Asianet Suvarna News Asianet Suvarna News

Ind vs Pak: ಸುಲಭ ಕ್ಯಾಚ್ ಕೈಚೆಲ್ಲಿದ ಆರ್ಶದೀಪ್‌, ಮೈದಾನದಲ್ಲೇ ಅಸಮಾಧಾನ ಹೊರಹಾಕಿದ ರೋಹಿತ್ ಶರ್ಮಾ

ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ರೋಚಕ ಸೋಲು ಕಂಡ ಟೀಂ ಇಂಡಿಯಾ
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಭಾರತ ಎದುರು ಪಾಕಿಸ್ತಾನಕ್ಕೆ 5 ವಿಕೆಟ್‌ಗಳ ಜಯ
ಆಸಿಫ್ ಅಲಿ ಕ್ಯಾಚ್ ಕೈಚೆಲ್ಲಿದ ಆರ್ಶದೀಪ್ ಸಿಂಗ್ ಮೇಲೆ ನಾಯಕ ರೋಹಿತ್ ಶರ್ಮಾ ಗರಂ

Team India Pacer Arshdeep Singh Drops easy catch of Asif Ali Captain Rohit Sharma Reaction Goes Viral kvn
Author
First Published Sep 5, 2022, 1:49 PM IST

ದುಬೈ(ಸೆ.05): ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯವು ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಭಾರತ ಪರ ಮಾಜಿ ನಾಯಕ ವಿರಾಟ್ ಕೊಹ್ಲಿ ಆಕರ್ಷಕ 60 ರನ್ ಚಚ್ಚಿದರೆ, ಪಾಕಿಸ್ತಾನ ಕ್ರಿಕೆಟ್ ತಂಡದ ಪರ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್‌ ಸ್ಪೋಟಕ 71 ರನ್ ಸಿಡಿಸಿದರು. ಇದರ ಪರಿಣಾಮ ಪಾಕಿಸ್ತಾನ ಕ್ರಿಕೆಟ್ ತಂಡವು ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.

ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಈ ಹೈವೋಲ್ಟೇಜ್ ಪಂದ್ಯವು ಹಲವು ರೋಚಕ ಕ್ಷಣಗಳಿಗೂ ಸಾಕ್ಷಿಯಾಯಿತು. ಆದರೆ ಕೊನೆಯ ಕ್ಷಣದಲ್ಲಿ ಮಾಡಿಕೊಂಡ ಕೆಲ ಯಡವಟ್ಟಿನಿಂದಾಗಿ ಭಾರತ ತನ್ನ ಕೈಯಲ್ಲಿದ್ದ ಗೆಲುವನ್ನು ಕೈಚೆಲ್ಲಿತು. ಹೀಗಾಗಿ ಕೊನೆಯಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಗೆಲುವಿನ ನಗೆ ಬೀರಿತು. ನಿರ್ಣಾಯಕ ಹಂತದಲ್ಲಿ ಆಸಿಫ್‌ ಅಲಿ ನೀಡಿದ್ದ ಸುಲಭ ಕ್ಯಾಚನ್ನು ಟೀಂ ಇಂಡಿಯಾ ಆಟಗಾರ ಆರ್ಶದೀಪ್ ಸಿಂಗ್ ಕೈಚೆಲ್ಲಿದ್ದು, ಗೆಲುವನ್ನು ಭಾರತದಿಂದ ಕೈಜಾರುವಂತೆ ಮಾಡಿತು. 

ಪಾಕಿಸ್ತಾನ ತಂಡವು ಗೆಲ್ಲಲು ಕೊನೆಯ 3 ಓವರ್‌ಗಳಲ್ಲಿ 34 ರನ್‌ಗಳ ಅಗತ್ಯವಿತ್ತು. 18ನೇ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಹೊತ್ತುಕೊಂಡಿದ್ದರು. ಈ ಸಂದರ್ಭದಲ್ಲಿ ಖಷ್‌ದಿಲ್ ಶಾ ಹಾಗೂ ಆಸಿಫ್ ಅಲಿ ಕ್ರೀಸ್‌ನಲ್ಲಿದ್ದರು. ಆ ಓವರ್‌ನ ಮೂರನೇ ಎಸೆತದಲ್ಲಿ ಆಸಿಫ್ ಅಲಿ ಸ್ವೀಪ್‌ ಶಾಟ್‌ ಮಾಡುವ ಯತ್ನದಲ್ಲಿ ಚೆಂಡು ಬ್ಯಾಟ್ ಅಂಚನ್ನು ಸವರಿ ಗಾಳಿಯಲ್ಲಿ ತೇಲಿ ಆರ್ಶದೀಪ್ ಸಿಂಗ್ ಬಳಿ ಬಂತು. ಈ ಸುಲಭ ಕ್ಯಾಚ್‌ ಅನ್ನು ಆರ್ಶದೀಪ್ ಸಿಂಗ್ ಕೈಚೆಲ್ಲಿದರು. ಹೀಗಾಗಿ ಆಸಿಫ್ ಅಲಿಗೆ ಜೀವಧಾನ ಸಿಕ್ಕಿತು. 

ಇದನ್ನು ಗಮನಿಸುತ್ತಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ತಮ್ಮ ಅಸಮಾಧಾನವನ್ನು ತಡೆಹಿಡಿದುಕೊಳ್ಳಲು ಸಾಧ್ಯವಾಗಲಿಲ್ಲ. ಆರ್ಶದೀಪ್ ಸಿಂಗ್ ಮೇಲೆ ರೋಹಿತ್ ಶರ್ಮಾ ಮೈದಾನದಲ್ಲೇ ತಮ್ಮ ಸಿಟ್ಟನ್ನು ಹೊರಹಾಕಿದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಇನ್ನು ಪಂದ್ಯ ಮುಕ್ತಾಯದ ಬಳಿಕ ಆರ್ಶದೀಪ್ ಸಿಂಗ್ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ವ್ಯಕ್ತವಾಗಿವೆ.

Ind vs Pak ಟಾಸ್ ವೇಳೆ ಯಡವಟ್ಟು ಮಾಡಿದ ರವಿಶಾಸ್ತ್ರಿ..! ವಿಡಿಯೋ ವೈರಲ್

ಈ ಪೈಕಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್‌ ಸಿಂಗ್, ಪಂಜಾಬ್ ಮೂಲದ ಯುವ ವೇಗಿ ಆರ್ಶದೀಪ್ ಸಿಂಗ್ ಬೆಂಬಲಕ್ಕೆ ನಿಂತಿದ್ದು, ಯಾರೊಬ್ಬರು ಉದ್ದೇಶಪೂರ್ವಕವಾಗಿ ಕ್ಯಾಚ್ ಕೈಚೆಲ್ಲುವುದಿಲ್ಲ, ಸುಖಾಸುಮ್ಮನೆ ಆರ್ಶದೀಪ್ ಸಿಂಗ್ ಅವರನ್ನು ಟೀಕಿಸಬೇಡಿ ಎಂದು ಭಜ್ಜಿ ಟ್ವೀಟ್ ಮಾಡಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಹರ್ಭಜನ್ ಸಿಂಗ್, ಯುವ ವೇಗಿ ಆರ್ಶದೀಪ್ ಸಿಂಗ್ ಮೇಲೆ ಮಾಡುತ್ತಿರುವ ಟೀಕೆಗಳನ್ನು ನಿಲ್ಲಿಸಿ. ಯಾರೂ ಕೂಡಾ ಉದ್ದೇಶಪೂರ್ವಕವಾಗಿ ಕ್ಯಾಚ್ ಕೈಚೆಲ್ಲುವುದಿಲ್ಲ. ನಮ್ಮ ಆಟಗಾರರ ಪ್ರದರ್ಶನದ ಬಗ್ಗೆ ಹೆಮ್ಮೆಯಿದೆ. ಪಾಕಿಸ್ತಾನ ಕ್ರಿಕೆಟ್ ತಂಡವು ಚೆನ್ನಾಗಿ ಆಡಿತು. ನಮ್ಮ ಆಟಗಾರರ ಮೇಲೆ ಈ ರೀತಿ ಅಸಭ್ಯ ಟೀಕೆ ಮಾಡುವವರನ್ನು ಕಂಡರೆ ನಾಚಿಕೆಯಾಗುತ್ತಿದೆ. ಆರ್ಶದೀಪ್ ಸಿಂಗ್ ಒಬ್ಬ ಚಿನ್ನದಂತ ಆಟಗಾರ ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

Follow Us:
Download App:
  • android
  • ios