Asianet Suvarna News Asianet Suvarna News

Ashes Test: ಶತಕ ಸಿಡಿಸಿ ಅಬ್ಬರಿಸಿದ ಉಸ್ಮಾನ್ ಖವಾಜ, ಇಂಗ್ಲೆಂಡ್‌ ಎಚ್ಚರಿಕೆಯ ಆರಂಭ

* ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಚಚ್ಚಿದ ಉಸ್ಮಾನ್ ಖವಾಜ

* ಮೊದಲ ಇನಿಂಗ್ಸ್‌ನಲ್ಲಿ 416 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡ ಆಸೀಸ್

* ಸಿಡ್ನಿ ಟೆಸ್ಟ್ ಪಂದ್ಯದಲ್ಲೂ ಪ್ರವಾಸಿ ಇಂಗ್ಲೆಂಡ್ ಮೇಲೆ ಹಿಡಿತ ಸಾಧಿಸಿದ ಆಸ್ಟ್ರೇಲಿಯಾ

Ashes Test Usman Khawaja hits Glories Century Australia Declare At 416 for 8 kvn
Author
Bengaluru, First Published Jan 6, 2022, 4:23 PM IST

ಸಿಡ್ನಿ(ಜ.06): ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ (Australia vs England) ತಂಡುವಿನ ಆ್ಯಷಸ್ ಟೆಸ್ಟ್‌ ಸರಣಿಯ (Ashes Test Series) ಸಿಡ್ನಿ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯಾ ದಿಟ್ಟ ಬ್ಯಾಟಿಂಗ್‌ ನಡೆಸಿದೆ. ಟ್ರಾವಿಡ್‌ ಹೆಡ್ ಬದಲಿಗೆ ತಂಡದಲ್ಲಿ ಅವಕಾಶಗಿಟ್ಟಿಸಿಕೊಂಡಿರುವ ಉಸ್ಮಾನ್‌ ಖವಾಜ ಆಕರ್ಷಕ ಶತಕ ಬಾರಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಬಲ ತುಂಬಿದ್ದಾರೆ. ಪರಿಣಾಮ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗಳೆದುಕೊಂಡು 416 ರನ್‌ಗಳಿಸಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿದೆ. ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿರುವ ಇಂಗ್ಲೆಂಡ್ ತಂಡವು ಎರಡನೇ ದಿನದಾಟದಂತ್ಯದ ವೇಳೆಗೆ ವಿಕೆಟ್‌ ನಷ್ಟವಿಲ್ಲದೇ 13 ರನ್‌ ಗಳಿಸಿದೆ.

ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (Sydney Cricket Stadium) ನಡೆಯುತ್ತಿರುವ ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ ಮಳೆ ಅಡಚಣೆಯ ಹೊರತಾಗಿಯೂ ಮೊದಲ ದಿನದಾಟದಲ್ಲಿ ಅಸ್ಟ್ರೇಲಿಯಾ ಕ್ರಿಕೆಟ್ ತಂಡವು (Australian Cricket Team) 3 ವಿಕೆಟ್ ಕಳೆದುಕೊಂಡು 126 ರನ್‌ ಗಳಿಸಿತ್ತು. ಎರಡನೇ ದಿನದಾಟದಲ್ಲಿ ಅನುಭವಿ ಬ್ಯಾಟರ್‌ ಸ್ಟೀವ್ ಸ್ಮಿತ್ (Steve Smith) ಹಾಗೂ ಉಸ್ಮಾನ್ ಖವಾಜ (Usman Khawaja) ಜೋಡಿ ನಾಲ್ಕನೇ ವಿಕೆಟ್‌ಗೆ 115 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಸ್ಟೀವ್ ಸ್ಮಿತ್ 141 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 67 ರನ್‌ ಗಳಿಸಿ ಸ್ಟುವರ್ಟ್‌ ಬ್ರಾಡ್‌ಗೆ ವಿಕೆಟ್‌ ಒಪ್ಪಿಸಿದರು. ಈ ಮೂಲಕ ಉಭಯ ಆಟಗಾರರ ನಡುವಿನ ಶತಕದ ಜತೆಯಾಟಕ್ಕೆ ಬ್ರೇಕ್ ಬಿದ್ದಿತು. 

2 ವರ್ಷಗಳ ಬಳಿಕ ಶತಕ ಚಚ್ಚಿದ ಉಸ್ಮಾನ್ ಖವಾಜ: ಟ್ರಾವಿಸ್‌ ಹೆಡ್‌ ಅನುಪಸ್ಥಿತಿಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶಗಿಟ್ಟಿಸಿಕೊಂಡ ಉಸ್ಮಾನ್ ಖವಾಜ ತಮ್ಮ ಸಿಕ್ಕಿದ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಖವಾಜ 2019ರಲ್ಲಿ ಕೊನೆಯ ಬಾರಿಗೆ ಟೆಸ್ಟ್ ಶತಕ ಬಾರಿಸಿದ್ದರು. ಇದಾದ ಬಳಿಕ 2020 ಹಾಗೂ 2021ರಲ್ಲಿ ತಂಡದಿಂದ ಹೊರಗುಳಿದಿದ್ದ ಖವಾಜ ಇದೀಗ ಶತಕ ಬಾರಿಸುವ ಮೂಲಕ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಿದ್ದಾರೆ.

Ind vs SA Test: ರೋಚಕಘಟ್ಟ ತಲುಪಿದ ಜೋಹಾನ್ಸ್‌ಬರ್ಗ್‌ ಟೆಸ್ಟ್..! ಗೆಲುವು ಯಾರಿಗೆ.?

ಸ್ಟೀವ್ ಸ್ಮಿತ್ ಜತೆ ಆಕರ್ಷಕ ಜತೆಯಾಟ ನಿಭಾಯಿಸಿದ ಖವಾಜ ಟೆಸ್ಟ್‌ ವೃತ್ತಿಜೀವನದ 9ನೇ ಶತಕ ಬಾರಿಸಿ ಅಬ್ಬರಿಸಿದರು. ಅದರಲ್ಲೂ ಏಳನೇ ವಿಕೆಟ್‌ಗೆ ಮಿಚೆಲ್‌ ಸ್ಟಾರ್ಕ್‌ ಜತೆಗೂಡಿ 67 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಉಸ್ಮಾನ್ ಖವಾಜ ಒಟ್ಟು 201 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸಿದರು. ಉಸ್ಮಾನ್ ಖವಾಜ ತಾವು 28 ರನ್‌ ಗಳಿಸಿದ್ದಾಗ ಸಿಕ್ಕ ಜೀವದಾನವನ್ನು ಭರ್ಜರಿಯಾಗಿಯೇ ಬಳಸಿಕೊಂಡು ತನ್ನ ಖಾತೆಗೆ ಮೂರಂಕಿ ಮೊತ್ತ ಸೇರ್ಪಡೆ ಮಾಡಿಕೊಂಡರು. ಖವಾಜ 260 ಎಸೆತಗಳನ್ನು ಎದುರಿಸಿ 13 ಬೌಂಡರಿ ಸಹಿತ 137 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು

ಆಸ್ಟ್ರೇಲಿಯಾ ಪರ ಕೆಳಕ್ರಮಾಂಕದಲ್ಲಿ ನಾಯಕ ಪ್ಯಾಟ್ ಕಮಿನ್ಸ್‌ 24 ರನ್‌ ಗಳಿಸಿದರೆ, ಮಿಚೆಲ್ ಸ್ಟಾರ್ಕ್‌ ಅಜೇಯ 34 ರನ್ ಹಾಗೂ ಕ್ರಿಸ್ ಲಿನ್‌ 16 ರನ್‌ ಗಳಿಸಿ  ಅಜೇಯರಾಗುಳಿದರು.

ಇನ್ನು ಇಂಗ್ಲೆಂಡ್ ಕ್ರಿಕೆಟ್ ತಂಡವು ಅತ್ಯಂತ ಎಚ್ಚರಿಕೆಯಿಂದ ಮೊದಲ ಇನಿಂಗ್ಸ್‌ ಆರಂಭಿಸಿದೆ. ಒಟ್ಟು 5 ಓವರ್ ಎದುರಿಸಿದ ಇಂಗ್ಲೆಂಡ್‌ ಆರಂಭಿಕ ಜೋಡಿ 13 ರನ್ ಕಲೆಹಾಕಿದೆ. ಈ ಪೈಕಿ ಜಾಕ್ ಕ್ರಾವ್ಲಿ ಹಾಗೂ ಹಸೀಬ್ ಹಮೀದ್ ತಲಾ 2 ರನ್ ಬಾರಿಸಿ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯಾ: 416/8 ಡಿಕ್ಲೇರ್ (ಮೊದಲ ಇನಿಂಗ್ಸ್‌)
ಉಸ್ಮಾನ್ ಖವಾಜ: 137
ಸ್ಟುವರ್ಟ್ ಬ್ರಾಡ್: 101/5

ಇಂಗ್ಲೆಂಡ್: 13/0

(* ಎರಡನೇ ದಿನದಾಟದಂತ್ಯದ ವೇಳೆಗೆ)
 

Follow Us:
Download App:
  • android
  • ios