ತಂದೆಯಾದ ಬುಮ್ರಾಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಪಾಕ್ ವೇಗಿ ಶಾಹೀನ್ ಅಫ್ರಿದಿ..! ಹೃದಯಗೆದ್ದ ವಿಡಿಯೋ ವೈರಲ್
ಸುಂದರ ಕ್ಷಣಕ್ಕೆ ಸಾಕ್ಷಿಯಾದ ಏಷ್ಯಾಕಪ್ ಟೂರ್ನಿಯ ಭಾರತ-ಪಾಕಿಸ್ತಾನ ನಡುವಿನ ಪಂದ್ಯ
ತಂದೆಯಾದ ಬುಮ್ರಾಗೆ ಪಾಕ್ ವೇಗಿಯಿಂದ ಸರ್ಪ್ರೈಸ್ ಗಿಫ್ಟ್
ಕ್ರಿಕೆಟ್ ಅಭಿಮಾನಿಗಳ ಮನಗೆದ್ದ ಈ ವಿಡಿಯೋ
ಕೊಲಂಬೊ(ಸೆ.11): ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳೆಂದು ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಗುರುತಿಸಿಕೊಂಡಿವೆ. ಆದರೆ ಮೈದಾನದಾಚೆಗೆ ಉಭಯ ದೇಶಗಳ ಆಟಗಾರರ ನಡುವೆ ಉತ್ತಮ ಬಾಂಧವ್ಯ ಹಾಗೂ ಒಡನಾಟಗಳಿವೆ. ಮೈದಾನದೊಳಗೆ ಉಭಯ ದೇಶದ ಆಟಗಾರರು ಜಿದ್ದಿಗೆ ಬಿದ್ದವರಂತೆ ಸೆಣಸಾಟ ನಡೆಸುತ್ತಾರೆ. ಆದರೆ ಮೈದಾನದ ಹೊರಗೇ ಇದೇ ಆಟಗಾರರು ನಗುನಗುತ್ತಾ ಮಾತಾನಾಡುವುದನ್ನು ನಾವೆಲ್ಲರೂ ಈಗಾಗಲೇ ನೋಡಿದ್ದೇವೆ. ಇದೀಗ ಅಂತಹದ್ದೇ ಒಂದು ಘಟನೆ ಏಷ್ಯಾಕಪ್ ಟೂರ್ನಿಯು ನಡೆಯುತ್ತಿರುವ ಸಂದರ್ಭದಲ್ಲಿ ನಡೆದಿದೆ.
ಹೌದು, ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಭಾನುವಾರ ಭಾರತ ಹಾಗೂ ಪಾಕಿಸ್ತಾನ ತಂಡಗಳು ಇಲ್ಲಿನ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿದ್ದವು. 24.1 ಓವರ್ ಅಂತ್ಯದ ವೇಳೆಗೆ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ. ಈ ಗ್ಯಾಪ್‌ನಲ್ಲಿ ಪಾಕಿಸ್ತಾನದ ಮಾರಕ ವೇಗಿ ಶಾಹೀನ್ ಅಫ್ರಿದಿ, ಇತ್ತೀಚೆಗಷ್ಟೇ ತಂದೆಯಾದ ಜಸ್ಪ್ರೀತ್ ಬುಮ್ರಾ ಅವರಿಗೆ ಒಂದು ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ಈ ಸೌಹಾರ್ಧದ ನಡೆ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಇತ್ತೀಚೆಗಷ್ಟೇ ಜಸ್ಪ್ರೀತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್ ಗಂಡು ಮಗುವಿಗೆ ಜನ್ಮನೀಡಿದ್ದರು. ಈ ಗಂಡು ಮಗುವಿಗೆ ಅಂಗದ್ ಜಸ್ಪ್ರೀತ್ ಬುಮ್ರಾ ಎನ್ನುವ ಹೆಸರಿಡಲಾಗಿದೆ. ಇದೀಗ ಅಂಗದ್‌ಗೆ ಪಾಕ್ ಎಡಗೈ ವೇಗಿ ಶಾಹೀನ್ ಅಫ್ರಿದಿ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. ಇದಾದ ಬಳಿಕ ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಶುಭ ಹಾರೈಸಿದ್ದಾರೆ.
ಜಂಬೋಗೂ ತಟ್ಟಿದ ಮುಷ್ಕರದ ಬಿಸಿ; ಕ್ಯಾಬ್ ಸಿಗದೇ BMTC ಬಸ್‌ನಲ್ಲಿ ಮನೆ ಸೇರಿದ ಅನಿಲ್ ಕುಂಬ್ಳೆ
ಈ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸಂತೋಷವನ್ನು ಹಂಚಿಕೊಳ್ಳೋಣ. ತಂದೆಯಾದ ಬುಮ್ರಾಗೆ ಶಾಹೀನ್ ಅಫ್ರಿದಿಯಿಂದ ನಗುವಿನ ಸಂದೇಶ ಎಂದು ಬರೆದುಕೊಂಡಿದೆ.
ಇನ್ನು ಪಂದ್ಯದ ಬಗ್ಗೆ ಹೇಳುವುದಾದರೇ, ಭಾರತ ಭಾನುವಾರ 24.1 ಓವರ್ ಬ್ಯಾಟ್ ಮಾಡಿದ್ದು, 2 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿದೆ. ಆಟ ಎಲ್ಲಿ ನಿಂತಿದೆಯೋ ಸೋಮವಾರ ಅಲ್ಲಿಂದಲೇ ಆರಂಭಗೊಳ್ಳಲಿದೆ. ಕಳೆದ ಪಂದ್ಯದಲ್ಲಿ ವಿಫಲರಾಗಿದ್ದ ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ ಈ ಪಂದ್ಯದಲ್ಲಿ ಅಬ್ಬರಿಸಿ 16.4 ಓವರ್‌ಗಳಲ್ಲಿ 121 ರನ್ ಜೊತೆಯಾಟವಾಡಿದರು. ರೋಹಿತ್ 56, ಗಿಲ್ 58 ರನ್ ಗಳಿಸಿ ಔಟಾದರು. ಸದ್ಯ ಕೆ.ಎಲ್.ರಾಹುಲ್(17), ವಿರಾಟ್ ಕೊಹ್ಲಿ(08) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಭಾರತ-ಪಾಕ್ ಏಷ್ಯಾಕಪ್ ಸೂಪರ್ 4 ಪಂದ್ಯ ರದ್ದು, ಮೀಸಲು ದಿನದಲ್ಲಿ ಪಂದ್ಯ ಪುನರ್ ಆರಂಭ!
ಕಳೆದ ವಾರ ಕೊಲಂಬೊದಲ್ಲಿ ಭಾರಿ ಮಳೆಯಾಗಿತ್ತು. ಆದರೆ ಕಳೆದೆರಡು ದಿನದಿಂದ ಬಿಸಿಲಿನ ವಾತಾವರಣವಿದ್ದ ಕಾರಣ ಪಂದ್ಯಕ್ಕೆ ಮಳೆ ಅಡ್ಡಿಯಾಗುವುದಿಲ್ಲ ಎಂದೇ ಭಾವಿಸಲಾಗಿತ್ತು. ಭಾನುವಾರ ನಿಗದಿತ ಸಮಯಕ್ಕೆ ಸರಿಯಾಗಿ ಪಂದ್ಯ ಆರಂಭಗೊಂಡು, ಭಾರತ 24.1 ಓವರ್ ಬ್ಯಾಟ್ ಮಾಡಿತ್ತು. ಸಂಜೆ 4.45ರ ವೇಳೆಗೆ ಆರಂಭಗೊಂಡ ಮಳೆ ಸುಮಾರು ಎರಡೂವರೆ ಗಂಟೆ ಕಾಲ ಸುರಿಯಿತು. ಆ ಬಳಿಕ ಮೈದಾನ ಒಣಗಿಸಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಇನ್ನೇನು ರಾತ್ರಿ 9ರ ವೇಳೆಗೆ ಓವರ್ ಕಡಿತಗೊಳಿಸಿ ಆಟ ಪುನಾರಂಭಿಸುವ ಸುಳಿವನ್ನು ಅಂಪೈರ್‌ಗಳು ನೀಡುವ ವೇಳೆಗೆ ಮತ್ತೆ ಮಳೆ ಆರಂಭವಾದ ಕಾರಣ, ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಯಿತು.