Asia Cup 2022: ಪಾಕ್ ವೇಗಿ ರೌಫ್‌ಗೆ ಆಟೋಗ್ರಾಫ್ ಜೆರ್ಸಿ ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ..!
ಪಾಕಿಸ್ತಾನ ವೇಗಿ ಹ್ಯಾರಿಸ್ ರೌಫ್‌ಗೆ ವಿಶೇಷ ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ
ಪಾಕಿಸ್ತಾನ ಎದುರಿನ ಪಂದ್ಯವು ವಿರಾಟ್ ಕೊಹ್ಲಿ ಪಾಲಿಗೆ 100ನೇ ಟಿ20 ಪಂದ್ಯವಾಗಿತ್ತು
ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಮಣಿಸಿದ ಟೀಂ ಇಂಡಿಯಾ
ದುಬೈ(ಆ.30): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ತಮ್ಮ ಜೆರ್ಸಿಯೊಂದನ್ನು ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್‌ಗೆ ಆಟೋಗ್ರಾಫ್ ಸಹಿತ ಗಿಫ್ಟ್ ನೀಡಿ ಗಮನ ಸೆಳೆದಿದ್ದಾರೆ. ಇಲ್ಲಿನ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಏಷ್ಯಾಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಪಾಕಿಸ್ತಾನ ನೀಡಿದ್ದ 148 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಆಕರ್ಷಕ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಇನ್ನು ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ತಮ್ಮದೊಂದು ಜೆರ್ಸಿಯನ್ನು ಪಾಕ್ ಆಟಗಾರನಿಗೆ ಗಿಫ್ಟ್ ನೀಡಿ ಗಮನ ಸೆಳೆದಿದ್ದಾರೆ.
ಬಿಸಿಸಿಐ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್‌ಗೆ ಆಟೋಗ್ರಾಫ್ ಸಹಿತ ಜೆರ್ಸಿ ನೀಡುತ್ತಿರುವುದು ಕಂಡು ಬಂದಿದೆ. ಪಂದ್ಯ ಮುಗಿದಿರಬಹುದು, ಆದರೆ ಇಂತಹ ಕ್ಷಣಗಳು ಎಂದೆಂದಿಗೂ ಹೊಳೆಯುತ್ತಿರುತ್ತವೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಮುಕ್ತಾಯದ ಬಳಿಕ ವಿರಾಟ್ ಕೊಹ್ಲಿ ತಮ್ಮ ಹಸ್ತಾಕ್ಷರದೊಂದಿಗೆ ಜೆರ್ಸಿಯನ್ನು ಪಾಕಿಸ್ತಾನದ ವೇಗಿ ಹ್ಯಾರಿಸ್‌ಗೆ ನೀಡುತ್ತಿರುವ ಹೃದಯಸ್ಪರ್ಶಿ ಕ್ಷಣವಿದು ಎಂದು ಟ್ವೀಟ್ ಮಾಡಿದೆ.
ಇನ್ನು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಬಗ್ಗೆ ಮಾತನಾಡುವುದಾದರೇ, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡುವಲ್ಲಿ ಟೀಂ ಇಂಡಿಯಾ ವೇಗಿಗಳು ಯಶಸ್ವಿಯಾದರು. ಪರಿಣಾಮ ಪಾಕಿಸ್ತಾನ ತಂಡವು 19.2 ಓವರ್‌ಗಳಲ್ಲಿ ಕೇವಲ 147 ರನ್‌ಗಳಿಗೆ ಸರ್ವಪತನ ಕಂಡಿತು. ಪಾಕ್ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ 43 ರನ್ ಬಾರಿಸಿದರು. ಭಾರತ ಪರ ವೇಗಿ ಭುವನೇಶ್ವರ್ ಕುಮಾರ್ 4, ಹಾರ್ದಿಕ್ ಪಾಂಡ್ಯ 3, ಆರ್ಶದೀಪ್ ಸಿಂಗ್ 2 ಹಾಗೂ ಆವೇಶ್ ಖಾನ್ ಒಂದು ವಿಕೆಟ್ ಉರುಳಿಸಿದರು.
Ind vs Pak ಬಾಬರ್ ಅಜಂ ಮಾಡಿದ ಒಂದು ತಪ್ಪನ್ನು ಗುರುತಿಸಿದ ಪಾಕ್ ಮಾಜಿ ಕ್ರಿಕೆಟ್..!
ಇನ್ನು ಸಾಧಾರಣ ಗುರಿ ಬೆನ್ನತ್ತಿದ ಭಾರತ ಕ್ರಿಕೆಟ್ ತಂಡವು ಮೊದಲ ಓವರ್‌ನಲ್ಲೇ ಕೆ ಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತಾದರೂ, ವಿರಾಟ್ ಕೊಹ್ಲಿ(35), ರವೀಂದ್ರ ಜಡೇಜಾ(35) ಹಾಗೂ ಹಾರ್ದಿಕ್ ಪಾಂಡ್ಯ ಅಜೇಯ 33 ರನ್‌ಗಳ ನೆರವಿನಿಂದ ರೋಚಕ ಗೆಲುವು ಸಾಧಿಸುವ ಮೂಲಕ ಏಷ್ಯಾಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವುದರೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 100ನೇ ಟಿ20 ಪಂದ್ಯವನ್ನಾಡುವಲ್ಲಿ ಯಶಸ್ವಿಯಾದರು. ಈ ಮೂಲಕ ಏಕದಿನ, ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ನಲ್ಲಿ 100 ಪಂದ್ಯಗಳನ್ನಾಡಿದ ಭಾರತದ ಮೊದಲ ಹಾಗೂ ಜಗತ್ತಿನ ಎರಡನೇ ಆಟಗಾರ ಎನ್ನುವ ಹಿರಿಮೆಗೆ ವಿರಾಟ್ ಕೊಹ್ಲಿ ಪಾತ್ರರಾದರು. ಈ ಮೊದಲು ನ್ಯೂಜಿಲೆಂಡ್‌ನ ರಾಸ್ ಟೇಲರ್ ಮೂರೂ ಮಾದರಿಯ ಕ್ರಿಕೆಟ್‌ನಲ್ಲೂ 100 ಪಂದ್ಯಗಳನ್ನಾಡಿದ ಮೊದಲ ಆಟಗಾರ ಎನಿಸಿದ್ದರು.