Ashes Test: ಇಂಗ್ಲೆಂಡ್ ತಂಡ ಪ್ರಕಟ, ನಿವೃತ್ತಿ ವಾಪಾಸ್ ಪಡೆದು ಆಂಗ್ಲರ ಪಡೆ ಕೂಡಿಕೊಂಡ ಮೋಯಿನ್ ಅಲಿ
ಆ್ಯಷಸ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಇಂಗ್ಲೆಂಡ್ ತಂಡ ಪ್ರಕಟ
ಟೆಸ್ಟ್ ನಿವೃತ್ತಿ ವಾಪಾಸ್ ಪಡೆದು ಇಂಗ್ಲೆಂಡ್ ತಂಡ ಕೂಡಿಕೊಂಡ ಮೋಯಿನ್ ಅಲಿ
ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಆ್ಯಷಸ್ ಟೆಸ್ಟ್ ಸರಣಿ ಜೂನ್ 16ರಿಂದ ಆರಂಭ
ಲಂಡನ್(ಜೂ.07): ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಪಿನ್ ಆಲ್ರೌಂಡರ್ ಮೋಯಿನ್ ಅಲಿ 2021ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದೀಗ ಮುಂಬರುವ ಆಸ್ಟ್ರೇಲಿಯಾ ಎದುರಿನ ಆ್ಯಷಸ್ ಟೆಸ್ಟ್ ಸರಣಿಗೂ ಟೆಸ್ಟ್ ಕ್ರಿಕೆಟ್‌ಗೆ ನೀಡಿದ್ದ ನಿವೃತ್ತಿ ವಾಪಾಸ್ ಪಡೆದಿದ್ದು, ಇಂಗ್ಲೆಂಡ್ ಟೆಸ್ಟ್ ತಂಡ ಕೂಡಿಕೊಂಡಿದ್ದಾರೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಆ್ಯಷಸ್ ಟೆಸ್ಟ್ ಸರಣಿಯು ಜೂನ್ 16ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿದೆ.
ಹೌದು, ಇಂದು ಆಸ್ಟ್ರೇಲಿಯಾ ಎದುರಿನ ಮೊದಲೆರಡು ಆ್ಯಷಸ್ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟವಾಗಿದ್ದು, ಸ್ಪಿನ್ ಆಲ್ರೌಂಡರ್ ಮೋಯಿನ್ ಅಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಟ್ರೇಲಿಯಾ ಎದುರಿನ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಪ್ರಕಟಿಸಲಾಗಿದ್ದು, ಮೊದಲ ಟೆಸ್ಟ್ ಪಂದ್ಯವು ಜೂನ್ 16ರ ಶುಕ್ರವಾರದಂದು ಎಜ್‌ಬಾಸ್ಟನ್‌ನಲ್ಲಿ ಆರಂಭವಾಗಲಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ತಂಡಗಳ ನಡುವಿನ 5 ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯು (Ashes Test Series) ಪ್ರತಿಷ್ಠಿತ ಟೆಸ್ಟ್ ಸರಣಿಗಳಲ್ಲಿ ಒಂದು ಎನಿಸಿಕೊಂಡಿದೆ. ಇದೀಗ ಈ ಮೊದಲು ಆ್ಯಷಸ್ ಟೆಸ್ಟ್ ಸರಣಿಗೆ 16 ಆಟಗಾರರನ್ನೊಳಗೊಂಡ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದ ಜಾಕ್ ಲೀಚ್ ಹೊರಬಿದ್ದಿದ್ದು, ಲೀಚ್ ಬದಲಿಗೆ ಮೋಯಿನ್ ಅಲಿ ತಂಡ ಕೂಡಿಕೊಂಡಿದ್ದಾರೆ. ಸೊಂಟ ನೋವಿನಿಂದ ಬಳಲುತ್ತಿದ್ದ ಜಾಕ್ ಲೀಚ್ ಇದೀಗ ಆ್ಯಷಸ್ ಟೆಸ್ಟ್ ಸರಣಿಯಿಂದಲೇ ಹೊರಬಿದ್ದಿದ್ದಾರೆ.
ಐಸಿಸಿ ಮೂಲಗಳ ಪ್ರಕಾರ 31 ವರ್ಷದ ಸೋಮರ್‌ಸೆಟ್‌ನ ಎಡಗೈ ಸ್ಪಿನ್ನರ್ ಜಾಕ್ ಲೀಚ್ (Jack Leach), ಐರ್ಲೆಂಡ್ ಎದುರಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಈ ಪಂದ್ಯದ ವೇಳೆಯಲ್ಲೇ ಸೊಂಟ ನೋವಿಗೆ ಒಳಗಾಗಿದ್ದ ಲೀಚ್, ಇದೀಗ ಆ್ಯಷಸ್ ಟೆಸ್ಟ್ ಸರಣಿಯಿಂದಲೇ ಹೊರಬಿದ್ದಿದ್ದಾರೆ.
WTC Final: ಶತಮಾನದ ರೈಲ್ವೇ ದುರಂತಕ್ಕೆ ಮಿಡಿದ ಮನ, ಕಪ್ಪು ಪಟ್ಟಿ ತೊಟ್ಟು ಕಣಕ್ಕಿಳಿದ ಟೀಂ ಇಂಡಿಯಾ..!
ಇನ್ನು 35 ವರ್ಷದ ಮೋಯಿನ್ ಅಲಿ (Moeen Ali), 2021ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಅಚ್ಚರಿಯ ರೀತಿಯಲ್ಲಿ ವಿದಾಯ ಘೋಷಿಸಿದ್ದರು. ಆದರೆ ಇದೀಗ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್, ಹೆಡ್ ಕೋಚ್ ಬ್ರೆಂಡನ್ ಮೆಕ್ಕಲಂ ಹಾಗೂ ಇಂಗ್ಲೆಂಡ್ ಪುರುಷರ ಕ್ರಿಕೆಟ್ ತಂಡದ ವ್ಯವಸ್ಥಾಪಕ ನಿರ್ದೇಶಕರಾದ ರಾಬ್ ಕೀ ಅವರು ಮಾತುಕತೆ ನಡೆಸಿ ಮೋಯಿನ್ ಅಲಿ ನಿವೃತ್ತಿ ನಿರ್ಧಾರ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬರ್ಮಿಂಗ್‌ಹ್ಯಾಮ್‌ನಲ್ಲಿ ಜನಿಸಿದ ಮೋಯಿನ್ ಅಲಿ ಇಂಗ್ಲೆಂಡ್ ಪರ 64 ಟೆಸ್ಟ್ ಪಂದ್ಯಗಳನ್ನಾಡಿ 2,914 ರನ್ ಬಾರಿಸಿದ್ದಾರೆ. ಇದಷ್ಟೇ ಅಲ್ಲದೇ ಬೌಲಿಂಗ್‌ನಲ್ಲಿ 195 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಮಧ್ಯಮ ಹಾಗೂ ಕೆಳ ಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟರ್ ಆಗಿ ಗುರುತಿಸಿಕೊಂಡಿರುವ ಮೋಯಿನ್ ಅಲಿ, ಟೆಸ್ಟ್ ಕ್ರಿಕೆಟ್‌ನಲ್ಲಿ 5 ಶತಕ ಹಾಗೂ 14 ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಇದೀಗ ಮೋಯಿನ್ ಅಲಿ, ತಂಡ ಸೇರ್ಪಡೆ ಬೆನ್ ಸ್ಟೋಕ್ಸ್ (Ben Stokes) ಪಡೆಯ ಬ್ಯಾಟಿಂಗ್ ಕ್ರಮಾಂಕ ಮತ್ತಷ್ಟು ಸದೃಢವಾಗುವಂತೆ ಮಾಡಿದೆ.
ಆ್ಯಷಸ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಇಂಗ್ಲೆಂಡ್ ತಂಡ ಹೀಗಿದೆ:
ಬೆನ್ ಸ್ಟೋಕ್ಸ್(ನಾಯಕ), ಮೋಯಿನ್ ಅಲಿ, ಜೇಮ್ಸ್ ಆ್ಯಂಡರ್‌ಸನ್, ಜಾನಿ ಬೇರ್‌ಸ್ಟೋವ್, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೂಕ್, ಜಾಕ್ ಕ್ರಾವ್ಲಿ, ಬೆನ್ ಡುಕೆಟ್, ಡ್ಯಾನ್ ಲಾರೆನ್ಸ್, ಓಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಓಲಿ ರಾಬಿನ್‌ಸನ್, ಜೋ ರೂಟ್, ಜೋಶ್ ಟಂಗ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.