Asianet Suvarna News Asianet Suvarna News

4ನೇ ಆ್ಯಷಸ್‌ ಟೆಸ್ಟ್‌: ಮೊದಲ ದಿನವೇ ಬೃಹತ್ ಮೊತ್ತ ಕಲೆಹಾಕಿದ ಆಸೀಸ್‌..!

ಮ್ಯಾಚೆಸ್ಟರ್‌ನಲ್ಲಿ ಆರಂಭವಾಗಿರುವ ಆ್ಯಷಸ್‌ ಟೆಸ್ಟ್‌ ಸರಣಿಯ 4ನೇ ಪಂದ್ಯ
ಮೊದಲ ದಿನವೇ 8 ವಿಕೆಟ್ ಕಳೆದುಕೊಂಡು 299 ರನ್ ಬಾರಿಸಿದ ಆಸ್ಟ್ರೇಲಿಯಾ
600 ವಿಕೆಟ್‌ ಕ್ಲಬ್ ಸೇರಿದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್‌

Ashes 2023 Australia take first day honor as 299 runs  for 8 on first day kvn
Author
First Published Jul 20, 2023, 11:39 AM IST

ಮ್ಯಾಂಚೆಸ್ಟರ್‌: ಇಲ್ಲಿ ಆರಂಭಗೊಂಡ ಆ್ಯಷಸ್‌ ಸರಣಿಯ 4ನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ವಿರುದ್ಧ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಆಸ್ಟ್ರೇಲಿಯಾ ತಂಡವು ಮೊದಲ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಾ ತಂಡವು 8 ವಿಕೆಟ್ ಕಳೆದುಕೊಂಡು 299 ರನ್‌ ಕಲೆಹಾಕಿದೆ. ಮಿಚೆಲ್ ಸ್ಟಾರ್ಕ್‌(23) ಹಾಗೂ ನಾಯಕ ಪ್ಯಾಟ್ ಕಮಿನ್ಸ್‌(01) ಎರಡನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಉಸ್ಮಾನ್‌ ಖವಾಜ(03) ಬೇಗನೇ ಔಟಾದರೂ ಇತರರು ತಂಡದ ಕೈ ಹಿಡಿದರು. ಡೇವಿಡ್ ವಾರ್ನರ್‌ 32, ಮಾರ್ನಸ್‌ ಲಬುಶೇನ್‌ 51, ಸ್ಟೀವ್‌ ಸ್ಮಿತ್ 41, ಟ್ರ್ಯಾವಿಸ್‌ ಹೆಡ್‌ 48, ಮಿಚೆಲ್‌ ಮಾರ್ಷ್‌ 51 ರನ್‌ ಬಾರಿಸಿ ತಂಡಕ್ಕೆ ಆಸರೆಯಾದರು. ಕ್ರಿಸ್‌ ವೋಕ್ಸ್‌ 4, ಸ್ಟುವರ್ಟ್‌ ಬ್ರಾಡ್‌ 2 ವಿಕೆಟ್‌, ಮಾರ್ಕ್ ವುಡ್‌ ಹಾಗೂ ಮೋಯಿನ್ ಅಲಿ ತಲಾ ಒಂದೊಂದು ವಿಕೆಟ್ ತಮ್ಮದಾಗಿಸಿಕೊಂಡರು

ಟೆಸ್ಟ್‌ನಲ್ಲಿ 600 ವಿಕೆಟ್‌: ಬ್ರಾಡ್‌ 5ನೇ ಬೌಲರ್‌

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ನ ಪ್ರಮುಖ ವೇಗಿ ಸ್ಟುವರ್ಟ್‌ ಬ್ರಾಡ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 600 ವಿಕೆಟ್‌ ಸರದಾರರ ಎಲೈಟ್‌ ಕ್ಲಬ್‌ಗೆ ಸೇರ್ಪಡೆಗೊಂಡಿದ್ದಾರೆ. ಬುಧವಾರ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್‌ನಲ್ಲಿ ಟ್ರ್ಯಾವಿಸ್‌ ಹೆಡ್‌ ವಿಕೆಟ್‌ ಪಡೆಯುವ ಮೂಲಕ ಅವರು ಈ ಮೈಲಿಗಲ್ಲು ತಲುಪಿದರು. 37 ವರ್ಷದ ಬ್ರಾಡ್‌ ತಮ್ಮ 166ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಅಲ್ಲದೇ ಈ ಸಾಧನೆ ಮಾಡಿದ ಇಂಗ್ಲೆಂಡ್‌ನ 2ನೇ ಹಾಗೂ ಒಟ್ಟಾರೆ 5ನೇ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ 800 ವಿಕೆಟ್‌ ಕಬಳಿಸಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಶೇನ್‌ ವಾರ್ನ್‌(708), ಇಂಗ್ಲೆಂಡ್‌ನ ಆ್ಯಂಡರ್‌ಸನ್‌(688), ಭಾರತದ ಅನಿಲ್‌ ಕುಂಬ್ಳೆ(619) ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ. ಸ್ಟುವರ್ಟ್‌ ಬ್ರಾಡ್‌ ಶೀಘ್ರದಲ್ಲೇ ಕನ್ನಡಿಗ ಅನಿಲ್‌ ಕುಂಬ್ಳೆ ಅವರನ್ನು ಹಿಂದಿಕ್ಕುವ ಸಾಧ್ಯತೆ ಇದೆ.

ಅ-23 ಏಷ್ಯಾಕಪ್‌: ಪಾಕ್‌ ವಿರುದ್ಧ ಭಾರತಕ್ಕೆ ಗೆಲುವು

ಕೊಲಂಬೊ: ರಾಜ್‌ವರ್ಧನ್‌ ಹಂಗರ್‌ಗೇಕರ್‌ ಮಾರಕ ದಾಳಿ ಹಾಗೂ ಸಾಯಿ ಸುದರ್ಶನ್‌ ಅಬ್ಬರದ ಶತಕದ ನೆರವಿನಿಂದ ಅಂಡರ್‌-23 ಉದಯೋನ್ಮುಖ ಕ್ರಿಕೆಟಿಗರ ಏಷ್ಯಾಕಪ್‌ನಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ ‘ಎ’ ತಂಡ 8 ವಿಕೆಟ್‌ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ ‘ಎ’ ಗುಂಪಿನಿಂದ ಅಜೇಯವಾಗಿಯೇ ಸೆಮಿಫೈನಲ್‌ಗೇರಿದ್ದು, ಶುಕ್ರವಾರ ಸೆಮೀಸ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ. 

ಜೀವನೋಪಾಯಕ್ಕಾಗಿ ಯಶಸ್ವಿ ಜೈಸ್ವಾಲ್ ಎಂದೂ ಪಾನಿಪೂರಿ ಮಾರಿಲ್ಲ..! ಶಾಕಿಂಗ್ ವಿಚಾರ ಬಾಯ್ಬಿಟ್ಟ ಕೋಚ್..!

ಮೊದಲು ಬ್ಯಾಟ್‌ ಮಾಡಿದ ಪಾಕ್‌ 48 ಓವರ್‌ಗಳಲ್ಲಿ 205 ರನ್‌ಗೆ ಆಲೌಟಾಯಿತು. ಖಾಸಿಂ ಅಕ್ರಂ(48) ಹೊರತುಪಡಿಸಿ ಉಳಿದವರಿಂದ ದೊಡ್ಡ ಕೊಡುಗೆ ತಂಡಕ್ಕೆ ಸಿಗಲಿಲ್ಲ. ರಾಜ್‌ವರ್ಧನ್‌ 42ಕ್ಕೆ 5 ವಿಕೆಟ್‌ ಕಿತ್ತರು. ಸುಲಭ ಗುರಿಯನ್ನು ಭಾರತ 36.4 ಓವರ್‌ಗಳಲ್ಲಿ ಬೆನ್ನತ್ತಿತು. ಸುದರ್ಶನ್‌ ಔಟಾಗದೆ 104 ರನ್‌ ಸಿಡಿಸಿದರೆ, ನಿಕಿನ್‌ ಜೋಸ್‌ 53 ರನ್‌ ಗಳಿಸಿದರು.

ಭಾರತ-ಬಾಂಗ್ಲಾ ಸೆಮೀಸ್‌ ನಾಳೆ

ಶುಕ್ರವಾರ ಭಾರತ ‘ಎ’ ಹಾಗೂ ಬಾಂಗ್ಲಾದೇಶ ‘ಎ’ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಮತ್ತೊಂದು ಸೆಮೀಸ್‌ನಲ್ಲಿ ಪಾಕಿಸ್ತಾನ ‘ಎ’ ಹಾಗೂ ಶ್ರೀಲಂಕಾ ‘ಎ’ ಸೆಣಸಲಿವೆ.

ಮೈಕ್ ಹೆಸನ್& ಸಂಜಯ್ ಬಂಗಾರ್‌ಗೆ ಗೇಟ್‌ಪಾಸ್? ಯಾರಾಗ್ತಾರೆ RCB ತಂಡದ ಕೋಚ್ & ಮೆಂಟರ್..?

ವನಿತಾ ಏಕದಿನ: ಬಾಂಗ್ಲಾ ವಿರುದ್ಧ ಭಾರತಕ್ಕೆ ಜಯ

ಮೀರ್‌ಪುರ: ಬ್ಯಾಟಿಂಗ್‌ನಲ್ಲಿ ಸುಧಾರಿತ ಪ್ರದರ್ಶನ ನೀಡದ ಹೊರತಾಗಿಯೂ ಬಾಂಗ್ಲಾದೇಶ ಮಹಿಳೆಯರ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಭಾರತ 108 ರನ್‌ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ 8 ವಿಕೆಟ್‌ಗೆ 228 ರನ್‌ ಗಳಿಸಿತು. ಜೆಮಿಮಾ ರೋಡ್ರಿಗ್ಸ್ (86), ಹರ್ಮನ್‌ಪ್ರೀತ್‌(52) ಜವಾಬ್ದಾರಿಯುವ ಆಟವಾಡಿ ಭಾರತ ಸ್ಪರ್ಧಾತ್ಮಕ ಗುರಿ ತಲುಪಲು ನೆರವಾದರು. ಬಾಂಗ್ಲಾ 35.1 ಓವರ್‌ಗಳಲ್ಲಿ 120ಕ್ಕೆ ಸರ್ವಪತನ ಕಂಡಿತು. ಜೆಮಿಮಾ 3 ರನ್‌ಗೆ 4 ವಿಕೆಟ್‌ ಕಿತ್ತು ಗೆಲುವಿನ ರೂವಾರಿಯಾದರು. ಶನಿವಾರ 3ನೇ ಪಂದ್ಯ ನಡೆಯಲಿದೆ.

Follow Us:
Download App:
  • android
  • ios