Ashes Test: ಸಂಕಷ್ಟದಲ್ಲಿದ್ದ ಆಸ್ಟ್ರೇಲಿಯಾಗೆ ಟ್ರಾವಿಸ್ ಹೆಡ್ ಶತಕದಾಸರೆ..!
* ಆ್ಯಷಸ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಶತಕ ಚಚ್ಚಿದ ಟ್ರಾವಿಸ್ ಹೆಡ್
* ಆರಂಭಿಕ ಆಘಾತದಿಂದ ಪಾರಾದ ಆತಿಥೇಯ ಆಸ್ಟ್ರೇಲಿಯಾ
* ಬ್ಯಾಟಿಂಗ್‌ನಲ್ಲಿ ಶೂನ್ಯ ಸುತ್ತಿದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್

ಹೋಬರ್ಟ್(ಜ.14): ಇಂಗ್ಲೆಂಡ್ ವೇಗಿಗಳ ಮಾರಕ ದಾಳಿಗೆ ತತ್ತರಿಸಿ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದ ಆಸ್ಟ್ರೇಲಿಯಾ ತಂಡಕ್ಕೆ ಟ್ರಾವಿಸ್ ಹೆಡ್ ಶತಕ ಬಾರಿಸುವ ಮೂಲಕ ಮತ್ತೊಮ್ಮೆ ತಂಡಕ್ಕೆ ಆಸರೆಯಾಗಿದ್ದಾರೆ. ಕೋವಿಡ್‌ನಿಂದಾಗಿ ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಟ್ರಾವಿಸ್ ಹೆಡ್ ಇದೀಗ ಮತ್ತೊಂದು ಸ್ಪೋಟಕ ಶತಕ ಬಾರಿಸಿ ಮಿಂಚಿದ್ದಾರೆ. 2021-22ನೇ ಸಾಲಿನ ಆ್ಯಷಸ್ ಟೆಸ್ಟ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದ ಮೊದಲ ದಿನದಾಟದಂತ್ಯದ ವೇಳೆಗೆ ಆಸ್ಟ್ರೇಲಿಯಾ ತಂಡವು 6 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದಾಗಿ ಮೊದಲ ದಿನದಾಟದಲ್ಲಿ ಕೇವಲ 59.3 ಓವರ್‌ಗಳನ್ನಷ್ಟೇ ಬೌಲಿಂಗ್ ಮಾಡಲು ಸಾಧ್ಯವಾಯಿತು.
ಇಲ್ಲಿನ ಬೆಲೆರಿವ್ ಓವಲ್ ಮೈದಾನದಲ್ಲಿ ಆರಂಭವಾದ ಐದನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮೊದಲು ಬೌಲಿಂಗ್ ಮಾಡುವ ತೀರ್ಮಾನವನ್ನು ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡುವಲ್ಲಿ ಇಂಗ್ಲೆಂಡ್ ವೇಗಿಗಳು ಯಶಸ್ವಿಯಾದರು. ಮೊದಲ ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಅವರನ್ನು ಬಲಿಪಡೆಯುವಲ್ಲಿ ವೇಗಿ ಓಲಿ ರಾಬಿನ್‌ಸನ್ ಯಶಸ್ವಿಯಾದರು. ಇನ್ನು ಇದರ ಬೆನ್ನಲ್ಲೇ ಕಳೆದ ಪಂದ್ಯದಲ್ಲಿ ಎರಡೂ ಇನಿಂಗ್ಸ್‌ನಲ್ಲೂ ಶತಕ ಚಚ್ಚಿ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದ್ದ ಉಸ್ಮಾನ್ ಖವಾಜ ಅವರನ್ನು ಕೇವಲ ಒಂದಂಕಿ(6) ಮೊತ್ತಕ್ಕೆ ಬಲಿಪಡೆಯುವಲ್ಲಿ ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ ಯಶಸ್ವಿಯಾದರು. ಇನ್ನು ಅನುಭವಿ ಬ್ಯಾಟರ್ ಸ್ಟೀವ್ ಸ್ಮಿತ್ ಕೇವಲ 2 ಎಸೆತಗಳನ್ನು ಎದುರಿಸಿ ಶೂನ್ಯ ಸುತ್ತಿ ರಾಬಿನ್‌ಸನ್‌ಗೆ ಎರಡನೇ ಬಲಿಯಾದರು. ಈ ವೇಳೆ ಆಸ್ಟ್ರೇಲಿಯಾ ತಂಡವು 12 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಲುಬುಶೇನ್-ಟ್ರಾವಿಸ್ ಜತೆಯಾಟ: ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಆಸ್ಟ್ರೇಲಿಯಾ ತಂಡಕ್ಕೆ ನಾಲ್ಕನೇ ವಿಕೆಟ್‌ಗೆ ನಂ.1 ಟೆಸ್ಟ್ ಬ್ಯಾಟರ್ ಮಾರ್ನಸ್ ಲಬುಶೇನ್ ಹಾಗೂ ಟ್ರಾವಿಸ್ ಹೆಡ್ 71 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಮೂಲಕ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡುವಲ್ಲಿ ಈ ಜೋಡಿ ಯಶಸ್ವಿಯಾಯಿತು. ಚುರುಕಾಗಿ ರನ್‌ಗಳಿಸಿದ ಮಾರ್ನಸ್ ಲಬುಶೇನ್ ಕೇವಲ 53 ಎಸೆತಗಳಲ್ಲಿ 9 ಬೌಂಡರಿ ಸಹಿತ 44 ರನ್ ಬಾರಿಸಿ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಈ ವೇಳೆ ಆಸ್ಟ್ರೇಲಿಯಾ ತಂಡವು 83 ರನ್ ಗಳಿಸಿತ್ತು.
Ashes Test: ಕೊನೆಯ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ
ಹೆಡ್-ಗ್ರೀನ್ ಜುಗಲ್ಬಂದಿ: ಕೇವಲ 83 ರನ್‌ಗಳಿಸುವಷ್ಟರಲ್ಲಿ ಆಸ್ಟ್ರೇಲಿಯಾದ ನಾಲ್ವರು ಅಗ್ರಕ್ರಮಾಂಕದ ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಈ ವೇಳೆ 5ನೇ ವಿಕೆಟ್‌ಗೆ ಟ್ರಾವಿಸ್ ಹೆಡ್ ಹಾಗೂ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿ 160 ಎಸೆತಗಳನ್ನು ಎದುರಿಸಿ 121 ರನ್‌ಗಳ ಜತೆಯಾಟವಾಡಿತು. ಟ್ರಾವಿಸ್ ಹೆಡ್ 112 ಎಸೆತಗಳನ್ನು ಎದುರಿಸಿ ಟೆಸ್ಟ್ ವೃತ್ತಿಜೀವನದ ನಾಲ್ಕನೇ ಶತಕ ಸಿಡಿಸಿ ಸಂಭ್ರಮಿಸಿದರು. ಇದರ ಬೆನ್ನಲ್ಲೇ ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ಟ್ರಾವಿಸ್ ಹೆಡ್ ವಿಕೆಟ್ ಒಪ್ಪಿಸಿದರು. ಇನ್ನು ಆಲ್ರೌಂಡರ್ ಕ್ಯಾಮರೋನ್ ಗ್ರೀನ್ 74 ರನ್ ಬಾರಿಸಿ ಮಾರ್ಕ್ ವುಡ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.
ಸದ್ಯ ಆಸ್ಟ್ರೇಲಿಯಾ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ(10) ಹಾಗೂ ಮಿಚೆಲ್ ಸ್ಟಾರ್ಕ್(೦) ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.