ಆ್ಯಶಸ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿ, 4-1 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಆದರೆ, ತಮ್ಮ ವಿದಾಯದ ಟೆಸ್ಟ್ ಪಂದ್ಯವನ್ನಾಡಿದ ಖವಾಜಾ, ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.

ಸಿಡ್ನಿ: ಆ್ಯಶಸ್‌ ಟೆಸ್ಟ್ ಸರಣಿಯ ಐದನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು ಐದು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಐದು ಪಂದ್ಯಗಳ ಆ್ಯಶಸ್‌ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ತಂಡವು 4-1 ಅಂತರದಲ್ಲಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ವಿದಾಯದ ಟೆಸ್ಟ್ ಪಂದ್ಯವನ್ನಾಡಿದ ಉಸ್ಮಾನ್ ಖವಾಜಾ ಎರಡೂ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸುವ ಮೂಲಕ ನಿರಾಸೆ ಅನುಭವಿಸಿದರು.

ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಐದನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ತಂಡವು 8 ವಿಕೆಟ್ ಕಳೆದುಕೊಂಡು 302 ರನ್ ಬಾರಿಸಿತ್ತು. ಈ ಮೂಲಕ 119 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿತ್ತು. ಇನ್ನು ಐದನೇ ದಿನದಾಟದ ಆರಂಭದಲ್ಲೇ ಜೇಕಬ್ ಬೆಥೆಲ್(154) ಹಾಗೂ ಜೋಶ್ ಟಂಗ್ ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ ಇಂಗ್ಲೆಂಡ್ ತಂಡವು 342 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಆಸ್ಟ್ರೇಲಿಯಾಗೆ ಕೊನೆಯ ಟೆಸ್ಟ್ ಗೆಲ್ಲಲು 160 ರನ್‌ಗಳ ಸಾಧಾರಣ ಗುರಿ ನೀಡಿತು.

ಇನ್ನು ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಗೆ ಟ್ರ್ಯಾವಿಸ್ ಹೆಡ್ ಹಾಗೂ ಜೇಕ್ ವೆದರ್‌ರ್ಲ್ಡ್‌ 62 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಹೆಡ್ 29 ರನ್ ಸಿಡಿಸಿದರೆ, ಜೇಕ್ 34 ರನ್ ಬಾರಿಸಿ ಜೋಶ್ ಟಂಗ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮಾರ್ನಸ್ ಲಬುಶೇನ್ ಆಕರ್ಷಕ 37 ರನ್ ಸಿಡಿಸಿ ರನೌಟ್ ಆದರು. ಸ್ಟೀವ್ ಸ್ಮಿತ್ 12 ರನ್‌ಗೆ ವಿಕೆಟ್ ಒಪ್ಪಿಸಿದರೆ, ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಅಜೇಯ 16 ಹಾಗೂ ಕ್ಯಾಮರೋನ್ ಗ್ರೀನ್ ಅಜೇಯ 22 ರನ್ ಬಾರಿಸುವ ಮೂಲಕ ತಂಡವನ್ನು ಯಾವುದೇ ಅಪಾಯವಿಲ್ಲದೇ ಗೆಲುವಿನ ದಡ ಸೇರಿಸಿದರು.

ವಿದಾಯದ ಪಂದ್ಯದಲ್ಲಿ ಉಸ್ಮಾನ್ ಖವಾಜಾ ಫೇಲ್: 

ಇನ್ನು ಕಳೆದೊಂದು ದಶಕದಿಂದ ಆಸ್ಟ್ರೇಲಿಯಾ ತಂಡದ ಅತ್ಯಂತ ನಂಬಿಗಸ್ಥ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ಉಸ್ಮಾನ್ ಖವಾಜಾ ತಮ್ಮ ಟೆಸ್ಟ್‌ ವೃತ್ತಿಜೀವನ ಕೊನೆಯ ಟೆಸ್ಟ್‌ನಲ್ಲಿ ದೊಡ್ಡ ಮೊತ್ತ ಗಳಿಸಲು ವಿಫಲವಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದ ಖವಾಜಾ, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ಆರು ರನ್‌ಗಳಿಸಿ ಜೋಶ್‌ ಟಂಗ್‌ಗೆ ಎರಡನೇ ಸಲ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಆ್ಯಶಸ್‌ ಟೆಸ್ಟ್ ಸರಣಿಯ ಮೊದಲ ಮೂರು ಪಂದ್ಯಗಳನ್ನು ಗೆಲ್ಲುವುದರೊಂದಿಗೆ ಆಸ್ಟ್ರೇಲಿಯಾ ತಂಡವು ಸರಣಿ ಕೈವಶ ಮಾಡಿಕೊಂಡಿತ್ತು. ಆದರೆ ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ರೋಚಕ ಜಯ ಸಾಧಿಸುವ ಮೂಲಕ ಆಸ್ಟ್ರೇಲಿಯಾಗೆ ತಿರುಗೇಟು ನೀಡಿತ್ತು. ಆದರೆ ಕೊನೆಯ ಟೆಸ್ಟ್‌ನಲ್ಲಿ ಜೇಕಬ್ ಬೆಥೆಲ್ ಹಾಗೂ ಜೋ ರೂಟ್ ಶತಕದ ಹೊರತಾಗಿಯೂ ಸೋಲು ಅನುಭವಿಸಿತು.