ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನೊಂದಿಗೆ ಪಾಕಿಸ್ತಾನವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಈ ಬದಲಾವಣೆಯಿಂದಾಗಿ, ಭಾರತ ತಂಡವು ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದು, ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ದುಬೈ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿ ಪಾಕಿಸ್ತಾನ ಎರಡನೇ ಸ್ಥಾನಕ್ಕೆ ಏರಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಗೆಲ್ಲುವ ಮೂಲಕ ಪಾಕಿಸ್ತಾನ ಭಾರತವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿ ಕೇವಲ ಒಂದು ಟೆಸ್ಟ್ ಆಡಿರುವ ಪಾಕಿಸ್ತಾನ, 12 ಪಾಯಿಂಟ್ ಮತ್ತು 100% ಪ್ರಮಾಣದೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ ಎರಡನೇ ಸ್ಥಾನಕ್ಕೆ ಬಂದ ನಂತರ ಭಾರತ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ಭಾರತಕ್ಕಿಂತ ಮುಂದಿದೆ ಶ್ರೀಲಂಕಾ

ಏಳು ಟೆಸ್ಟ್ ಆಡಿರುವ ಭಾರತ ನಾಲ್ಕು ಗೆಲುವು, ಎರಡು ಸೋಲು ಮತ್ತು ಒಂದು ಡ್ರಾ ಸೇರಿದಂತೆ 52 ಪಾಯಿಂಟ್ ಮತ್ತು 61.90% ಪ್ರಮಾಣದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಕೇವಲ ಎರಡು ಟೆಸ್ಟ್ ಆಡಿ ಒಂದು ಗೆಲುವು ಮತ್ತು ಒಂದು ಡ್ರಾ ಸೇರಿದಂತೆ 16 ಪಾಯಿಂಟ್ ಮತ್ತು 66.67 % ಪ್ರಮಾಣ ಹೊಂದಿರುವ ಶ್ರೀಲಂಕಾ, ಭಾರತಕ್ಕಿಂತ ಮುಂದೆ ಮೂರನೇ ಸ್ಥಾನದಲ್ಲಿದೆ. ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೂರೂ ಟೆಸ್ಟ್ ಗೆದ್ದು 36 ಪಾಯಿಂಟ್ ಮತ್ತು 100% ಪ್ರಮಾಣ ಹೊಂದಿರುವ ಆಸ್ಟ್ರೇಲಿಯಾ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್‌ನಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಟೆಸ್ಟ್ ಆಡಿದ ತಂಡ ಎನ್ನುವ ಹೆಗ್ಗಳಿಕೆಗೆ ಟೀಂ ಇಂಡಿಯಾ ಪಾತ್ರವಾಗಿದೆ. ಭಾರತ ಇದುವರೆಗೆ ಏಳು ಟೆಸ್ಟ್ ಆಡಿದೆ.

ಐದು ಟೆಸ್ಟ್‌ಗಳಲ್ಲಿ ಎರಡು ಗೆಲುವು, ಎರಡು ಸೋಲು ಮತ್ತು ಒಂದು ಡ್ರಾ ಸೇರಿದಂತೆ 26 ಪಾಯಿಂಟ್ ಮತ್ತು 43.33 % ಪ್ರಮಾಣ ಹೊಂದಿರುವ ಇಂಗ್ಲೆಂಡ್, ಪಾಯಿಂಟ್ ಪಟ್ಟಿಯಲ್ಲಿ ಭಾರತದ ನಂತರ ಐದನೇ ಸ್ಥಾನದಲ್ಲಿದೆ. ಎರಡು ಟೆಸ್ಟ್‌ಗಳಲ್ಲಿ ಒಂದು ಸೋಲು ಮತ್ತು ಒಂದು ಡ್ರಾ ಸೇರಿದಂತೆ ನಾಲ್ಕು ಪಾಯಿಂಟ್ ಮತ್ತು 16.67% ಪ್ರಮಾಣ ಹೊಂದಿರುವ ಬಾಂಗ್ಲಾದೇಶ ಆರನೇ ಸ್ಥಾನದಲ್ಲಿದೆ. ಆಡಿದ ಐದೂ ಟೆಸ್ಟ್‌ಗಳನ್ನು ಸೋತ ವಿಂಡೀಸ್ ಏಳನೇ ಸ್ಥಾನದಲ್ಲಿದೆ. ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿರುವ ಎರಡನೇ ಟೆಸ್ಟ್‌ನ ಫಲಿತಾಂಶದ ಆಧಾರದ ಮೇಲೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಟೇಬಲ್‌ನಲ್ಲಿ ಮತ್ತೆ ಬದಲಾವಣೆಯಾಗಲಿದೆ. ನ್ಯೂಜಿಲೆಂಡ್ ಇದುವರೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ.

ಎರಡನೇ ಟೆಸ್ಟ್‌ನಲ್ಲಿ ಪಾಕ್ ಎದುರು ಹರಿಣಗಳ ಪಡೆ ದಿಟ್ಟ ಹೋರಾಟ

ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದಲ್ಲಿ ಪಾಕಿಸ್ತಾನ ಎದುರು ಹರಿಣಗಳ ಪಡೆ ದಿಟ್ಟ ಹೋರಾಟ ನಡೆಸುತ್ತಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಾಯಕ ಶಾನ್ ಮಸೂದ್(87), ಸೌದ್ ಶಕೀಲ್(66) ಹಾಗೂ ಶಫೀಕ್(57) ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ 333 ರನ್ ಬಾರಿಸಿ ಸರ್ವಪತನ ಕಂಡಿತು. ಕೇಶವ್ ಮಹರಾಜ್ 7 ವಿಕೆಟ್ ಕಬಳಿಸಿ ಮಿಂಚಿದರು.

ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ತಂಡವು 43 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 109 ರನ್ ಬಾರಿಸಿದ್ದು ಇನ್ನೂ 224 ರನ್‌ಗಳ ಹಿನ್ನಡೆಯಲ್ಲಿದೆ. ಸದ್ಯ ಟ್ರಿಸ್ಟಿನ್ ಸ್ಟಬ್ಸ್(35) ಹಾಗೂ ಟೋನಿ ಡಿ ಜೋರ್ಜಿ(24) ಕ್ರೀಸ್‌ನಲ್ಲಿದ್ದಾರೆ.