Asia Cup: 4 ವರ್ಷಗಳ ಬಳಿಕ ಭಾರತ vs ಪಾಕಿಸ್ತಾನ ಏಕದಿನ ಕದನ..!

ಏಷ್ಯಾಕಪ್ ಟೂರ್ನಿಯಲ್ಲಿಂದು ಹೈವೋಲ್ಟೇಜ್ ಪಂದ್ಯ
ವಿಶ್ವಕಪ್ ಸಿದ್ದತೆಗೆ ಸಿಗುತ್ತಾ ವರುಣನ ಕೃಪೆ
ಮಳೆ ಮುನ್ಸೂಚನೆ, ಪಂದ್ಯ ತಡವಾಗಿ ಆರಂಭವಾಗುವ ಸಾಧ್ಯತೆ

Asia Cup 2023 India take on Pakistan in ODI format after 4 years kvn

ಪಲ್ಲಕೆಲೆ(ಸೆ.02): ಪ್ರತಿಯೊಬ್ಬ ಕ್ರಿಕೆಟ್‌ ಅಭಿಮಾನಿಯೂ ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಕಾಯುತ್ತಾನೆ. ಏಷ್ಯಾಕಪ್‌ ಟೂರ್ನಿ ಬದ್ಧವೈರಿಗಳ ನಡುವಿನ ಕಾದಾಟಕ್ಕೆ ವೇದಿಕೆಯಾಗುತ್ತಿದ್ದು, ಶನಿವಾರ ಇಲ್ಲಿ ಬಹುನಿರೀಕ್ಷಿತ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ. ಈ ಪಂದ್ಯ ತನ್ನದೇ ರೀತಿಯಲ್ಲಿ ವಿಶೇಷತೆ ಪಡೆದಿದ್ದು, 4 ವರ್ಷ ಬಳಿಕ ಉಭಯ ತಂಡಗಳು ಏಕದಿನ ಮಾದರಿಯಲ್ಲಿ ಮುಖಾಮುಖಿಯಾಗಲಿವೆ. ಪಲ್ಲಕೆಲೆಯಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೂ ಮಳೆ ಮುನ್ಸೂಚನೆ ಇದ್ದು, ಪಂದ್ಯಕ್ಕೆ ಅಡ್ಡಿಯಾಗುವ ಆತಂಕವಿದೆ.

ಎರಡೂ ತಂಡಗಳು ಕೊನೆಯ ಬಾರಿಗೆ ಏಕದಿನ ಪಂದ್ಯವಾಡಿದ್ದು 2019ರ ವಿಶ್ವಕಪ್‌ನಲ್ಲಿ. ಇದೀಗ ಮತ್ತೊಂದು ವಿಶ್ವಕಪ್‌ ಮುಖಾಮುಖಿಗೆ ಒಂದೂವರೆ ತಿಂಗಳಷ್ಟೇ ಬಾಕಿ ಇದ್ದು, ಈ ಪಂದ್ಯ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಸೂಪರ್ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಚಚ್ಚಿ ಗೆಲುವು ತಂದ ರಿಂಕು ಸಿಂಗ್..! ವಿಡಿಯೋ ವೈರಲ್

ಎರಡೂ ತಂಡಗಳು ಪರಸ್ಪರ ಎದುರಾಗುವಾಗ ಭಾರತದ ಬ್ಯಾಟರ್‌ಗಳು ಹಾಗೂ ಪಾಕಿಸ್ತಾನ ವೇಗಿಗಳ ನಡುವಿನ ಪೈಪೋಟಿಯೇ ಹೆಚ್ಚು ಆಸಕ್ತಿ ಕೆರಳಿಸಲಿದೆ. ಈ ಸಲದ ಸನ್ನಿವೇಶವೂ ವಿಭಿನ್ನವಾಗಿಲ್ಲ. ರೋಹಿತ್‌ ಶರ್ಮಾ, ಶುಭ್‌ಮನ್‌ ಗಿಲ್‌ ಹಾಗೂ ವಿರಾಟ್‌ ಕೊಹ್ಲಿಗೆ ಶಾಹೀನ್‌ ಅಫ್ರಿದಿ, ನಸೀಂ ಶಾ, ಹ್ಯಾರಿಸ್‌ ರೌಫ್‌ ಸವಾಲೆಸೆಯಲಿದ್ದಾರೆ.

ಶ್ರೇಯಸ್‌ ಮೇಲೆ ವಿಶ್ವಾಸ: ಶ್ರೇಯಸ್‌ ಅಯ್ಯರ್‌ ವಾಪಸಾಗಿರುವುದು ತಂಡದ ಬ್ಯಾಟಿಂಗ್‌ ಬಲ ಹೆಚ್ಚಿಸುವ ನಿರೀಕ್ಷೆ ಮೂಡಿಸಿದೆ. 2019ರ ಏಕದಿನ ವಿಶ್ವಕಪ್‌ ಬಳಿಕ 4ನೇ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌ರಷ್ಟು ಯಶಸ್ಸು ವಿಶ್ವದ ಮತ್ತಿನ್ಯಾವ ಬ್ಯಾಟರ್‌ಗೂ ಸಿಕ್ಕಿಲ್ಲ. ಅವರು 94.37ರ ಸ್ಟ್ರೈಕ್‌ರೇಟ್‌, 47.35ರ ಸರಾಸರಿಯಲ್ಲಿ 805 ರನ್‌ ಕಲೆಹಾಕಿದ್ದಾರೆ. 2 ಶತಕ ಸಹ ದಾಖಲಾಗಿದೆ. ಕೆ.ಎಲ್‌.ರಾಹುಲ್‌ ಅಲಭ್ಯರಾಗಲಿರುವ ಕಾರಣ, ಇಶಾನ್‌ ಕಿಶನ್‌ಗೆ ಮತ್ತೊಂದು ಅವಕಾಶ ಸಿಗಲಿದೆ.

ಅಂಬಾನಿ ಸಂಸ್ಥೆಗೆ ಭಾರತದ ಪಂದ್ಯಗಳ ಪ್ರಸಾರ ಹಕ್ಕು..! ಮುಂದುವರೆದ ಜಿಯೋ ಅಧಿಪತ್ಯ!

ಹೇಗಿರಲಿದೆ ಬೌಲಿಂಗ್‌ ಸಂಯೋಜನೆ?: ಭಾರತ ತನ್ನ ಕೆಳ ಕ್ರಮಾಂಕವನ್ನು ಬಲಿಷ್ಠಗೊಳಿಸಬೇಕಿದ್ದರೆ ಶಾರ್ದೂಲ್‌ ಠಾಕೂರ್‌ರನ್ನು ಆಡಿಸಬೇಕು. ಇಲ್ಲವಾದಲ್ಲಿ ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಸಿರಾಜ್‌, ಮೊಹಮದ್‌ ಶಮಿಯೊಂದಿಗೆ ಆಡಬಹುದು. ಕುಲ್ದೀಪ್‌ ಯಾದವ್‌ ಆಡುವುದು ಬಹುತೇಕ ಖಚಿತವೆನಿಸಿದ್ದು, ರವೀಂದ್ರ ಜಡೇಜಾ ಹಾಗೂ ಹಾರ್ದಿಕ್‌ ಪಾಂಡ್ಯ ಆಲ್ರೌಂಡರ್‌ಗಳ ಸ್ಥಾನ ನಿರ್ವಹಿಸಲಿದ್ದಾರೆ.

ಪಾಕ್‌ಗೂ ಸಮಸ್ಯೆ!: ಪಾಕಿಸ್ತಾನ ಹೆಚ್ಚಾಗಿ ತನ್ನ ನಾಯಕ ಬಾಬರ್‌ ಆಜಂರನ್ನೇ ನೆಚ್ಚಿಕೊಂಡಿದೆ. ಆರಂಭಿಕರಾದ ಫಖರ್‌ ಜಮಾನ್‌ ಹಾಗೂ ಇಮಾಮ್‌ ಉಲ್‌-ಹಕ್‌ ಲಯದಲಿಲ್ಲ. ಪ್ರಮುಖವಾಗಿ ಫಖರ್‌, ಸತತ 3 ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ ಬಳಿಕ ಕಳೆದ 7 ಇನ್ನಿಂಗ್ಸಲ್ಲಿ ಕೇವಲ 139 ರನ್‌ ಕಲೆಹಾಕಿದ್ದಾರೆ. ಬ್ಯಾಟಿಂಗ್‌ ಸಮತೋಲನಕ್ಕಾಗಿ ಮೊಹಮದ್‌ ರಿಜ್ವಾನ್‌ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದು, 4, 5 ಹಾಗೂ 6ನೇ ಕ್ರಮಾಂಕದ ಸಮಸ್ಯೆ ಪಾಕಿಸ್ತಾನವನ್ನು ಹೆಚ್ಚುಕಾಡುತ್ತಿದೆ. ಇದರಿಂದಾಗಿ ಇಫ್ತಿಕಾರ್‌ ಅಹ್ಮದ್‌ ಹಾಗೂ ಶದಾಬ್‌ ಖಾನ್‌ ಮೇಲೆ ಅಧಿಕ ಒತ್ತಡ ಬೀಳುತ್ತಿದೆ. ಆದರೂ ಭಾರತಕ್ಕಿಂತ ಬಲಿಷ್ಠ ಬ್ಯಾಟಿಂಗ್‌ ಲೈನ್‌-ಅಪ್‌ನ ಬಲ ಪಾಕಿಸ್ತಾನಕ್ಕಿದೆ.

ಉಭಯ ತಂಡಗಳ ನಡುವಿನ ಕಳೆದ 5 ಮುಖಾಮುಖಿಗಳಲ್ಲಿ ಭಾರತ 4ರಲ್ಲಿ ಗೆದ್ದಿದ್ದು, ಪಾಕಿಸ್ತಾನ 1 ಪಂದ್ಯ ಜಯಿಸಿದೆ. ಈ ಪಂದ್ಯದಲ್ಲೂ ಭರ್ಜರಿ ಪೈಪೋಟಿ ಎದುರಾಗಬಹುದು.

ಒಟ್ಟು ಮುಖಾಮುಖಿ: 132

ಭಾರತ: 55

ಪಾಕಿಸ್ತಾನ: 73

ರದ್ದು: 04

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್‌ ಗಿಲ್‌, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಇಶಾನ್ ಕಿಶನ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್/ಮೊಹಮ್ಮದ್ ಶಮಿ, ಕುಲ್ದೀಪ್‌ ಯಾದವ್, ಮೊಹಮ್ಮದ್ ಸಿರಾಜ್‌, ಜಸ್ಪ್ರೀತ್ ಬುಮ್ರಾ.

ಪಾಕಿಸ್ತಾನ: ಫಖರ್‌ ಜಮಾನ್, ಇಮಾಮ್ ಇಮಾಮ್‌, ಬಾಬರ್‌ ಅಜಂ(ನಾಯಕ), ಮೊಹಮ್ಮದ್ ರಿಜ್ವಾನ್‌, ಅಘಾ ಸಲ್ಮಾನ್‌, ಇಫ್ತಿಕಾರ್‌ ಅಹಮ್ಮದ್, ಶಾಬಾದ್ ಖಾನ್, ಮೊಹಮ್ಮದ್ ನವಾಜ್‌, ಶಾಹೀನ್‌ ಅಫ್ರಿದಿ, ನಸೀಂ ಶಾ, ಹ್ಯಾರಿಸ್ ರೌಫ್‌.

ಪಂದ್ಯ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌

ಪಿಚ್‌ ರಿಪೋರ್ಟ್‌

ಈ ಪಂದ್ಯವು ಹೊಸ ಪಿಚ್‌ ಮೇಲೆ ನಡೆಯಲಿದೆ. ಬಾಂಗ್ಲಾ-ಲಂಕಾ ಪಂದ್ಯಕ್ಕೆ ಬಳಸಿದ್ದ ಪಿಚ್‌ನಂತೆಯೇ ಈ ಪಿಚ್‌ ಸಹ ವರ್ತಿಸಿದರೆ ವೇಗಿಗಳು ಹಾಗೂ ಸ್ಪಿನ್ನರ್‌ಗಳಿಬ್ಬರಿಗೂ ನೆರವು ಸಿಗಲಿದ್ದು, ಬ್ಯಾಟರ್‌ಗಳಿಗೆ ಕಷ್ಟವಾಗಬಹುದು. ಬೆಳಗ್ಗಿನಿಂದ ಮಧ್ಯಾಹ್ನದ ವರೆಗೂ ಮಳೆ ಮುನ್ಸೂಚನೆ ಇದ್ದು, ಪಂದ್ಯ ಆರಂಭವಾಗುವುದು ತಡವಾಗಬಹುದು ಎನ್ನಲಾಗುತ್ತಿದೆ.

Latest Videos
Follow Us:
Download App:
  • android
  • ios