ಇಂದಿನಿಂದ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭ6 ವರ್ಷಗಳ ಬಳಿಕ ಟಿ20 ಮಾದರಿಯಲ್ಲಿ ಟೂರ್ನಿ ಆಯೋಜನೆಭಾರತ, ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ 6 ತಂಡಗಳು ಟೂರ್ನಿಯಲ್ಲಿ ಭಾಗಿ

ದುಬೈ(ಆ.27): ಟಿ20 ಮಾದರಿಯ ಅನಿರೀಕ್ಷಿತತೆ ಹಾಗೂ ಆಟದ ಬೆಳವಣಿಗೆ ಶನಿವಾರದಿಂದ ಆರಂಭಗೊಳ್ಳಲಿರುವ ಏಷ್ಯಾಕಪ್‌ ಟೂರ್ನಿಯನ್ನು ಅತಿಹೆಚ್ಚು ಪೈಪೋಟಿಗೆ ಸಾಕ್ಷಿಯಾದ ಆವೃತ್ತಿಯನ್ನಾಗಿಸಬಹುದು. ಏಷ್ಯಾದ ತಂಡಗಳು ಕ್ರಿಕೆಟ್‌ ಜಗತ್ತಿನಲ್ಲಿ ಬಲಿಷ್ಠವಾಗಿ ಬೆಳೆದಿದ್ದು, ಅಭಿಮಾನಿಗಳಲ್ಲಿ ಏಷ್ಯಾಕಪ್‌ ಟೂರ್ನಿಯು ಭಾರೀ ಕುತೂಹಲ ಮೂಡಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಟೂರ್ನಿಯ ಆತಿಥ್ಯ ಹೊಂದಿರುವ ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ತಂಡಗಳು ಕಾದಾಡುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ನೀಡಲಿವೆ.

ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಭಾರತ, ಪಾಕಿಸ್ತಾನ ಸೇರಿ ಪ್ರಮುಖ ತಂಡಗಳಿಗೆ ಅಂತಿಮ ಸುತ್ತಿನ ತಯಾರಿ ನಡೆಸಲು ಏಷ್ಯಾಕಪ್‌ ಸಹಕಾರಿಯಾಗಲಿದೆ. 6 ವರ್ಷಗಳ ಬಳಿಕ ಟಿ20 ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಪಂದ್ಯಾವಳಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದ್ದು, ದುಬೈ ಮತ್ತು ಶಾರ್ಜಾದಲ್ಲಿ ಪಂದ್ಯಗಳು ನಡೆಯಲಿವೆ.

ಟೂರ್ನಿ ಮಾದರಿ ಹೇಗೆ?

ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಷ್ಘಾನಿಸ್ತಾನ ಮತ್ತು ಹಾಂಕಾಂಗ್‌ ತಂಡಗಳು ಸೆಣಸಲಿವೆ. ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ‘ಎ’ ಗುಂಪಿನಲ್ಲಿ ಭಾರತ, ಪಾಕಿಸ್ತಾನ ಮತ್ತು ಹಾಂಕಾಂಗ್‌ ಇದ್ದರೆ, ‘ಬಿ’ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಷ್ಘಾನಿಸ್ತಾನ ಇವೆ. ಪ್ರತಿ ತಂಡಗಳು ಉಳಿದ 2 ತಂಡಗಳು ವಿರುದ್ಧ ಆಡಲಿದ್ದು, ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಸೂಪರ್‌-4ಗೆ ಪ್ರವೇಶಿಸಲಿವೆ. ಸೂಪರ್‌-4ನಲ್ಲಿ ಒಂದು ತಂಡ ಉಳಿದ 3 ತಂಡಗಳು ವಿರುದ್ಧ ಸೆಣಸಲಿದ್ದು, ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಫೈನಲ್‌ಗೇರಲಿವೆ.

ಭಾರತದ ಪಂದ್ಯಗಳು

ದಿನಾಂಕ ಎದುರಾಳಿ ಸ್ಥಳ ಸಮಯ

ಆ.28 ಪಾಕಿಸ್ತಾನ ದುಬೈ ಸಂಜೆ 7.30ಕ್ಕೆ

ಆ.31 ಹಾಂಕಾಂಗ್‌ ದುಬೈ ಸಂಜೆ 7.30ಕ್ಕೆ

ಭಾರತಕ್ಕೆ 8ನೇ ಬಾರಿ ಪ್ರಶಸ್ತಿ ಗೆಲ್ಲುವ ತವಕ!

ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ. 14 ಆವೃತ್ತಿಗಳಲ್ಲಿ 7 ಬಾರಿ ಚಾಂಪಿಯನ್‌ ಆಗಿದ್ದು 3 ಬಾರಿ ರನ್ನರ್‌-ಅಪ್‌ ಸ್ಥಾನ ಪಡೆದಿದೆ. ಇನ್ನು ಶ್ರೀಲಂಕಾ 5 ಬಾರಿ ಪ್ರಶಸ್ತಿ ಗೆದ್ದಿದ್ದು, ಪಾಕಿಸ್ತಾನ 2 ಬಾರಿ ಪ್ರಶಸ್ತಿ ಜಯಿಸಿದೆ. 2016, 2018ರಲ್ಲಿ ಚಾಂಪಿಯನ್‌ ಆಗಿದ್ದ ಭಾರತ, ಹ್ಯಾಟ್ರಿಕ್‌ ಪ್ರಶಸ್ತಿ ಜೊತೆ ಒಟ್ಟಾರೆ 8ನೇ ಬಾರಿಗೆ ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿದೆ.

ಫಾರ್ಮ್‌ಗೆ ಮರಳಲು ಪಾರ್ಥಿಸುತ್ತೇನೆ, ಕೊಹ್ಲಿ ಜೊತೆಗಿನ ಶಾಹೀನ್ ಆಫ್ರಿದಿ ಮಾತುಕತೆ ಬಹಿರಂಗ!

13 ದಿನಗಳಲ್ಲಿ 3 ಬಾರಿ ಭಾರತ-ಪಾಕ್‌ ಸೆಣಸು?

ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಕನಿಷ್ಠ 2 ಬಾರಿ, ಗರಿಷ್ಠ 3 ಬಾರಿ ಸೆಣಸಬಹುದಾಗಿದೆ. ‘ಎ’ ಗುಂಪಿನಲ್ಲಿರುವ ಭಾರತ ಹಾಗೂ ಪಾಕಿಸ್ತಾನ ಆ.28ರಂದು ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದು ಈ ಎರಡು ತಂಡಗಳು ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆದು ಸೂಪರ್‌-4ಗೆ ಪ್ರವೇಶಿಸುವ ನಿರೀಕ್ಷೆ ಇದೆ. ಸೂಪರ್‌-4ನಲ್ಲಿ ಸೆ.4ರಂದು ಮತ್ತೆ ಸೆಣಸುವುದು ಬಹುತೇಕ ಖಚಿತ. ಒಂದೊಮ್ಮೆ ಉಭಯ ತಂಡಗಳು ಫೈನಲ್‌ಗೇರಿದರೆ ಸೆ.11ರಂದು ಮತ್ತೊಮ್ಮೆ ಎದುರಾಗಲಿವೆ.

ಇಂದು ಆಫ್ಘನ್‌-ಲಂಕಾ ಪಂದ್ಯ

ದುಬೈ: 2022ರ ಏಷ್ಯಾಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಷ್ಘಾನಿಸ್ತಾನ ಸೆಣಸಲಿವೆ. ದುಬೈ ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಐಸಿಸಿ ಟಿ20 ರಾರ‍ಯಂಕಿಂಗ್‌ನಲ್ಲಿ ಶ್ರೀಲಂಕಾ 8ನೇ ಸ್ಥಾನದಲ್ಲಿದ್ದು, ಆಫ್ಘನ್‌ 10ನೇ ಸ್ಥಾನದಲ್ಲಿದೆ. ಉಭಯ ತಂಡಗಳು ಈ ವರೆಗೂ ಟಿ20ಯಲ್ಲಿ ಕೇವಲ ಒಂದು ಪಂದ್ಯದಲ್ಲಿ ಎದುರಾಗಿವೆ. 2016ರಲ್ಲಿ ನಡೆದಿದ್ದ ಪಂದ್ಯದಲ್ಲಿ ಶ್ರೀಲಂಕಾ ಜಯಿಸಿತ್ತು.

ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌