Asianet Suvarna News Asianet Suvarna News

ಕ್ರಿಕೆಟಿಗ ಆರ್ಶದೀಪ್ ಸಿಂಗ್ ಕುರಿತು ಸುಳ್ಳು ಮಾಹಿತಿ ತುಂಬಿದ ವಿಕಿಪೀಡಿಯಾಗೆ ಕೇಂದ್ರದಿಂದ ಸಮನ್ಸ್‌ ಜಾರಿ!

* ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಭಾರತಕ್ಕೆ ರೋಚಕ ಸೋಲು
* ಕ್ಯಾಚ್ ಕೈಚೆಲ್ಲಿದ ಆರ್ಶದೀಪ್‌ ಸಿಂಗ್ ಗೆ ಖಲಿಸ್ತಾನ್ ಪಟ್ಟ
* ವಿಕಿಪೀಡಿಯಾಗೆ ಸಮನ್ಸ್‌ ಜಾರಿ ಮಾಡಿದ ಭಾರತ ಸರ್ಕಾರ

Asia Cup 2022 Centre summons Wikipedia executives over fake information on cricketer Arshdeep Singh page kvn
Author
First Published Sep 5, 2022, 4:16 PM IST

ನವದೆಹಲಿ(ಸೆ.05): ಟೀಂ ಇಂಡಿಯಾ ಯುವ ವೇಗದ ಬೌಲರ್‌ ಆರ್ಶದೀಪ್ ಸಿಂಗ್ ಅವರ ವಿಕಿಪೀಡಿಯಾ ಪೇಜ್‌ನಲ್ಲಿ ಅವರ ಹೆಸರಿನ ಜತೆಗೆ ಖಲಿಸ್ತಾನಿ ಪದವನ್ನು ಥಳುಕು ಹಾಕಿರುವ ವಿಚಾರವನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ವಿಕಿಪೀಡಿಯಾದ ಭಾರತದ ಪ್ರತಿನಿಧಿಗೆ ಸಮನ್ಸ್‌ ಜಾರಿ ಮಾಡಿದೆ. ಇದಷ್ಟೇ ಅಲ್ಲದೇ ಈ ಕುರಿತಂತೆ ಸ್ಪಷ್ಟನೆ ನೀಡುವಂತೆ ಸೂಚಿಸಿದೆ.

ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಆಪ್ತ ಮೂಲಗಳ ಪ್ರಕಾರ, ಆರ್ಶದೀಪ್ ಸಿಂಗ್ ಅವರ ವಿಕಿಪೀಡಿಯಾ ಪೇಜ್‌ನಲ್ಲಿ ಖಲಿಸ್ತಾನ್ ಲಿಂಕ್‌ ಅನ್ನು ತಪ್ಪಾಗಿ ಹಾಕಿರುವುದರಿಂದ ದೇಶದಲ್ಲಿ ಕೋಮು ಸಾಮರಸ್ಯ ಕದಡುವ ಸಾಧ್ಯತೆಯಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ವಿಕಿಪೀಡಿಯಾ ಪೇಜ್‌ನಲ್ಲಿ ಮಾಡಿದ ಈ ಬದಲಾವಣೆಯಿಂದಾಗಿ ಕಾನೂನು ಸುವ್ಯವಸ್ಥೆಗೆ ತೊಡಕು ಉಂಟಾಗುವ ಸಾಧ್ಯತೆಯಿದೆ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

ಭಾರತ ಕ್ರಿಕೆಟ್‌ ತಂಡವು ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ಎದುರು 5 ವಿಕೆಟ್‌ಗಳ ಅಂತರದ ರೋಚಕ ಸೋಲು ಅನುಭವಿಸಿದ ಬೆನ್ನಲ್ಲೇ ಆರ್ಶದೀಪ್ ವಿಕಿಪೀಡಿಯಾ ಪೇಜ್ ಎಡಿಟ್ ಮಾಡಲಾಗಿದೆ. ಆರ್ಶದೀಪ್ ಸಿಂಗ್ ಅವರ ವಿಕಿಪೀಡಿಯಾ ಪೇಜ್‌ನ ಹಲವು ಕಡೆಗಳಲ್ಲಿ ಅವರನ್ನು ಖಲಿಸ್ತಾನ್‌ ಆಟಗಾರ ಎಂದು ಎಡಿಟ್ ಮಾಡಿದೆ. ಈ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದವು. 

Ind vs Pak: ಸುಲಭ ಕ್ಯಾಚ್ ಕೈಚೆಲ್ಲಿದ ಆರ್ಶದೀಪ್‌, ಮೈದಾನದಲ್ಲೇ ಅಸಮಾಧಾನ ಹೊರಹಾಕಿದ ರೋಹಿತ್ ಶರ್ಮಾ

ಇದೇ ಸ್ಕ್ರೀನ್‌ಶಾಟ್‌ಗಳನ್ನು ಇಟ್ಟುಕೊಂಡು ಹಲವು ನೆಟ್ಟಿಗರು ಆರ್ಶದೀಪ್ ಸಿಂಗ್, ಖಾಲಿಸ್ತಾನಿ ಬೆಂಬಲಿಗ, ಭಾರತ ತಂಡ ಸೋಲಲೆಂದೇ ಕ್ಯಾಚ್ ಬಿಟ್ಟ ಎಂದೆಲ್ಲಾ ಪೋಸ್ಟ್‌ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. 

ಪಾಕಿಸ್ತಾನ ತಂಡವು ಗೆಲ್ಲಲು ಕೊನೆಯ 3 ಓವರ್‌ಗಳಲ್ಲಿ 34 ರನ್‌ಗಳ ಅಗತ್ಯವಿತ್ತು. 18ನೇ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಹೊತ್ತುಕೊಂಡಿದ್ದರು. ಈ ಸಂದರ್ಭದಲ್ಲಿ ಖಷ್‌ದಿಲ್ ಶಾ ಹಾಗೂ ಆಸಿಫ್ ಅಲಿ ಕ್ರೀಸ್‌ನಲ್ಲಿದ್ದರು. ಆ ಓವರ್‌ನ ಮೂರನೇ ಎಸೆತದಲ್ಲಿ ಆಸಿಫ್ ಅಲಿ ಸ್ವೀಪ್‌ ಶಾಟ್‌ ಮಾಡುವ ಯತ್ನದಲ್ಲಿ ಚೆಂಡು ಬ್ಯಾಟ್ ಅಂಚನ್ನು ಸವರಿ ಗಾಳಿಯಲ್ಲಿ ತೇಲಿ ಆರ್ಶದೀಪ್ ಸಿಂಗ್ ಬಳಿ ಬಂತು. ಈ ಸುಲಭ ಕ್ಯಾಚ್‌ ಅನ್ನು ಆರ್ಶದೀಪ್ ಸಿಂಗ್ ಕೈಚೆಲ್ಲಿದರು. ಹೀಗಾಗಿ ಆಸಿಫ್ ಅಲಿಗೆ ಜೀವದಾನ ಸಿಕ್ಕಿತು. 

ಈ ಕುರಿತಂತೆ ಟ್ವೀಟ್ ಮಾಡಿರುವ ಹರ್ಭಜನ್ ಸಿಂಗ್, ಯುವ ವೇಗಿ ಆರ್ಶದೀಪ್ ಸಿಂಗ್ ಮೇಲೆ ಮಾಡುತ್ತಿರುವ ಟೀಕೆಗಳನ್ನು ನಿಲ್ಲಿಸಿ. ಯಾರೂ ಕೂಡಾ ಉದ್ದೇಶಪೂರ್ವಕವಾಗಿ ಕ್ಯಾಚ್ ಕೈಚೆಲ್ಲುವುದಿಲ್ಲ. ನಮ್ಮ ಆಟಗಾರರ ಪ್ರದರ್ಶನದ ಬಗ್ಗೆ ಹೆಮ್ಮೆಯಿದೆ. ಪಾಕಿಸ್ತಾನ ಕ್ರಿಕೆಟ್ ತಂಡವು ಚೆನ್ನಾಗಿ ಆಡಿತು. ನಮ್ಮ ಆಟಗಾರರ ಮೇಲೆ ಈ ರೀತಿ ಅಸಭ್ಯ ಟೀಕೆ ಮಾಡುವವರನ್ನು ಕಂಡರೆ ನಾಚಿಕೆಯಾಗುತ್ತಿದೆ. ಆರ್ಶದೀಪ್ ಸಿಂಗ್ ಒಬ್ಬ ಚಿನ್ನದಂತ ಆಟಗಾರ ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

Follow Us:
Download App:
  • android
  • ios