ಏಷ್ಯಾಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಆಫ್ಘಾನಿಸ್ತಾನ ದಾಳಿಗೆ ತತ್ತರಿಸಿದೆ. 

ದುಬೈ(ಆ.27): ಆಫ್ಘಾನಿಸ್ತಾನ ವಿರುದ್ದ ಅಬ್ಬರಿಸುವ ವಿಶ್ವಾಸದಲ್ಲಿದ್ದ ಶ್ರೀಲಂಕಾಗೆ ಆಘಾತವಾಗಿದೆ. ಏಷ್ಯಾಕಪ್ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ಆಫ್ಘಾನಿಸ್ತಾನ ಬೌಲರ್‌ಗಳು ಅವಕಾಶ ನೀಡಲಿಲ್ಲ. ಇದರ ಪರಿಣಾಮ ಶ್ರೀಲಂಕಾ 19.4 ಓವರ್‌ಗಳಲ್ಲಿ 105 ರನ್‌ಗೆ ಆಲೌಟ್ ಆಗಿದೆ. ಫಜಲಾಖ್ ಫಾರೂಖಿ, ಮುಜೀಬ್ ಹಾಗೂ ನಬಿ ದಾಳಿಗೆ ಲಂಕಾ ಪರದಾಡಿತು. ಆದರೆ ಭಾನುಕಾ ರಾಜಪಕ್ಸೆ ಹಾಗೂ ಚಾಮಿಕ ಕರುಣಾರತ್ನೆ ಹೋರಾಟದಿಂದ ಶ್ರೀಲಂಕಾ 100 ರನ್ ಗಡಿ ದಾಟಿತು. ಟಾಸ್ ಸೋತು ಬ್ಯಾಟಿಂಗ್ ಇಳಿದ ಶ್ರೀಲಂಕಾ ತಂಡಕ್ಕೆ ಆರಂಭದಲ್ಲೇ ಆಫ್ಘಾನಿಸ್ತಾನ ಬೌಲರ್‌ಗಳು ಶಾಕ್ ನೀಡಿತು. ಕುಸಾಲ್ ಮೆಂಡಿಸ್ ಕೇವಲ 2 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಚಾರಿತ್ ಅಸಲಂಕಾ ಡಕೌಟ್ ಆದರು. ಆರಂಭದಲ್ಲೇ ಫಾರೂಖಿ ಎರಡು ಪ್ರಮುಖ ವಿಕೆಟ್ ಕಬಳಿಸಿ ಆಫ್ಘಾನಿಸ್ತಾನಕ್ಕೆ ಭರ್ಜರಿ ಮೇಲುಗೈ ತಂದುಕೊಟ್ಟರು. ಪಥುಮ್ ನಿಸಾಂಕ 3 ರನ್ ಸಿಡಿಸಿ ಔಟಾದರು.

ಶ್ರೀಲಂಕಾ 5 ರನ್ ಗಳಿಸುವಷ್ಟರಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ದಸೂನ್ ಗುಣತಿಲಕ 17 ರನ್ ಸಿಡಿಸಿ ಔಟಾದರು. ಭಾನುಕಾ ರಾಜಪಕ್ಸ ಹೋರಾಟ ನೀಡಿದರೆ, ಇತರ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ತಿಣುಕಾಡಿದರು. ವಾನಿಂದು ಹಸರಂಗ 2 ರನ್‌ಗೆ ಔಟಾದರು. ಇತ್ತ ನಾಯಕ ದಸೂನು ಶನಕಾ ಡಕೌಟ್ ಆದರು.

ರೋಹಿತ್ ಶರ್ಮಾ 'ರಿಯಲ್' ಕ್ಯಾಪ್ಟನ್‌: ಚಹಲ್‌ ದಾಂಪತ್ಯದ ಗಾಳಿಸುದ್ದಿಗೆ ಹಿಟ್‌ಮ್ಯಾನ್ ಚಾಟಿ..

ಚಾಮಿಕ ಕರುಣಾರತ್ನೆ ಹಾಗೂ ಭಾನುಕಾ ರಾಜಪಕ್ಸ ಹೋರಾಟ ಶ್ರೀಲಂಕಾ ತಂಡಕ್ಕೆ ಆಸರೆಯಾದರು. ಆದರೆ ಭಾನುಕ 38 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಮಹೇಶ ತೀಕ್ಷಾನ, ಮಥೀಶಾ ಪಥಿರಾನಾ ರನ್ ಸಿಡಿಸಲಿಲ್ಲ. ಅಂತಿಮ ಹಂತದಲ್ಲಿ ಚಾಮಿಕ ಕರುಣಾರತ್ನೆ ಹೋರಾಟದಿಂದ ಶ್ರೀಲಂಕಾ 100 ರನ್ ಗಡಿ ದಾಟಿತು. ಆದರೆ ಚಾಮಿಕ 31 ರನ್ ಸಿಡಿಸಿ ಔಟಾದರು. ಇದರೊಂದಿಗೆ ಶ್ರೀಲಂಕಾ 19.4 ಓವರ್‌ಗಳಲ್ಲಿ 105 ರನ್ ಸಿಡಿಸಿ ಆಲೌಟ್ ಆಯಿತು. 

ಆಫ್ಘಾನಿಸ್ತಾನ ಪರ ಫಾರೂಖಿ 3 ವಿಕೆಟ್ ಕಬಳಿಸಿ ಮಿಂಚಿದರು. ಮುಜೀಬ್ ಯಆರ್ ರೆಹಮಾನ್ 2 , ನಾಯಕ ಮೊಹಮ್ಮದ್ 2 ಹಾಗೂ ನವೀನ್ ಉಲ್ ಹಕ್ 1 ವಿಕೆಟ್ ಕಬಳಿಸಿದರು. ಕರಾರುವಕ್ ದಾಳಿಗೆ ಶ್ರೀಲಂಕಾ ಅಲ್ಪಮೊತ್ತಕ್ಕೆ ಕುಸಿದಿದೆ. ಚೇಸಿಂಗ್‌ಗೆ ಹೆಚ್ಚು ಸಹಕರಿಸುವ ದುಬೈ ಪಿಚ್‌ನಲ್ಲಿ ಆಫ್ಘಾನಿಸ್ತಾನ ಲಂಕಾ ಮಣಿಸುವ ವಿಶ್ವಾಸದಲ್ಲಿದೆ. ಈ ಮೂಲಕ ಏಷ್ಯಾಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡುವ ಲೆಕ್ಕಾಚಾರದಲ್ಲಿದೆ. 

Asia Cup: ಪಾಕ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್‌ ಇಂಡಿಯಾ ಪ್ಲೇಯಿಂಗ್‌ ಇಲೆವೆನ್‌ ಲೀಕ್‌!

ಏಷ್ಯಾಕಪ್ ಟೂರ್ನಿ ಇಂದಿನಿಂದ ಆರಂಭಗೊಂಡಿದೆ. ನಾಳಿನ(ಆ.28) ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ಈ ರೋಚಕ ಹೋರಾಟಕ್ಕೆ ಇಡೀ ಕ್ರಿಕೆಟ್ ಜಗತ್ತು ಕಾಯುತ್ತಿದೆ. 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿತ್ತು. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿತ್ತು. ಹೀಗಾಗಿ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಕಾಯುತ್ತಿದೆ. ಇತ್ತ ಅಭಿಮಾನಿಗಳು ಕೂಡ ಸಜ್ಜಾಗಿದ್ದಾರೆ.