ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ ಬಹುತೇಕ ಯುಎಇನಿಂದು ಶಿಫ್ಟ್ ಸಾಧ್ಯತೆ  6 ರಾಷ್ಟ್ರಗಳು ಪಾಲ್ಗೊಳ್ಳಲಿರುವ ಮಹತ್ವದ ಏಷ್ಯಾಕಪ್‌ ಕ್ರಿಕೆಟ್ ಟೂರ್ನಿಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸದ್ಯದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ

ಕರಾಚಿ(ಜು.21): ಮುಂಬರುವ ಏಷ್ಯಾಕಪ್‌ ಟಿ20 ಟೂರ್ನಿಯನ್ನು ಆಯೋಜಿಸಲು ಸಾಧ್ಯವಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿ(ಎಸ್‌ಎಲ್‌ಸಿ) ಬುಧವಾರ ಏಷ್ಯಾ ಕ್ರಿಕೆಟ್‌ ಸಮಿತಿ(ಎಸಿಸಿ)ಗೆ ತಿಳಿಸಿದೆ ಎಂದು ಮೂಲಗಳು ಮಾಹಿತಿ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಆರ್ಥಿಕ ಸಂಕಷ್ಟ ಮತ್ತು ರಾಜಕೀಯ ಘರ್ಷಣೆ ಸಮಸ್ಯೆ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿ 3ನೇ ಆವೃತ್ತಿಯ ಲಂಕಾ ಪ್ರೀಮಿಯರ್‌ ಲೀಗ್‌(ಎಲ್‌ಪಿಎಲ್‌) ಅನ್ನು ಮುಂದೂಡಿದ ಬೆನ್ನಲ್ಲೇ ಏಷ್ಯಾಕಪ್‌ ಆಯೋಜನೆಯಿಂದ ಹಿಂದೆ ಸರಿಯಲು ನಿರ್ಧರಿಸಿದೆ ಎನ್ನಲಾಗಿದೆ. ಕೆಲವೇ ದಿನಗಳಲ್ಲಿ ಎಸಿಸಿ ಟೂರ್ನಿ ಸ್ಥಳಾಂತರದ ಬಗ್ಗೆ ಅಧಿಕೃತ ಮಾಹಿತಿ ನೀಡುವ ನಿರೀಕ್ಷೆ ಇದೆ. ಯುಎಇ ಇಲ್ಲವೇ ಬೇರಾರ‍ಯವುದೇ ರಾಷ್ಟ್ರಕ್ಕೆ ಟೂರ್ನಿ ಸ್ಥಳಾಂತರವಾಗಬಹುದು. ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ಟೂರ್ನಿ ನಡೆಯಬೇಕಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಸದ್ಯ ದೇಶದಲ್ಲಿರುವ ಆರ್ಥಿಕ ಪರಿಸ್ಥಿತಿ ಹಾಗೂ ರಾಜಕೀಯ ಘರ್ಷಣೆ ಮುಂತಾದ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಅದರಲ್ಲೂ ಮುಖ್ಯವಾಗಿ ವಿದೇಶಿ ವಿನಿಮಯವನ್ನು ಗಮನದಲ್ಲಿಟ್ಟುಕೊಂಡು 6 ರಾಷ್ಟ್ರಗಳು ಪಾಲ್ಗೊಳ್ಳಲಿರುವ ಮಹತ್ವದ ಟೂರ್ನಿಯನ್ನು ಸದ್ಯ ದ್ವೀಪರಾಷ್ಟ್ರದಲ್ಲಿ ಆಯೋಜಿಸಲು ಸಾಧ್ಯವಿಲ್ಲ ಎನ್ನುವ ತೀರ್ಮಾನಕ್ಕೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಬಂದಿದೆ ಎನ್ನುವುದನ್ನು ಎಸಿಸಿ ಮೂಲಗಳು ತಿಳಿಸಿವೆ.

ಶ್ರೀಲಂಕಾ ಕ್ರಿಕೆಟ್‌ ಮಂಡಳಿಯು ಅಧಿಕೃತವಾಗಿಯೇ ಈ ವಿಷಯವನ್ನು ಏಷ್ಯನ್ ಕ್ರಿಕೆಟ್ ಸಮಿತಿ(ಎಸಿಸಿ)ಗೆ ತಿಳಿಸಿದೆ ಎನ್ನಲಾಗಿದೆ. ಹೀಗಾಗಿ ಎಸಿಸಿ ಎಲ್ಲಿ ಟೂರ್ನಿ ಆಯೋಜಿಸಬೇಕು ಎನ್ನುವ ಕುರಿತಾಗಿ ಚಿಂತನೆ ನಡೆಸುತ್ತಿದೆ. ಈ ಬಾರಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಬಹುತೇಕ ಯುಎಇನಲ್ಲಿ ಆಯೋಜಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Asia Cup ಯುಎಇಗೆ ಶಿಫ್ಟ್ ಸಾಧ್ಯತೆ: ಶ್ರೀಲಂಕಾ ಕ್ರಿಕೆಟ್

ಈ ವಿಚಾರವಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸದ್ಯದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸಲಿದೆ ಎನ್ನಲಾಗಿದೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಜರುಗಲಿದ್ದು, ಇದಕ್ಕೂ ಮುನ್ನ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯು ನಡೆಯಲಿದೆ. ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ, ಭಾರತ, ಪಾಕಿಸ್ತಾನ, ಆಪ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ಜತೆಗೆ ಏಷ್ಯಾದ ಯುಎಇ, ಕುವೈತ್, ಸಿಂಗಾಪುರ ಅಥವಾ ಹಾಂಕಾಂಗ್ ಈ ತಂಡಗಳ ಪೈಕಿ ಒಂದು ತಂಡ ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡು ಪ್ರಧಾನ ಸುತ್ತಿಗೆ ಲಗ್ಗೆಯಿಡಲಿದೆ. 

ಯುಎಇನಲ್ಲಿಯೇ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ನಡೆಸಬೇಕು ಎಂದು ಈಗಲೇ ಅಂತಿಮ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಬೇರೆ ದೇಶಗಳಲ್ಲೂ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಆಯೋಜನೆಗೊಂಡರೆ ಅಚ್ಚರಿಯೇನಿಲ್ಲ. ಭಾರತ ಕೂಡಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಸದಸ್ಯ ರಾಷ್ಟ್ರವಾಗಿದೆ. ಮೊದಲಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯವರು ಎಮಿರೇಟ್ಸ್‌ ಕ್ರಿಕೆಟ್ ಬೋರ್ಡ್‌ ಜತೆ ಮಾತನಾಡಲಿದ್ದಾರೆ. ಅಲ್ಲಿ ಅಂತಿಮ ಒಪ್ಪಿಗೆ ಸಿಕ್ಕಿದ ಬಳಿಕವಷ್ಟೇ ಒಂದು ತೀರ್ಮಾನಕ್ಕೆ ಬರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಈ ಬಾರಿ ಏಷ್ಯಾಕಪ್ ಟೂರ್ನಿಯು ಯುಎಇಗೆ ಸ್ಥಳಾಂತರವಾದರೇ ಕಳೆದ 5 ವರ್ಷಗಳಲ್ಲಿ ಎರಡನೇ ಬಾರಿಗೆ ಏಷ್ಯಾಕಪ್ ಟೂರ್ನಿಗೆ ಯುಎಇ ಆತಿಥ್ಯ ವಹಿಸಿದಂತಾಗುತ್ತದೆ. 2018ರಲ್ಲೂ ಯುಎಇ, ಏಷ್ಯಾಕಪ್ ಟೂರ್ನಿಗೆ ಆತಿಥ್ಯ ವಹಿಸಿತ್ತು.