ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶ್ರೇಯಸ್‌ 6 ತಿಂಗಳ ವಿಶ್ರಾಂತಿ ಬಳಿಕ ಇತ್ತೀಚೆಗಷ್ಟೇ ಏಷ್ಯಾಕಪ್‌ ಟೂರ್ನಿ ಮೂಲಕ ಭಾರತ ತಂಡಕ್ಕೆ ವಾಪಸಾಗಿದ್ದರು. ಪಾಕಿಸ್ತಾನ ವಿರುದ್ಧ ಗುಂಪು ಹಂತದ ಪಂದ್ಯದಲ್ಲಿ 14 ರನ್‌ ಗಳಿಸಿದ್ದ ಅವರು, ನೇಪಾಳ ವಿರುದ್ಧ ಬ್ಯಾಟ್‌ ಮಾಡಿರಲಿಲ್ಲ. ಆದರೆ ಭಾನುವಾರದ ಪಾಕ್‌ ವಿರುದ್ಧದ ಸೂಪರ್‌-4 ಪಂದ್ಯಕ್ಕೆ ಅಲಭ್ಯರಾಗಿದ್ದು, ಶ್ರೇಯಸ್ ಅಯ್ಯರ್‌ ಬೆನ್ನು ನೋವಿನಿಂದ ಬಳಲುತ್ತಿರುವುದಾಗಿ ರೋಹಿತ್‌ ಶರ್ಮಾ ತಿಳಿಸಿದ್ದಾರೆ.

ಕೊಲಂಬೊ(ಸೆ.11): ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್‌ಗೂ ಮುನ್ನ ಭಾರತವನ್ನು ಆಟಗಾರರ ಗಾಯದ ಸಮಸ್ಯೆ ಬಿಟ್ಟೂ ಬಿಡದೆ ಕಾಡುತ್ತಿದ್ದು, ಇತ್ತೀಚೆಗಷ್ಟೇ ತಂಡಕ್ಕೆ ವಾಪಸಾಗಿದ್ದ ಶ್ರೇಯಸ್‌ ಅಯ್ಯರ್‌ ಮತ್ತೆ ಬೆನ್ನು ನೋವಿಗೆ ತುತ್ತಾಗಿದ್ದಾರೆ. ಇದು ವಿಶ್ವಕಪ್‌ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಪಾಳಯದಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.

ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶ್ರೇಯಸ್‌ 6 ತಿಂಗಳ ವಿಶ್ರಾಂತಿ ಬಳಿಕ ಇತ್ತೀಚೆಗಷ್ಟೇ ಏಷ್ಯಾಕಪ್‌ ಟೂರ್ನಿ ಮೂಲಕ ಭಾರತ ತಂಡಕ್ಕೆ ವಾಪಸಾಗಿದ್ದರು. ಪಾಕಿಸ್ತಾನ ವಿರುದ್ಧ ಗುಂಪು ಹಂತದ ಪಂದ್ಯದಲ್ಲಿ 14 ರನ್‌ ಗಳಿಸಿದ್ದ ಅವರು, ನೇಪಾಳ ವಿರುದ್ಧ ಬ್ಯಾಟ್‌ ಮಾಡಿರಲಿಲ್ಲ. ಆದರೆ ಭಾನುವಾರದ ಪಾಕ್‌ ವಿರುದ್ಧದ ಸೂಪರ್‌-4 ಪಂದ್ಯಕ್ಕೆ ಅಲಭ್ಯರಾಗಿದ್ದು, ಶ್ರೇಯಸ್ ಅಯ್ಯರ್‌ ಬೆನ್ನು ನೋವಿನಿಂದ ಬಳಲುತ್ತಿರುವುದಾಗಿ ರೋಹಿತ್‌ ಶರ್ಮಾ ತಿಳಿಸಿದ್ದಾರೆ.

ಪಾಕಿಸ್ತಾನ ಎದುರಿನ ಪಂದ್ಯದ ಟಾಸ್ ಸೋತ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, ನಮ್ಮ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಒಂದು ಬದಲಾವಣೆ ಅನಿವಾರ್ಯವಾಗಿ ಬದಲಾವಣೆ ಮಾಡಲಾಗಿದೆ ಎಂದರು. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದುದರಿಂದಾಗಿ ಅಯ್ಯರ್, ಪಾಕ್ ಎದುರು ಆಡುವ ಹನ್ನೊಂದರ ಬಳಗದಿಂದ ಹೊರಬಿದ್ದಿದ್ದರು. ಹೀಗಾಗಿ ಅಯ್ಯರ್ ಬದಲಿಗೆ ಕೆ ಎಲ್ ರಾಹುಲ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದಾರೆ. 

ಭಾರತ-ಪಾಕ್ ಏಷ್ಯಾಕಪ್ ಸೂಪರ್ 4 ಪಂದ್ಯ ರದ್ದು, ಮೀಸಲು ದಿನದಲ್ಲಿ ಪಂದ್ಯ ಪುನರ್ ಆರಂಭ!

4ನೇ ಕ್ರಮಾಂಕಕ್ಕೆ ರಾಹುಲ್ ಪರಿಹಾರವಾಗ್ತಾರಾ?:

ಗಾಯದ ಸಮಸ್ಯೆಯಿಂದ ಶ್ರೇಯಸ್ ಅಯ್ಯರ್ ಹಾಗೂ ಕೆ ಎಲ್ ರಾಹುಲ್ ಏಷ್ಯಾಕಪ್ ಟೂರ್ನಿಯ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ. ಇದೀಗ ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಕೆ ಎಲ್ ರಾಹುಲ್ ಕಣಕ್ಕಿಳಿದಿದ್ದು, ಅಜೇಯ 17 ರನ್ ಗಳಿಸಿ ಮೀಸಲು ದಿನದಾಟದಲ್ಲಿ ತಮ್ಮ ಬ್ಯಾಟಿಂಗ್ ಮುಂದುವರೆಸಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 5ನೇ ಕ್ರಮಾಂಕದಲ್ಲಿ ರಾಹುಲ್ ಆಡುವ ಸಾಧ್ಯತೆಯಿತ್ತು. ಒಂದು ವೇಳೆ ಪಾಕ್ ಎದುರು ಕೆ ಎಲ್ ದೊಡ್ಡ ಇನಿಂಗ್ಸ್ ಆಡಿದರೆ, ಕನ್ನಡಿಗ ನಾಲ್ಕನೇ ಕ್ರಮಾಂಕದ ಸಮಸ್ಯೆಗೆ ಪರಿಹಾರ ಒದಗಿಸಿದಂತಾಗುವ ಸಾಧ್ಯತೆ ಹೆಚ್ಚಿದೆ.

ಇಂದು ಆಟ ಮುಂದುವರಿಕೆ, ಮಧ್ಯಾಹ್ನ 3ಕ್ಕೆ ಆರಂಭ

ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್‌ ಸೂಪರ್‌-4ನ ಹೈವೋಲ್ಟೇಜ್‌ ಪಂದ್ಯಕ್ಕೆ ಮತ್ತೆ ಮಳೆರಾಯ ಅವಕೃಪೆ ತೋರಿದ್ದಾನೆ. ಮಳೆ ಭೀತಿಯಿಂದಾಗಿ ಉಭಯ ತಂಡಗಳ ಮಹತ್ವದ ಪಂದ್ಯಕ್ಕೆ ಏಷ್ಯಾ ಕ್ರಿಕೆಟ್‌ ಸಮಿತಿ (ಎಸಿಸಿ) ಮೀಸಲು ದಿನ ನಿಗದಿಪಡಿಸಿರುವ ಕಾರಣ, ಪಂದ್ಯ ಸೋಮವಾರ ಮುಂದುವರಿಯಲಿದೆ.

ನಾಲಿಗೆಯಿಂದ ವಿರಾಟ್ ಕೊಹ್ಲಿ ಚಿತ್ರ ಬರೆದ ಅಪ್ಪಟ ಅಭಿಮಾನಿ..! ವಿಡಿಯೋ ವೈರಲ್

ಭಾರತ ಭಾನುವಾರ 24.1 ಓವರ್‌ ಬ್ಯಾಟ್‌ ಮಾಡಿದ್ದು, 2 ವಿಕೆಟ್‌ ಕಳೆದುಕೊಂಡು 147 ರನ್‌ ಗಳಿಸಿದೆ. ಆಟ ಎಲ್ಲಿ ನಿಂತಿದೆಯೋ ಸೋಮವಾರ ಅಲ್ಲಿಂದಲೇ ಆರಂಭಗೊಳ್ಳಲಿದೆ. ಕಳೆದ ಪಂದ್ಯದಲ್ಲಿ ವಿಫಲರಾಗಿದ್ದ ರೋಹಿತ್‌ ಶರ್ಮಾ, ಶುಭ್‌ಮನ್‌ ಗಿಲ್‌ ಈ ಪಂದ್ಯದಲ್ಲಿ ಅಬ್ಬರಿಸಿ 16.4 ಓವರ್‌ಗಳಲ್ಲಿ 121 ರನ್‌ ಜೊತೆಯಾಟವಾಡಿದರು. ರೋಹಿತ್‌ 56, ಗಿಲ್‌ 58 ರನ್‌ ಗಳಿಸಿ ಔಟಾದರು. ಸದ್ಯ ಕೆ.ಎಲ್‌.ರಾಹುಲ್‌(17), ವಿರಾಟ್‌ ಕೊಹ್ಲಿ(08) ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಮೈದಾನ ಒಣಗಿಸಲು ಸಿಬ್ಬಂದಿ ಹರಸಾಹಸ!

ಭಾರೀ ಮಳೆ ಆರಂಭವಾದಾಗಲೇ ಇಡೀ ಮೈದಾನಕ್ಕೆ ಹೊದಿಕೆ ಹೊದಿಸಿದರೂ ಮೈದಾನದ ಕೆಲ ಭಾಗಗಳಲ್ಲಿ ನೀರು ಶೇಖರಣೆ ಆಗಿತ್ತು. ನೀರು ಹೊರ ತೆಗೆಯಲು ಸಿಬ್ಬಂದಿ ಹಲವು ಮಾರ್ಗಗಳನ್ನು ಅನುಸರಿಸಿದರು. ಮೊದಲು ಸ್ಪಾಂಜ್‌ಗಳ ಮೂಲಕ ನೀರನ್ನು ಹೊರಗೆಳೆಯಲಾಯಿತು. ಆ ನಂತರ ಒದ್ದೆಯಿದ್ದ ಜಾಗಕ್ಕೆ ಮರದ ಪುಡಿ ಉದುರಿಸಿ ತೇವಾಂಶ ಹೀರಿಕೊಳ್ಳುವಂತೆ ಮಾಡಲಾಯಿತು. ಪಿಚ್‌ನಲ್ಲಿದ್ದ ತೇವಾಂಶ ಕಡಿಮೆ ಮಾಡಲು ಮೂರು ಫ್ಯಾನ್‌ಗಳನ್ನು ಒಳಗೊಂಡ ಒಂದು ಯಂತ್ರವನ್ನು ಇರಿಸಿ ಪ್ರಯತ್ನಿಸಲಾಯಿತು. ಇಷ್ಟೆಲ್ಲಾ ಹರಸಾಹಸ ಪಟ್ಟು ಆಟ ಪುನಾರಂಭಗೊಳ್ಳಲು ಅನುವು ಮಾಡಿಕೊಡುತ್ತಿದ್ದಾಗ ಮತ್ತೆ ಮಳೆ ಶುರುವಾದ ಕಾರಣ ಸಿಬ್ಬಂದಿ ಸಿಬ್ಬಂದಿಯ ಶ್ರಮ ವ್ಯರ್ಥವಾಯಿತು.