Ashes 2023 ನಾವು ಮತ್ತಷ್ಟು ಆಕ್ರಮಣಕಾರಿ ಆಟ ಆಡ್ತೇವೆ; ಕಾಂಗರೂ ಪಡೆಗೆ ಮೆಕ್ಕಲಂ ಎಚ್ಚರಿಕೆ
ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋಲುಂಡ ಇಂಗ್ಲೆಂಡ್
ಬಾಜ್‌ಬಾಲ್ ಆಟದ ಕುರಿತಂತೆ ತುಟಿಬಿಚ್ಚಿದ ಬ್ರೆಂಡನ್ ಮೆಕ್ಕಲಂ
ಲಾರ್ಡ್ಸ್ ಟೆಸ್ಟ್‌ನಲ್ಲಿ ಆಕ್ರಮಣಕಾರಿ ಆಟದ ಸುಳಿವು ನೀಡಿದ ಇಂಗ್ಲೆಂಡ್ ಹೆಡ್ ಕೋಚ್
ಲಂಡನ್(ಜೂ.22): ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎದುರು ಆತಿಥೇಯ ಇಂಗ್ಲೆಂಡ್ ತಂಡವು ಎರಡು ವಿಕೆಟ್ ರೋಚಕ ಸೋಲು ಅನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್ ತಂಡದ ಸೋಲಿಗೆ ಬಾಜ್‌ಬಾಲ್ ರಣತಂತ್ರವೇ ಕಾರಣ ಎನ್ನುವಂತಹ ಚರ್ಚೆ ಜೋರಾಗಿದೆ. ಹೀಗಿರುವಾಗಲೇ ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್ ಟೆಸ್ಟ್ ತಂಡದ ಹೆಡ್‌ಕೋಚ್ ಬ್ರೆಂಡನ್ ಮೆಕ್ಕಲಂ, ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಮತ್ತಷ್ಟು ಆಕ್ರಮಣಕಾರಿ ಆಟವಾಡುವ ಎಚ್ಚರಿಕೆ ನೀಡಿದ್ದಾರೆ.
5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಎಸೆತದಿಂದಲೇ ಇಂಗ್ಲೆಂಡ್ ತಂಡವು ಆಕ್ರಮಣಕಾರಿ ಆಟದ ರಣತಂತ್ರಕ್ಕೆ ಮೊರೆಹೋಯಿತು. ಹೀಗಾಗಿ ಮೊದಲ ಟೆಸ್ಟ್ ಪಂದ್ಯದ ಮೊದಲ ಎಸೆತವನ್ನೇ ಇಂಗ್ಲೆಂಡ್ ಆರಂಭಿಕ ಬ್ಯಾಟರ್ ಜಾಕ್ ಕ್ರಾವ್ಲಿ ಬೌಂಡರಿ ಬಾರಿಸುವ ಮೂಲಕ ರನ್ ಖಾತೆ ತೆರೆದಿದ್ದರು. ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಓವರ್‌ಗೆ 4.61ರ ಸರಾಸರಿಯಲ್ಲಿ ರನ್ ಬಾರಿಸಿ ಗಮನ ಸೆಳೆಯಿತು. ಹೀಗಿದ್ದೂ ಆಸ್ಟ್ರೇಲಿಯಾ ತಂಡವು ಕೇವಲ 3.20 ಸರಾಸರಿಯಲ್ಲಿ ರನ್‌ಗಳಿಸಿ ರೋಚಕವಾಗಿ ಗೆಲುವಿನ ದಡ ಸೇರುವಲ್ಲಿ ಯಶಸ್ವಿಯಾಗಿತ್ತು.
"ನಾವು ನಮ್ಮದೇ ರೀತಿಯಲ್ಲಿ ಆಡುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದೆವು. ಇನ್ನು ಇದೇ ವೇಳೆ ಆಸ್ಟ್ರೇಲಿಯಾ ಕೂಡಾ ಅವರದ್ದೇ ರೀತಿಯಲ್ಲಿ ಆಡುವ ಮೂಲಕ ಗೆಲುವು ಸಾಧಿಸಿ ಖುಷಿ ಪಟ್ಟಿದೆ. ಅವರು ಮುಂದಿನ ಪಂದ್ಯದಲ್ಲೂ ಅದೇ ರೀತಿ ಆಡಲಿದ್ದಾರೆ ಎನ್ನುವ ವಿಶ್ವಾಸವಿದೆ. ಹೀಗಾಗಿ ನಮ್ಮ ತಂತ್ರಗಾರಿಕೆ ಹಾಗೂ ಅವರ ತಂತ್ರಗಾರಿಕೆ ನಡುವೆ ಸಾಕಷ್ಟು ವ್ಯತ್ಯಾಸವಿದ್ದು, ಮುಂಬರುವ ಪಂದ್ಯಗಳು ಸಾಕಷ್ಟು ರೋಚಕತೆಯಿಂದ ಕೂಡಿರುವ ಸಾಧ್ಯತೆಯಿದೆ ಎಂದು ESPNcricinfo ಜತೆಗಿನ ಮಾತುಕತೆ ವೇಳೆ ತಿಳಿಸಿದ್ದಾರೆ.
Ashes 2023 ನಿಧಾನ ಬೌಲಿಂಗ್: ಆಸೀಸ್, ಇಂಗ್ಲೆಂಡ್‌ನ 2 ಅಂಕ ಕಡಿತ
" ಆಸ್ಟ್ರೇಲಿಯನ್ನರು ಪಂದ್ಯವನ್ನು ಗೆದ್ದಿರುವುದರಿಂದಾಗಿ ಅವರ ಆಟದ ಬಗ್ಗೆ ನಾನು ಹೆಚ್ಚು ಚರ್ಚಿಸಲು ಹೋಗುವುದಿಲ್ಲ. ಅವರು ಇಡೀ ಸರಣಿಯುದ್ದಕ್ಕೂ ಮೊದಲ ಪಂದ್ಯದಲ್ಲಿ ಅನುಸರಿಸಿದ ತಂತ್ರಗಾರಿಕೆಯನ್ನೇ ಮುಂದುವರೆಸಲಿದ್ದಾರೆ ಎನ್ನುವ ವಿಶ್ವಾಸವಿದೆ. ಹೀಗಾಗಿ ನಾವು ಮತ್ತಷ್ಟು ಆಕ್ರಮಣಕಾರಿ ಆಟವನ್ನು ಆಡಲಿದ್ದೇವೆ ಎಂದು ಬ್ರೆಂಡನ್ ಮೆಕ್ಕಲಂ, ಕಾಂಗರೂ ಪಡೆಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಆ್ಯಷಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಜೂನ್ 28ರಿಂದ ಆರಂಭವಾಗಲಿದ್ದು, ಎರಡನೇ ಟೆಸ್ಟ್ ಪಂದ್ಯಕ್ಕೆ ಐತಿಹಾಸಿಕ ಲಾರ್ಡ್ಸ್ ಮೈದಾನ ಆತಿಥ್ಯ ವಹಿಸಲಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ತಂತ್ರಗಾರಿಕೆಯ ವಿಚಾರದಲ್ಲಿ ಹೆಚ್ಚು ಬದಲಾವಣೆ ಮಾಡಿಕೊಂಡು ಕಣಕ್ಕಿಳಿಯಲಿವೆ ಎಂದು ನನಗೇನು ಅನಿಸುತ್ತಿಲ್ಲ ಎಂದು ಬ್ರೆಂಡನ್ ಮೆಕ್ಕಲಂ ಅಭಿಪ್ರಾಯಪಟ್ಟಿದ್ದಾರೆ.
ಏನಿದು ಬಾಜ್‌ಬಾಲ್ ಶೈಲಿ?
‘ಬಾಜ್’ ಎಂದು ಕರೆಸಿಕೊಳ್ಳುವ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕ್ಕಲಂ ಪ್ರಧಾನ ಕೋಚ್ ಆಗಿ ನೇಮಕಗೊಂಡ ಬಳಿಕ ಇಂಗ್ಲೆಂಡ್ ಆಕ್ರಮಣಕಾರಿ ಆಟಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಪರಿಸ್ಥಿತಿ ಎಂತದ್ದೇ ಇರಲಿ, ತಂಡ ಆಕ್ರಮಣಕಾರಿ ಆಟವಾಡುವುದನ್ನು ನಿಲ್ಲಿಸುವುದಿಲ್ಲ. ಈ ಕಾರಣಕ್ಕಾಗಿಯೇ ಬಾಜ್‌ಬಾಲ್ ಆಟದ ಶೈಲಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಆದರೆ ಈ ಬಾಜ್‌ಬಾಲ್ ಶೈಲಿ ಆಸ್ಟ್ರೇಲಿಯಾ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಕೈಕೊಟ್ಟಿತು.
ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 78 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 393 ರನ್ ಬಾರಿಸಿ ಮೊದಲ ದಿನವೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆ ಸಂದರ್ಭದಲ್ಲಿ ಮಾಜಿ ನಾಯಕ ಜೋ ರೂಟ್ ಅಜೇಯ 118 ರನ್ ಬಾರಿಸಿದ್ದರು. ಈ ಸಂದರ್ಭದಲ್ಲಿ ಬೆನ್ ಸ್ಟೋಕ್ಸ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರು. ಒಂದು ವೇಳೆ ಇನ್ನಷ್ಟು ಓವರ್‌ವರೆಗೆ ಜೋ ರೂಟ್ ಆಡಿದ್ದರೇ, ಫಲಿತಾಂಶ ಬೇರೆಯದ್ದೇ ಆಗುವ ಸಾಧ್ಯತೆಯಿತ್ತು.