Asianet Suvarna News Asianet Suvarna News

Ashes Test: ಶತಕ ಚಚ್ಚಿ ಇಂಗ್ಲೆಂಡ್ ತಂಡವನ್ನು ಬಚಾಚ್ ಮಾಡಿದ ಬೇರ್‌ಸ್ಟೋವ್‌..!

* ಆ್ಯಷಸ್‌ ಟೆಸ್ಟ್‌ ಸರಣಿಯ ಸಿಡ್ನಿ ಟೆಸ್ಟ್‌ನಲ್ಲಿ ಫಾಲೋ ಆನ್ ಭೀತಿಯಿಂದ ಪಾರಾದ ಇಂಗ್ಲೆಂಡ್

* ಆರಂಭಿಕ ಆಘಾತದ ಹೊರತಾಗಿಯೂ ದಿಟ್ಟ ಹೋರಾಟ ತೋರಿದ ಬೇರ್‌ಸ್ಟೋವ್-ಬೆನ್ ಸ್ಟೋಕ್ಸ್ ಜೋಡಿ

* ವೃತ್ತಿಜೀವನದ 7ನೇ ಟೆಸ್ಟ್ ಶತಕ ಸಿಡಿಸಿ ಮಿಂಚಿದ ಜಾನಿ ಬೇರ್‌ಸ್ಟೋವ್

Ashes Test Jonny Bairstow unbeaten Century helps England Avoid Follow On in Sydney Test kvn
Author
Bengaluru, First Published Jan 7, 2022, 4:50 PM IST

ಸಿಡ್ನಿ(ಜ.07): ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ತಂಡಗಳ ನಡುವಿನ 2021-22ನೇ ಸಾಲಿನ ಆ್ಯಷಸ್‌ ಟೆಸ್ಟ್‌ ಸರಣಿಯ (Ashes Test Series) ನಾಲ್ಕನೇ ಪಂದ್ಯದಲ್ಲಿ ಕೊನೆಗೂ ಇಂಗ್ಲೆಂಡ್ ಪಾಳಯದಿಂದ ಮೊದಲ ಶತಕ ಮೂಡಿ ಬಂತು. ಅದೂ ಮತ್ತೊಮ್ಮೆ ಫಾಲೋ ಆನ್‌ ಭೀತಿಗೆ ಸಿಲುಕಿದ್ದ ಇಂಗ್ಲೆಂಡ್‌ ತಂಡವನ್ನು ಪಾರು ಮಾಡುವಲ್ಲಿ ಜಾನಿ ಬೇರ್‌ಸ್ಟೋವ್ (Jonny Bairstow) ಬಾರಿಸಿದ ಸಮಯೋಚಿತ ಶತಕ ನೆರವಿಗೆ ಬಂದಿದೆ. ಸಿಡ್ನಿ ಟೆಸ್ಟ್ ಪಂದ್ಯದ ಮೂರನೇ ದಿನದಾಟದಂತ್ಯದ ವೇಳೆಗೆ ಇಂಗ್ಲೆಂಡ್ ತಂಡವು (England Cricket Team) 7 ವಿಕೆಟ್ ಕಳೆದುಕೊಂಡು 258 ರನ್ ಬಾರಿಸಿದ್ದು, ಇನ್ನೂ 158 ರನ್‌ಗಳ ಹಿನ್ನೆಡೆಯಲ್ಲಿದೆ.

ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (Sydney Cricket Stadium) ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ವಿಕೆಟ್‌ ನಷ್ಟವಿಲ್ಲದೇ 13 ರನ್‌ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟರ್ ಹಸೀಬ್ ಹಮೀದ್ ಕೇವಲ 6 ರನ್ ಬಾರಿಸಿ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನೂ ಮತ್ತೋರ್ವ ಆರಂಭಿಕ ಬ್ಯಾಟರ್‌ ಜಾಕ್‌ ಕ್ರಾವ್ಲೆ 18 ರನ್ ಬಾರಿಸಿ ಬೊಲ್ಯಾಂಡ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಡೇವಿಡ್ ಮಲಾನ್ ಆಟ ಮೂರು ರನ್‌ಗಳಿಗೆ ಸೀಮಿತವಾದರೆ, ನಾಯಕ ಜೋ ರೂಟ್‌ (Joe Root) ಶೂನ್ಯ ಸುತ್ತಿ ಬೊಲ್ಯಾಂಡ್‌ಗೆ ಎರಡನೇ ಬಲಿಯಾದರು.

ಸ್ಟೋಕ್ಸ್‌-ಬೇರ್‌ಸ್ಟೋವ್ ಜುಗಲ್ಬಂದಿ: ಒಂದು ಹಂತದಲ್ಲಿ ಕೇವಲ 36 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಮತ್ತೊಮ್ಮೆ ಫಾಲೋ ಆನ್ ಭೀತಿಗೆ ಸಿಲುಕಿದ್ದ ಇಂಗ್ಲೆಂಡ್ ತಂಡಕ್ಕೆ 5ನೇ ವಿಕೆಟ್‌ಗೆ ಜಾನಿ ಬೇರ್‌ಸ್ಟೋವ್ ಹಾಗೂ ಬೆನ್ ಸ್ಟೋಕ್ಸ್‌ (Ben Stokes) ಜೋಡಿ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. 5ನೇ ವಿಕೆಟ್‌ಗೆ ಈ ಜೋಡಿ 128 ರನ್‌ಗಳ ಜತೆಯಾಟ ನಿಭಾಯಿಸಿತು. ಅದರಲ್ಲೂ ತಾವು 16 ರನ್‌ ಗಳಿಸಿದ್ದಾಗ ಸಿಕ್ಕ ಜೀವದಾನವನ್ನು ಸದುಪಯೋಗ ಪಡಿಸಿಕೊಂಡ ಸ್ಟೋಕ್ಸ್‌, ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದರು. ಸ್ಟೋಕ್ಸ್ 91 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 66 ರನ್ ಬಾರಿಸಿ ನೇಥನ್ ಲಯನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಚುರುಕಾದ ಬ್ಯಾಟಿಂಗ್ ನಡೆದ ಜಾನಿ ಬೇರ್‌ಸ್ಟೋವ್ ಟೆಸ್ಟ್ ವೃತ್ತಿಜೀವನದ 7ನೇ ಶತಕ ಬಾರಿಸಿ ಅಬ್ಬರಿಸಿದರು. ಒಟ್ಟು 140 ಎಸೆತಗಳನ್ನು ಎದುರಿಸಿದ ಬೇರ್‌ಸ್ಟೋವ್‌ 8 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 103 ರನ್‌ ಗಳಿಸಿ ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. 

Ashes Test: ಶತಕ ಸಿಡಿಸಿ ಅಬ್ಬರಿಸಿದ ಉಸ್ಮಾನ್ ಖವಾಜ, ಇಂಗ್ಲೆಂಡ್‌ ಎಚ್ಚರಿಕೆಯ ಆರಂಭ

ಬೇರ್‌ಸ್ಟೋವ್‌ಗೆ ಸಾಥ್ ಕೊಟ್ಟ ಮಾರ್ಕ್‌ ವುಡ್‌: ಬೇನ್ ಸ್ಟೋಕ್ಸ್ ವಿಕೆಟ್ ಪತನದ ಬೆನ್ನಲ್ಲೇ ಕ್ರೀಸ್‌ಗಿಳಿದ ಜೋಸ್ ಬಟ್ಲರ್ ಖಾತೆ ತೆರೆಯುವ ಮುನ್ನವೇ ವಿಕೆಟ್ ಕೈಚೆಲ್ಲಿದರು. ಇದಾದ ಬಳಿಕ ಏಳನೇ ವಿಕೆಟ್‌ಗೆ ಜಾನಿ ಬೇರ್‌ಸ್ಟೋವ್ ಹಾಗೂ ಮಾರ್ಕ್‌ ವುಡ್ ಜೋಡಿ 72 ಎಸೆತಗಳಲ್ಲಿ 72 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಫಾಲೋ ಆನ್ ಭೀತಿಯಿಂದ ಪಾರು ಮಾಡಿತು. ಮಾರ್ಕ್‌ ವುಡ್ 41 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 39 ರನ್‌ ಬಾರಿಸಿ ಪ್ಯಾಟ್ ಕಮಿನ್ಸ್‌ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ: 416/8 ಡಿಕ್ಲೇರ್(ಮೊದಲ ಇನಿಂಗ್ಸ್)
ಉಸ್ಮಾನ್ ಖವಾಜ: 137
ಸ್ಟುವರ್ಟ್‌ ಬ್ರಾಡ್‌: 101/5

ಇಂಗ್ಲೆಂಡ್‌: 258/7
ಜಾನಿ ಬೇರ್‌ಸ್ಟೋವ್: 103*
ಸ್ಕಾಟ್ ಬೊಲ್ಯಾಂಡ್‌: 25/2

(* ಮೂರನೇ ದಿನದಾಟದಂತ್ಯದ ವೇಳೆಗೆ ) 

Follow Us:
Download App:
  • android
  • ios