ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಆತಿಥ್ಯದ ಗೊಂದಲಕ್ಕೆ ತೆರೆ ಎಳೆದ ಸೌರವ್ ಗಂಗೂಲಿಏಷ್ಯಾಕಪ್ ಆತಿಥ್ಯದಿಂದ ಹಿಂದೆ ಸರಿದಿದ್ದ ಶ್ರೀಲಂಕಾ ಕ್ರಿಕೆಟ್ ಮಂಡಳಿಈ ಬಾರಿಯ ಏಷ್ಯಾಕಪ್ ಯುಎಇನಲ್ಲಿ ನಡೆಯಲಿದೆ ಎಂದ ದಾದಾ

ಮುಂಬೈ(ಜು.22): ಶ್ರೀಲಂಕಾದಲ್ಲಿ ನಿಗದಿಯಾಗಿದ್ದ ಏಷ್ಯಾಕಪ್‌ ಟಿ20 ಟೂರ್ನಿ ರಾಜಕೀಯ ಘರ್ಷಣೆ, ಆರ್ಥಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಯುಎಇಗೆ ಸ್ಥಳಾಂತರಗೊಂಡಿದೆ. ಇದನ್ನು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಗುರುವಾರ ಖಚಿತಪಡಿಸಿಕೊಂಡಿದ್ದು, ಏಷ್ಯಾ ಕಪ್‌ ಯುಎಇಯಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. ಏಷ್ಯಾ ಕಪ್‌ ಆಗಸ್ಟ್‌ 27ರಿಂದ ಸೆಪ್ಟೆಂಬರ್ 11ರವರೆಗೆ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ರಾಜಕೀಯ ಅರಾಜಕತೆಯಿಂದಾಗಿ ಟೂರ್ನಿ ಅಲ್ಲಿಂದ ಸ್ಥಳಾಂತರಗೊಳ್ಳಲಿದೆ ಎಂದು ಹೇಳಲಾಗಿತ್ತು. ಇತ್ತೀಚೆಗಷ್ಟೇ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯೂ ದೇಶ ಟೂರ್ನಿ ಆಯೋಜಿಸುವ ಸ್ಥಿತಿಯಲ್ಲಿಲ್ಲ ಎಂದಿತ್ತು.

ಇದೀಗ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಮೀಟಿಂಗ್‌ನಲ್ಲಿ ಮಾತನಾಡಿದ ಸೌರವ್‌ ಗಂಗೂಲಿ, ಏಷ್ಯಾಕಪ್ ಟೂರ್ನಿಯು ಯುಎಇನಲ್ಲಿ ನಡೆಯಲಿದೆ. ಯಾಕೆಂದರೆ ಯುಎಇನಲ್ಲಿ ಮಾತ್ರ ಮಳೆಯಿರುವುದಿಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಮುಂಬರುವ ಏಷ್ಯಾಕಪ್‌ ಟಿ20 ಟೂರ್ನಿಯನ್ನು ಆಯೋಜಿಸಲು ಸಾಧ್ಯವಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿ(ಎಸ್‌ಎಲ್‌ಸಿ) ಬುಧವಾರ ಏಷ್ಯಾ ಕ್ರಿಕೆಟ್‌ ಸಮಿತಿ(ಎಸಿಸಿ)ಗೆ ತಿಳಿಸಿತ್ತು. ಆರ್ಥಿಕ ಸಂಕಷ್ಟ ಮತ್ತು ರಾಜಕೀಯ ಘರ್ಷಣೆ ಸಮಸ್ಯೆ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿ 3ನೇ ಆವೃತ್ತಿಯ ಲಂಕಾ ಪ್ರೀಮಿಯರ್‌ ಲೀಗ್‌(ಎಲ್‌ಪಿಎಲ್‌) ಅನ್ನು ಮುಂದೂಡಿದ ಬೆನ್ನಲ್ಲೇ ಏಷ್ಯಾಕಪ್‌ ಆಯೋಜನೆಯಿಂದ ಹಿಂದೆ ಸರಿಯಲು ತೀರ್ಮಾನಿಸಿತ್ತು.

ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ, ಭಾರತ, ಪಾಕಿಸ್ತಾನ, ಆಪ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ಜತೆಗೆ ಏಷ್ಯಾದ ಯುಎಇ, ಕುವೈತ್, ಸಿಂಗಾಪುರ ಅಥವಾ ಹಾಂಕಾಂಗ್ ಈ ತಂಡಗಳ ಪೈಕಿ ಒಂದು ತಂಡ ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡು ಪ್ರಧಾನ ಸುತ್ತಿಗೆ ಲಗ್ಗೆಯಿಡಲಿದೆ.

ರಣಜಿ ಸೇರಿ ದೇಸಿ ಕ್ರಿಕೆಟ್‌ ಟೂರ್ನಿಗಳಿಗೆ ಬಿಸಿಸಿಐ ರೆಡಿ

ನವದೆಹಲಿ: ಕೋವಿಡ್‌ ಕಾರಣದಿಂದ ಸ್ಥಗಿತಗೊಂಡಿದ್ದ ದುಲೀಪ್‌ ಟ್ರೋಪಿ ಹಾಗೂ ಇರಾನಿ ಕಪ್‌ ದೇಸಿ ಕ್ರಿಕೆಟ್‌ ಟೂರ್ನಿಗಳನ್ನು ಮತ್ತೆ ಆಯೋಜಿಸಲು ಬಿಸಿಸಿಐ ಮುಂದಾಗಿದೆ. 2019ರ ಬಳಿಕ ಮೊದಲ ಬಾರಿ ಮತ್ತೆ ಟೂರ್ನಿಗಳು ಆರಂಭಗೊಳ್ಳಲಿದ್ದು, ಸೆಪ್ಟಂಬರ್‌-ಅಕ್ಟೋಬರ್‌ನಲ್ಲಿ ಆಯೋಜಿಸಲು ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌ ಸಭೆಯಲ್ಲಿ ನಿರ್ಧರಿಸಲಾಗಿದೆ. 5 ವಲಯಗಳ ನಡುವಿನ ದುಲೀಪ್‌ ಟ್ರೋಫಿ ಸೆಪ್ಟೆಂಬರ್ 8ಕ್ಕೆ ಆರಂಭಗೊಳ್ಳಲಿದ್ದು, ಸೆಪ್ಟೆಂಬರ್ 25ಕ್ಕೆ ಮುಕ್ತಾಯಗೊಳ್ಳಲಿದೆ. 

ಏಷ್ಯಾಕಪ್‌ ಆಯೋಜಿಸುವ ಸ್ಥಿತಿಯಲ್ಲಿ ನಾವಿಲ್ಲವೆಂದ ಲಂಕಾ ಕ್ರಿಕೆಟ್‌ ಮಂಡಳಿ..!

ಇರಾನಿ ಕಪ್‌ ಅಕ್ಟೋಬರ್ 1ರಿಂದ 5ವರೆಗೆ ನಡೆಯಲಿದೆ. ಸ್ಥಳಗಳು ಇನ್ನಷ್ಟೇ ಅಂತಿಮವಾಗಬೇಕಿದೆ. ಇನ್ನು, ಈ ವರ್ಷದ ರಣಜಿ ಟ್ರೋಫಿ ಡಿಸೆಂಬರ್ 13ಕ್ಕೆ ಆರಂಭಗೊಳ್ಳಲಿದ್ದು, ಜನವರಿ 28ರವರೆಗೆ ಲೀಗ್‌ ಹಂತದ ಪಂದ್ಯಗಳು ನಡೆಯಲಿವೆ. ಫೆ.1ರಿಂದ 28ರ ವರೆಗೆ ನಾಕೌಟ್‌ ಪಂದ್ಯಗಳು ಆಯೋಜನೆಗೊಳ್ಳಲಿವೆ. ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಟೂರ್ನಿ ಅಕ್ಟೋಬರ್ 11ರಿಂದ ನವೆಂಬರ್‌ 22ರವರೆಗೆ, ವಿಜಯ್‌ ಹಜಾರೆ ಏಕದಿನ ಟೂರ್ನಿ ನವೆಂಬರ್ 12ರಿಂದ ಡಿಸೆಂಬರ್ 2ರ ವರೆಗೆ ನಿಗದಿಯಾಗಿವೆ.

2ನೇ ಟಿ20: ಐರ್ಲೆಂಡ್‌ ವಿರುದ್ಧ ಕಿವೀಸ್‌ಗೆ ಗೆಲುವು

ಬೆಲ್‌ಫಾಸ್ಟ್‌(ಐರ್ಲೆಂಡ್‌): ಡೇನ್‌ ಕ್ಲೇವರ್ಸ್‌ ಅಬ್ಬರದ ಬ್ಯಾಟಿಂಗ್‌ ಹಾಗೂ ಮೈಕಲ್‌ ಬ್ರೇಸ್‌ವೆಲ್‌ ಹ್ಯಾಟ್ರಿಕ್‌ ವಿಕೆಟ್‌ ನೆರವಿನಿಂದ ಐರ್ಲೆಂಡ್‌ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್‌ 88 ರನ್‌ ಭರ್ಜರಿ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕೈವಶಪಡಿಸಿಕೊಂಡಿದೆ. 

ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 4 ವಿಕೆಟ್‌ಗೆ 179 ರನ್‌ ಕಲೆ ಹಾಕಿತು. ಕ್ಲೇವರ್ಸ್‌ 55 ಎಸೆತಗಳಲ್ಲಿ 78 ರನ್‌ ಸಿಡಿಸಿದರು. ಕಠಿಣ ಗುರಿ ಬೆನ್ನತ್ತಿದ ಆತಿಥೇಯ ಐರ್ಲೆಂಡ್‌ 13.5 ಓವರ್‌ಗಳಲ್ಲಿ 91 ರನ್‌ಗೆ ಆಲೌಟಾಯಿತು. ಮಾರ್ಕ್ ಅಡೈರ್‌ 27 ರನ್‌ ಗಳಿಸಿದರು. ಬ್ರೇಸ್‌ವೆಲ್‌ ಅಂ.ರಾ. ಟಿ20ಯ ತಮ್ಮ ಮೊದಲ ಓವರಲ್ಲೇ ಹ್ಯಾಟ್ರಿಕ್‌ ಕಿತ್ತ ಸಾಧನೆ ಮಾಡಿದರು.