Asianet Suvarna News Asianet Suvarna News

Asia Cup 2023 ರಕ್ತ ಸುರಿಯುತ್ತಿದ್ದ ಪಾಕ್‌ ಆಟಗಾರನ ಯೋಗಕ್ಷೇಮ ವಿಚಾರಿಸಿದ 'ಸೆಂಚುರಿ ವೀರ ಕನ್ನಡಿಗ' ರಾಹುಲ್..!

ಭಾರತ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ಪರ ಅಘಾ ಸಲ್ಮಾನ್, ಕೊಂಚ ಪ್ರತಿರೋಧ ತೋರುವ ಯತ್ನ ನಡೆಸಿದರು. ಅಘಾ ಸಲ್ಮಾನ್ ಬ್ಯಾಟಿಂಗ್ ನಡೆಸುವ ವೇಳೆ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಚೆಂಡು ನಿರೀಕ್ಷೆಗೂ ಮೀರಿ ಪುಟಿತ ಕಂಡ ಚೆಂಡು, ಬ್ಯಾಟ್‌ಗ ಅಂಚಿಗೆ ತಾಗಿ ನೇರವಾಗಿ ಮುಖಕ್ಕೆ ಅಪ್ಪಳಿಸಿದೆ. ಚೆಂಡು ಮುಖಕ್ಕೆ ಅಪ್ಪಳಿಸಿದ ರಬಸಕ್ಕೆ ಅವರ ಮುಖದಿಂದ ರಕ್ತ ಸುರಿಯಲಾರಂಭಿಸಿತು.

Asia Cup 2023 Pakistan Cricketer Left Bleeding After Injury KL Rahul Gesture Goes Viral kvn
Author
First Published Sep 12, 2023, 11:50 AM IST

ಕೊಲಂಬೊ(ಸೆ.12): ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಪಾಕಿಸ್ತಾನ ಎದುರು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಭಾರೀ ಅಂತರದ ಗೆಲುವು ದಾಖಲಿಸಿದೆ. ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಮತ್ತು ಕನ್ನಡಿಗ ಕೆ ಎಲ್ ರಾಹುಲ್ ಬಾರಿಸಿದ ಅಜೇಯ ಶತಕ ಹಾಗೂ ಕುಲ್ದೀಪ್ ಯಾದವ್ ಮಾಂತ್ರಿಕ ಸ್ಪಿನ್ ದಾಳಿಯ ನೆರವಿನಿಂದ ಪಾಕಿಸ್ತಾನ ಎದುರು ಭಾರತ 228 ರನ್ ಅಂತರದ ಗೆಲುವು ಸಾಧಿಸಿದೆ. ಇನ್ನು ಇದೇ ಪಂದ್ಯದ ವೇಳೆ ಪಾಕಿಸ್ತಾನದ ಬ್ಯಾಟರ್ ಅಘಾ ಸಲ್ಮಾನ್ ಬ್ಯಾಟಿಂಗ್ ಮಾಡುವ ವೇಳೆ ಚೆಂಡು ಮುಖಕ್ಕೆ ಅಪ್ಪಳಿಸಿ ಗಾಯಗೊಂಡಾಗ ತಕ್ಷಣ ಪಾಕ್ ಆಟಗಾರ ಬಳಿ ಹೋಗಿ ಕೆ ಎಲ್ ರಾಹುಲ್ ಯೋಗಕ್ಷೇಮ ವಿಚಾರಿಸಿ ಗಮನ ಸೆಳೆದಿದ್ದಾರೆ. 

ಹೌದು, ಭಾರತ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ಪರ ಅಘಾ ಸಲ್ಮಾನ್, ಕೊಂಚ ಪ್ರತಿರೋಧ ತೋರುವ ಯತ್ನ ನಡೆಸಿದರು. ಅಘಾ ಸಲ್ಮಾನ್ ಬ್ಯಾಟಿಂಗ್ ನಡೆಸುವ ವೇಳೆ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಚೆಂಡು ನಿರೀಕ್ಷೆಗೂ ಮೀರಿ ಪುಟಿತ ಕಂಡ ಚೆಂಡು, ಬ್ಯಾಟ್‌ಗ ಅಂಚಿಗೆ ತಾಗಿ ನೇರವಾಗಿ ಮುಖಕ್ಕೆ ಅಪ್ಪಳಿಸಿದೆ. ಚೆಂಡು ಮುಖಕ್ಕೆ ಅಪ್ಪಳಿಸಿದ ರಬಸಕ್ಕೆ ಅವರ ಮುಖದಿಂದ ರಕ್ತ ಸುರಿಯಲಾರಂಭಿಸಿತು. ನೋವಿನಿಂದ ಸಂಕಟ ಪಡುತ್ತಿದ್ದ ಅಘಾ ಸಲ್ಮಾನ್ ಅವರ ಬಳಿ ತಕ್ಷಣವೇ ತೆರಳಿದ ಕೆ ಎಲ್ ರಾಹುಲ್, ಮಾನವೀಯತೆಯ ದೃಷ್ಟಿಯಿಂದ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಇದಾದ ಬಳಿಕ ಪಾಕಿಸ್ತಾನದ ಫಿಸಿಯೋ ಮೈದಾನಕ್ಕೆ ಬಂದು, ಅವರ ಗಾಯದ ತೀವ್ರತೆಯ ಪ್ರಮಾಣವನ್ನು ಪರಿಶೀಲಿಸಿದರು. ಪಾಕ್ ಆಟಗಾರನ ನೋವಿಗೆ ಮೊದಲು ಸ್ಪಂದಿಸಿದ ಕೆ ಎಲ್ ರಾಹುಲ್ ನಡೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ನಿಗದಿತ 50 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 356 ರನ್ ಬಾರಿಸಿತು. ನಾಯಕ ರೋಹಿತ್ ಶರ್ಮಾ(56) ಹಾಗೂ ಶುಭ್‌ಮನ್ ಗಿಲ್(58) ತಲಾ ಅರ್ಧಶತಕ ಸಿಡಿಸಿ ವಿಕೆಟ್ ಒಪ್ಪಿಸಿದರೆ, ಮಾಜಿ ನಾಯಕ ವಿರಾಟ್ ಕೊಹ್ಲಿ(122*) ಹಾಗೂ ಕೆ ಎಲ್ ರಾಹುಲ್(111*) ಅಜೇಯ ಶತಕ ಸಿಡಿಸಿದರು. ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 47ನೇ ಏಕದಿನ ಶತಕ ಸಿಡಿಸಿ ಮಿಂಚಿದರು. ಇನ್ನು 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗಾಯಗೊಂಡು ಕೆಲವು ತಿಂಗಳು ಸ್ಪರ್ಧಾತ್ಮಕ ಕ್ರಿಕೆಟ್‌ನಿಂದಲೇ ದೂರ ಉಳಿದಿದ್ದ ಕೆ ಎಲ್ ರಾಹುಲ್, ತಾವು ಕಮ್‌ಬ್ಯಾಕ್ ಮಾಡಿದ ಮೊದಲ ಪಂದ್ಯದಲ್ಲೇ ಬಲಾಢ್ಯ ಪಾಕಿಸ್ತಾನ ಎದುರು ಅಜೇಯ ಶತಕ ಸಿಡಿಸುವ ಮೂಲಕ ತಾವು ಮುಂಬರುವ ಏಕದಿನ ವಿಶ್ವಕಪ್‌ಗೆ ಸಂಪೂರ್ಣ ಫಿಟ್ ಆಗಿದ್ದೇನೆ ಎನ್ನುವುದನ್ನು ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ.

Virat Kohli ಶತಕವನ್ನು ನಾಲ್ಕು ಪದಗಳಲ್ಲಿ ವರ್ಣಿಸಿದ ಅನುಷ್ಕಾ ಶರ್ಮಾ..!

ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಕೆ ಎಲ್ ರಾಹುಲ್, ಆರಂಭದಿಂದಲೇ ಆಕ್ರಮಣಕಾರಿ ಆಟವಾಡುವ ಮೂಲಕ ವಿರಾಟ್ ಕೊಹ್ಲಿ ಜತೆ ದ್ವಿಶತಕದ ಜತೆಯಾಟವಾಡಿ ಮಿಂಚಿದರು. ಮೂರನೇ ವಿಕೆಟ್‌ಗೆ ಕೆ ಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಮುರಿಯದ 233 ರನ್‌ಗಳ ಜತೆಯಾಟವಾಡಿದರು. ಇದು ಮೂರನೇ ವಿಕೆಟ್‌ಗೆ ಪಾಕಿಸ್ತಾನ ವಿರುದ್ದ ಮೂಡಿಬಂದ ಗರಿಷ್ಠ ರನ್ ಜತೆಯಾಟ ಎನಿಸಿಕೊಂಡಿತು.

Follow Us:
Download App:
  • android
  • ios