಲ. ಭಾರತ ತಂಡವು ಏಷ್ಯಾಕಪ್ ಟ್ರೋಫಿ ಜಯಿಸಿದ ಬಳಿಕ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಹಾಗೂ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷರಾಗಿರುವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದರು. ಇದಕ್ಕೆ ಕಾರಣ ಮೊಹ್ಸಿನ್ ನಖ್ವಿ ಎಸಿಸಿ & ಪಿಸಿಬಿ ಮುಖ್ಯಸ್ಥರಷ್ಟೇ ಅಲ್ಲದೇ ಪಾಕಿಸ್ತಾನ ಸರ್ಕಾರದ ಮಂತ್ರಿಯೂ ಆಗಿದ್ದಾರೆ. ಇದೇ ಕಾರಣಕ್ಕಾಗಿ ಭಾರತ ತಂಡವು ನಖ್ವಿ ಅವರಿಂದ ಏಷ್ಯಾಕಪ್ ಟ್ರೋಫಿ ಸ್ವೀಕರಿಸಲು ಹಿಂದೇಟು ಹಾಕಿದರು. ಒಂದು ವೇಳೆ ನಖ್ವಿ ಬದಲಿಗೆ ಬೇರೆ ಯಾರಾದರೂ ಟ್ರೋಫಿ ವಿತರಿಸಿದ್ದರೇ ಭಾರತ ತಂಡವು ಏಷ್ಯಾಕಪ್ ಟ್ರೋಫಿಯನ್ನು ಸ್ವೀಕರಿಸುತ್ತಿತ್ತು ಎನ್ನಲಾಗುತ್ತಿದೆ.
ಇನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ, ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಏಷ್ಯಾಕಪ್ ಟ್ರೋಫಿಯನ್ನು ತಮ್ಮ ಜತೆಗೆ ತೆಗೆದುಕೊಂಡು ಹೋಟೆಲ್‌ಗೆ ತೆರಳಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಗಿದ್ರೆ ಭಾರತಕ್ಕೆ ಟ್ರೋಫಿ ಯಾವಾಗ ಸಿಗತ್ತೆ?ಚಾಂಪಿಯನ್ ತಂಡದ ಹೊರತಾಗಿ ಬೇರೆಯವರು ಟ್ರೋಫಿಯನ್ನು ಇಟ್ಟುಕೊಳ್ಳಲು ಅವಕಾಶ ಇದೆಯಾ? ಈ ಕುರಿತಂತೆ ಇರುವ ನಿಯಮಗಳೇನು? ಈ ಎಲ್ಲಾ ಪ್ರಶ್ನೆಗಳಿಗೆ ನಾವಿಂದು ಉತ್ತರ ಕೊಡುತ್ತಿದ್ದೇವೆ ನೋಡಿ.
ಟ್ರೋಫಿ ಇಟ್ಟುಕೊಳ್ಳುವ ವಿಚಾರವಾಗಿ ಇರುವ ರೂಲ್ಸ್ ಏನು?
ಟೂರ್ನಿಯಲ್ಲಿ ವಿಜೇತವಾದ ತಂಡದ ಹೊರತಾಗಿ ಬೇರೆಯವರು ಟ್ರೋಫಿ ಇಟ್ಟುಕೊಳ್ಳುವ ವಿಚಾರವಾಗಿ ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ. ಈ ರೀತಿಯ ಘಟನೆಗಳು ಸಂಭವಿಸುವುದು ಅಪರೂಪದಲ್ಲೇ ಅಪರೂಪ. ಒಂದು ವೇಳೆ ಯಾವುದಾದರೂ ತಂಡವು ಟ್ರೋಫಿ ಸ್ವೀಕರಿಸಲು ನಿರಾಕರಿಸಿದರೆ, ಬೇರೆ ತಂಡ ಅಥವಾ ವ್ಯಕ್ತಿ ಇಟ್ಟುಕೊಳ್ಳುವ ಅವಕಾಶವಿಲ್ಲ. ಯಾವುದೇ ತಂಡವು ಚಾಂಪಿಯನ್ ಆಗುತ್ತಿದ್ದಂತೆಯೇ ಆ ತಂಡಕ್ಕೆ ನಿಜವಾದ ಟ್ರೋಫಿ ನೀಡಲಾಗುತ್ತದೆ. ಇದಾದ ಬಳಿಕ ಅದರ ರೆಪ್ಲಿಕಾವನ್ನು ನೀಡಲಾಗುತ್ತದೆ. ಆದರೆ ಸದ್ಯ ಭಾರತಕ್ಕೆ ಒರಿಜಿನಲ್ ಟ್ರೋಫಿಯಾಗಲೀ ಅಥವಾ ಅದರ ರೆಪ್ಲಿಕಾವಾಗಲೀ ಸಿಕ್ಕಿಲ್ಲ. ಯಾಕೆಂದರೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಏಷ್ಯಾಕಪ್ ಟ್ರೋಫಿ ಹಾಗೂ ಮೆಡಲ್‌ಗಳನ್ನು ತೆಗೆದುಕೊಂಡು ಹೋಟೆಲ್‌ಗೆ ತೆರಳಿದ್ದಾರೆ. ಇದೀಗ ಬಿಸಿಸಿಐ, ನಖ್ವಿ ಮೇಲೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.
ಮೊಹ್ಸಿನ್ ನಖ್ವಿಗೆ ಕ್ಲಾಸ್ ತೆಗೆದುಕೊಳ್ಳುವುದು ಫಿಕ್ಸ್!
ಮೊಹ್ಸಿನ್ ನಖ್ವಿ ಯಾಕೆ ಹೀಗೆ ಮಾಡಿದ್ರು ಅಂತ ಕೇಳಿದ್ರೆ ಖಂಡಿತ ಅವರ ಬಳಿ ಉತ್ತರವಿರುವುದಿಲ್ಲ. ಟೀಂ ಇಂಡಿಯಾ ಆಟಗಾರರು ನಖ್ವಿ ಅವರ ಕೈಯಿಂದ ಟ್ರೋಫಿ ಸ್ವೀಕರಿಸುವುದಿಲ್ಲ ಎಂದು ತಿಳಿಸಿದ ಮೇಲೆ ವೇದಿಕೆಯಲ್ಲಿದ್ದ ಬೇರೆಯವರ ಕೈಯಿಂದ ಟ್ರೋಫಿ ವಿತರಣೆ ಮಾಡಿಸಬಹುದಿತ್ತು. ಈ ಸಂಬಂಧ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಮೇಲೆ ತನಿಖೆಗೆ ಆಗ್ರಹಿಸಿದ್ದಾರೆ. ಈ ಕುರಿತಂತೆ ಮಾತನಾಡಿರುವ ದೇವಜಿತ್ ಸೈಕಿಯಾ ಮುಂಬರುವ ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ತಮ್ಮ ವಿರೋಧ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ.
