ಪರ್ತ್‌ನಲ್ಲಿ ನಡೆಯಲಿರುವ ಮೊದಲ ಆ್ಯಶಸ್ ಟೆಸ್ಟ್‌ಗೆ ಸ್ಟೀವನ್ ಸ್ಮಿತ್ ನಾಯಕತ್ವದಲ್ಲಿ 15 ಸದಸ್ಯರ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಪ್ಯಾಟ್ ಕಮಿನ್ಸ್ ಗಾಯದ ಕಾರಣ ಅಲಭ್ಯರಾಗಿದ್ದು, ಜೇಕ್ ವೆಥರಾಲ್ಡ್, ಬ್ರೆಂಡನ್ ಡೊಗೆಟ್ ಮತ್ತು ಸೀನ್ ಅಬಾಟ್ ಹೊಸದಾಗಿ ತಂಡ ಸೇರಿದ್ದಾರೆ. 

ಸಿಡ್ನಿ: ಪರ್ತ್‌ನಲ್ಲಿ ನಡೆಯಲಿರುವ ಮೊದಲ ಆ್ಯಶಸ್ ಟೆಸ್ಟ್‌ಗೆ 15 ಸದಸ್ಯರ ಆಸ್ಟ್ರೇಲಿಯಾ ತಂಡ ಪ್ರಕಟವಾಗಿದ್ದು, ಸ್ಟೀವನ್ ಸ್ಮಿತ್ ಮುನ್ನಡೆಸಲಿದ್ದಾರೆ. ಜೇಕ್ ವೆಥರಾಲ್ಡ್, ಬ್ರೆಂಡನ್ ಡೊಗೆಟ್ ಮತ್ತು ಸೀನ್ ಅಬಾಟ್ ಆಸ್ಟ್ರೇಲಿಯಾ ಟೆಸ್ಟ್ ತಂಡ ಸೇರ್ಪಡೆಗೊಂಡ ಹೊಸ ಮುಖಗಳಾಗಿವೆ

ಇನ್ನು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ಅವರನ್ನು ಕೆಣಕ್ಕಿದ್ದ ಸ್ಯಾಮ್ ಕಾನ್‌ಸ್ಟಾಸ್‌ರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ಅನುಭವಿ ಬ್ಯಾಟರ್ ಮಾರ್ನಸ್ ಲಬುಶೇನ್‌ರನ್ನು ತಂಡಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ. ಕಳೆದ ಋತುವಿನಲ್ಲಿ ಶೆಫೀಲ್ಡ್ ಶೀಲ್ಡ್‌ನಲ್ಲಿ ಟ್ಯಾಸ್ಮೆನಿಯಾ ಪರ ವೆಥರಾಲ್ಡ್ 18 ಇನ್ನಿಂಗ್ಸ್‌ಗಳಿಂದ 50.33 ಸರಾಸರಿಯಲ್ಲಿ 906 ರನ್ ಗಳಿಸಿದ್ದರು. ಸ್ಯಾಮ್ ಕಾನ್‌ಸ್ಟಾಸ್‌ರನ್ನು ತಂಡದಿಂದ ಕೈಬಿಟ್ಟ ಕಾರಣ, ಉಸ್ಮಾನ್ ಖವಾಜಾ ಜೊತೆ 31 ವರ್ಷದ ಆಟಗಾರ ವೆಥರಾಲ್ಡ್ ಆರಂಭಿಕರಾಗಿ ಆಡಬಹುದು.

ನಾಯಕ ಪ್ಯಾಟ್ ಕಮಿನ್ಸ್ ಮೊದಲ ಟೆಸ್ಟ್‌ಗೆ ಅಲಭ್ಯ

ಈ ವರ್ಷ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಗಾಯಗೊಂಡಿದ್ದ ನಾಯಕ ಪ್ಯಾಟ್ ಕಮಿನ್ಸ್‌ ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ. ಹೀಗಾಗಿ ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ. ಎರಡನೇ ಟೆಸ್ಟ್‌ನಿಂದ ನಾಯಕನಾಗಿ ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. ವೆಸ್ಟ್ ಇಂಡೀಸ್ ವಿರುದ್ಧದ ಕಳಪೆ ಪ್ರದರ್ಶನದ ನಂತರ ಕಾನ್‌ಸ್ಟಾಸ್‌ರನ್ನು ತಂಡದಿಂದ ಕೈಬಿಡಲಾಗಿದೆ. ಕೆರಿಬಿಯನ್ ಪ್ರವಾಸದಲ್ಲಿ ಆರು ಇನ್ನಿಂಗ್ಸ್‌ಗಳಿಂದ ಕಾನ್‌ಸ್ಟಾಸ್‌ ಕೇವಲ 50 ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು, ಅದರಲ್ಲಿ ಎರಡು ಬಾರಿ ಸೊನ್ನೆಗೆ ಔಟಾಗಿದ್ದರು. ಮ್ಯಾಥ್ಯೂ ರೆನ್‌ಶಾ, ಮಿಚೆಲ್ ಮಾರ್ಷ್ ಮೊದಲ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾದ ಪ್ರಮುಖ ಆಟಗಾರರಾಗಿದ್ದಾರೆ.

ಕ್ಯಾಮರೂನ್ ಗ್ರೀನ್ ಮತ್ತು ಬ್ಯೂ ವೆಬ್‌ಸ್ಟರ್ ಆಲ್‌ರೌಂಡರ್‌ಗಳು. ಅಲೆಕ್ಸ್ ಕ್ಯಾರಿ ಮತ್ತು ಜೋಶ್ ಇಂಗ್ಲಿಸ್ ವಿಕೆಟ್ ಕೀಪರ್‌ಗಳು. ನೇಥನ್ ಲಿಯಾನ್ ಏಕೈಕ ಸ್ಪಿನ್ನರ್. ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್, ಸ್ಕಾಟ್ ಬೋಲ್ಯಾಂಡ್ ವೇಗದ ಬೌಲರ್‌ಗಳಾಗಿ ಕಣಕ್ಕಿಳಿಯಲಿದ್ದಾರೆ. ನವೆಂಬರ್ 21 ರಂದು ಮೊದಲ ಟೆಸ್ಟ್ ಆರಂಭವಾಗಲಿದೆ.

ಮೊದಲ ಟೆಸ್ಟ್‌ಗೆ ಆಸೀಸ್ ತಂಡ: 

ಸ್ಟೀವ್ ಸ್ಮಿತ್ (ನಾಯಕ), ಸೀನ್ ಅಬಾಟ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಬ್ರೆಂಡನ್ ಡೊಗೆಟ್, ಕ್ಯಾಮರೂನ್ ಗ್ರೀನ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಮಿಚೆಲ್ ಸ್ಟಾರ್ಕ್, ಜೇಕ್ ವೆಥರಾಲ್ಡ್, ಬ್ಯೂ ವೆಬ್‌ಸ್ಟರ್.