* ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಗೆ ವೇಳಾಪಟ್ಟಿ ಫಿಕ್ಸ್‌* ಶ್ರೀಲಂಕಾದಿಂದ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಯುಎಇಗೆ ಶಿಫ್ಟ್* ಆಗಸ್ಟ್‌ 27ರಿಂದ ಏಷ್ಯಾಕಪ್‌ ಕ್ರಿಕೆಟ್ ಟೂರ್ನಿ ಆರಂಭ

ನವದೆಹಲಿ(ಜು.28): ಕೋವಿಡ್‌ನಿಂದ ಮುಂದೂಡಲ್ಪಟ್ಟಿದ್ದ ಏಷ್ಯಾಕಪ್‌ ಟಿ20 ಟೂರ್ನಿಯು ಮುಂದಿನ ತಿಂಗಳು ಯುನೈಟೆಡ್‌ ಅರಬ್‌ ಎಮಿರೇಟ್ಸ್‌(ಯುಎಇ)ನಲ್ಲಿ ನಡೆಯಲಿದೆ ಎಂದು ಏಷ್ಯಾ ಕ್ರಿಕೆಟ್‌ ಸಮಿತಿ(ಎಸಿಸಿ) ಅಧಿಕೃತವಾಗಿ ಘೋಷಿಸಿದೆ. ಆಗಸ್ಟ್‌ 27ರಿಂದ ಸೆಪ್ಟೆಂಬರ್ 11ರ ವರೆಗೂ ಟೂರ್ನಿ ನಿಗದಿಯಾಗಿದ್ದು, ಭಾರತ ಸೇರಿ ಒಟ್ಟು 6 ತಂಡಗಳು ಪಾಲ್ಗೊಳ್ಳಲಿವೆ. ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಆತಿಥ್ಯವನ್ನು ಶ್ರೀಲಂಕಾ ಪಡೆದಿತ್ತು. ಆದರೆ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಘರ್ಷಣೆ ಮುಂದುವರಿದಿರುವ ಕಾರಣ, ಟೂರ್ನಿಯನ್ನು ಆಯೋಜಿಸುವ ಸ್ಥಿತಿಯಿಲ್ಲಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್‌ ಸಂಸ್ಥೆ(ಎಸ್‌ಎಲ್‌ಸಿ) ಸ್ಪಷ್ಟಪಡಿಸಿದ ಬಳಿಕ ಎಸಿಸಿ ಟೂರ್ನಿ ಸ್ಥಳಾಂತರದ ಬಗ್ಗೆ ನಿರ್ಧಾರ ಕೈಗೊಂಡಿತು.

ಶ್ರೀಲಂಕಾದಲ್ಲಿನ ಸದ್ಯ ಪ್ರತಿಕೂಲ ಪರಿಸ್ಥಿತಿಯನ್ನು ಗಮನಿಸಿ ಏಷ್ಯಾ ಕ್ರಿಕೆಟ್‌ ಸಮಿತಿ, ಅವಿರೋಧವಾಗಿ ಶ್ರೀಲಂಕಾದಿಂದ ಯುಎಇಗೆ ಸ್ಥಳಾಂತರಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಎಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು ಶ್ರೀಲಂಕಾದಲ್ಲಿಯೇ ಆಯೋಜಿಸಲು ಸಕಲ ಪ್ರಯತ್ನವನ್ನು ನಡೆಸಲಾಗಿತ್ತು. ಆದರೆ ಸಾಕಷ್ಟು ಚರ್ಚೆಯ ಬಳಿಕ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು (Asia Cup Cricket Tournament) ಶ್ರೀಲಂಕಾದಿಂದ ಯುಎಇಗೆ ಸ್ಥಳಾಂತರಿಸಲು ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಹೀಗಾಗಿ ಯುಎಇನಲ್ಲಿ ಈ ಬಾರಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಜರುಗಲಿದ್ದು, ಶ್ರೀಲಂಕಾವೇ ಆತಿಥ್ಯದ ಹಕ್ಕನ್ನು ಹೊಂದಿರಲಿದೆ ಎಂದು ಎಸಿಸಿ ತಿಳಿಸಿದೆ.

ಏಷ್ಯಾದ ಸಹೋದರ ರಾಷ್ಟ್ರಗಳೇ ಪಾಲ್ಗೊಳ್ಳುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು ನಾವು ಶ್ರೀಲಂಕಾದಲ್ಲಿಯೇ ಆಯೋಜಿಸಬೇಕು ಎಂದು ಪ್ರಯತ್ನ ಪಟ್ಟಿದ್ದೆವು. ಆದರೆ ಇದೀಗ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು ಶ್ರೀಲಂಕಾದಿಂದ ಯುಎಇಗೆ ಸ್ಥಳಾಂತರಿಸಿದ ಎಸಿಸಿ ತೀರ್ಮಾನವನ್ನು ನಾವು ಗೌರವಿಸುತ್ತೇವೆ. ಯುಎಇ ಕ್ರಿಕೆಟ್‌ ಬೋರ್ಡ್‌ ಜತೆಗೆ ನಾವು ಸಾಥ್ ನೀಡಲಿದ್ದೇವೆ ಎಂದು ಲಂಕಾ ಕ್ರಿಕೆಟ್‌ ಬೋರ್ಡ್‌ ಮುಖ್ಯಸ್ಥ ಶಮ್ಮಿ ಸಿಲ್ವಾ ಹೇಳಿದ್ದಾರೆ. 

ಏಷ್ಯಾಕಪ್‌ ಕ್ರಿಕೆಟ್ ಟೂರ್ನಿ ಲಂಕಾದಿಂದ ಯುಎಇಗೆ ಶಿಫ್ಟ್: ಸೌರವ್ ಗಂಗೂಲಿ

ಈ ಮೊದಲು ಬಿಸಿಸಿಐ (BCCI) ಅಪೆಕ್ಸ್ ಕೌನ್ಸಿಲ್ ಮೀಟಿಂಗ್‌ನಲ್ಲಿ ಮಾತನಾಡಿದ್ದ ಸೌರವ್‌ ಗಂಗೂಲಿ (Sourav Ganguly), ಏಷ್ಯಾಕಪ್ ಟೂರ್ನಿಯು ಯುಎಇನಲ್ಲಿ ನಡೆಯಲಿದೆ. ಯಾಕೆಂದರೆ ಯುಎಇನಲ್ಲಿ ಮಾತ್ರ ಮಳೆಯಿರುವುದಿಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದರು. ಮುಂಬರುವ ಏಷ್ಯಾಕಪ್‌ ಟಿ20 ಟೂರ್ನಿಯನ್ನು ಆಯೋಜಿಸಲು ಸಾಧ್ಯವಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿ(ಎಸ್‌ಎಲ್‌ಸಿ) ಕಳೆದ ಬುಧವಾರ ಏಷ್ಯಾ ಕ್ರಿಕೆಟ್‌ ಸಮಿತಿ(ಎಸಿಸಿ)ಗೆ ತಿಳಿಸಿತ್ತು. ಆರ್ಥಿಕ ಸಂಕಷ್ಟ ಮತ್ತು ರಾಜಕೀಯ ಘರ್ಷಣೆ ಸಮಸ್ಯೆ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿ 3ನೇ ಆವೃತ್ತಿಯ ಲಂಕಾ ಪ್ರೀಮಿಯರ್‌ ಲೀಗ್‌(ಎಲ್‌ಪಿಎಲ್‌) ಅನ್ನು ಮುಂದೂಡಿದ ಬೆನ್ನಲ್ಲೇ ಏಷ್ಯಾಕಪ್‌ ಆಯೋಜನೆಯಿಂದ ಹಿಂದೆ ಸರಿಯಲು ತೀರ್ಮಾನಿಸಿತ್ತು.

ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ, ಭಾರತ, ಪಾಕಿಸ್ತಾನ, ಆಪ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ಜತೆಗೆ ಏಷ್ಯಾದ ಯುಎಇ, ಕುವೈತ್, ಸಿಂಗಾಪುರ ಅಥವಾ ಹಾಂಕಾಂಗ್ ಈ ತಂಡಗಳ ಪೈಕಿ ಒಂದು ತಂಡ ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡು ಪ್ರಧಾನ ಸುತ್ತಿಗೆ ಲಗ್ಗೆಯಿಡಲಿದೆ.