Ind vs Pak ಬಾಬರ್ ಅಜಂ ಮಾಡಿದ ಒಂದು ತಪ್ಪನ್ನು ಗುರುತಿಸಿದ ಪಾಕ್ ಮಾಜಿ ಕ್ರಿಕೆಟ್..!
* ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಎದುರು ರೋಚಕ ಸೋಲು ಕಂಡ ಪಾಕಿಸ್ತಾನ
* ಬದ್ದ ಎದುರಾಳಿ ಪಾಕಿಸ್ತಾನ ಎದುರು ಭಾರತಕ್ಕೆ 5 ವಿಕೆಟ್‌ಗಳ ಗೆಲುವು
* ಭಾರತ ಎದುರಿನ ಪಂದ್ಯದಲ್ಲಿ ಬಾಬರ್ ಅಜಂ ಮಾಡಿದ ತಪ್ಪು ಗುರುತಿಸಿದ ಮಾಜಿ ಕ್ರಿಕೆಟಿಗ
ದುಬೈ(ಆ.30): 15ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಟೀಂ ಇಂಡಿಯಾ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಪಾಕಿಸ್ತಾನ ನೀಡಿದ್ದ 148 ರನ್‌ಗಳ ಗುರಿ ಪಡೆದ ಟೀಂ ಇಂಡಿಯಾ, ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಸಹಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಗೆಲುವಿನ ನಗೆ ಬೀರಿದೆ.
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಂ ತಂತ್ರಗಾರಿಕೆ ಫೇಲ್ ಆಗಿದೆ. ಪಾಕಿಸ್ತಾನ ತಂಡವು 19 ಓವರ್ ಮುಗಿಯುವಷ್ಟರಲ್ಲಿ ವೇಗದ ಬೌಲರ್‌ಗಳ ಕೋಟಾ ಮುಗಿದಿತ್ತು. ಹೀಗಾಗಿ 20ನೇ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿ ಸ್ಪಿನ್ನರ್ ಮೊಹಮ್ಮದ್ ನವಾಜ್ ಅವರ ಹೆಗಲಿಗೆ ಬಿದ್ದಿತು. ನವಾಜ್ 6 ಎಸೆತಗಳಲ್ಲಿ 7 ರನ್‌ಗಳನ್ನು ರಕ್ಷಿಸಿಕೊಳ್ಳಬೇಕಿತ್ತು. ಮೊಹಮ್ಮದ್ ನವಾಜ್, ಪಾಕಿಸ್ತಾನದ ಬೌಲಿಂಗ್ ಇನಿಂಗ್ಸ್‌ನಲ್ಲಿ 12 ಓವರ್ ಅಂತ್ಯದ ವೇಳೆಗೆ ತಮ್ಮ ಪಾಲಿನ 3 ಓವರ್ ಮುಗಿಸಿ, ಇನ್ನೊಂದು ಓವರ್ ಬಾಕಿ ಇಟ್ಟುಕೊಂಡಿದ್ದರು. ಬಾಬರ್ ಅಜಂ, ಬೌಲರ್‌ಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಪಾಕಿಸ್ತಾನದ ಮಾಜಿ ವೇಗಿ ವಾಸೀಂ ಅಕ್ರಂ ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನದ ಮಾಜಿ ನಾಯಕ ವಾಸೀಂ ಅಕ್ರಂ,ಮೊಹಮ್ಮದ್ ನವಾಜ್ ಅವರನ್ನು ತಡವಾಗಿ ಬೌಲಿಂಗ್ ಮಾಡಲಿಳಿಸಿದ್ದು ಒಳ್ಳೆಯ ನಡೆಯಲ್ಲ. ನಾಯಕರಾದವರು, ಸ್ಪಿನ್ನರ್‌ಗಳನ್ನು 13 ಅಥವಾ 14 ಓವರ್‌ಗಳೊಳಗಾಗಿ 4 ಓವರ್‌ಗಳನ್ನು ಬೌಲಿಂಗ್ ಮಾಡಿ ಮುಗಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ
ಪಾಕಿಸ್ತಾನ ಮಣಿಸಿದ ಹಾರ್ದಿಕ್ ಪಾಂಡ್ಯಗೆ ಟಿವಿ ಪರದೆ ಮೇಲೆ ಮುತ್ತಿಕ್ಕಿದ ಆಫ್ಘಾನಿಸ್ತಾನ ಫ್ಯಾನ್!
ನನ್ನ ಪ್ರಕಾರ ಬಾಬರ್ ಅಜಂ ಒಂದು ತಪ್ಪು ಮಾಡಿದರು. ಅವರು ನವಾಜ್ ಅವರನ್ನು 13 ಅಥವಾ 14ನೇ ಓವರ್‌ನಲ್ಲಿ ಬೌಲಿಂಗ್ ಮಾಡಲಿಳಿಸಬೇಕಿತ್ತು. ಆದರೆ ತುಂಬಾ ತಡ ಮಾಡಿದರು. ಟಿ20 ಕ್ರಿಕೆಟ್‌ನಲ್ಲಿ ಕೊನೆಯ ಮೂರರಿಂದ ನಾಲ್ಕನೇ ಓವರ್ ಬೌಲಿಂಗ್ ಮಾಡಲು ಸ್ಪಿನ್ನರ್‌ಗಳನ್ನು ಬಳಸಿಕೊಳ್ಳಬಾರದು. ಅದರಲ್ಲೂ ರವೀಂದ್ರ ಜಡೇಜಾ ಅಥವಾ ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರಿದ್ದಾಗಲಂತೂ ಆ ತಪ್ಪು ಮಾಡಲೇ ಬಾರದು ಎಂದು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ವಾಸೀಂ ಅಕ್ರಂ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ತಂಡವು, ಭುವನೇಶ್ವರ್ ಕುಮಾರ್(26/4) ಹಾಗೂ ಹಾರ್ದಿಕ್ ಪಾಂಡ್ಯ(25/3) ಮಾರಕ ದಾಳಿಗೆ ತತ್ತರಿಸಿ ಕೇವಲ 147 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇನ್ನು ಪಾಕಿಸ್ತಾನ ಬೌಲರ್‌ಗಳು ಕೂಡಾ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡುವ ಯತ್ನ ನಡೆಸಿದರಾದರೂ, ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 17 ಎಸೆತಗಳಲ್ಲಿ ಅಜೇಯ 33 ರನ್ ಬಾರಿಸುವ ಮೂಲಕ ಇನ್ನೂ 2 ಎಸೆತಗಳು ಭಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.