Ashes 2023: ಲಾರ್ಡ್ಸ್ ಟೆಸ್ಟ್ ಗೆಲುವಿನ ಬೆನ್ನಲ್ಲೇ ಆಸೀಸ್‌ಗೆ ಶಾಕ್; ಸ್ಟಾರ್ ಕ್ರಿಕೆಟಿಗ ಟೂರ್ನಿಯಿಂದಲೇ ಔಟ್..!
* ಆ್ಯಷಸ್ ಟೆಸ್ಟ್ ಸರಣಿಯಿಂದ ಹೊರಬಿದ್ದ ಸ್ಟಾರ್ ಸ್ಪಿನ್ನರ್ ನೇಥನ್ ಲಯನ್
* ಮೀನಖಂಡ ಸ್ನಾಯು ಸೆಳೆತಕ್ಕೆ ಒಳಗಾಗಿರುವ ಸ್ಪಿನ್ನರ್ ಲಯನ್
* ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 2-0 ಮುನ್ನಡೆಯಲ್ಲಿದೆ
ಲಂಡನ್(ಜು.03): ಆ್ಯಷಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ಆಸ್ಟ್ರೇಲಿಯಾ ತಂಡವು 43 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು 2-0 ಅಂತರದ ಮುನ್ನಡೆ ಸಾಧಿಸಿದೆ. ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಅನುಭವಿ ಆಫ್‌ಸ್ಪಿನ್ನರ್ ನೇಥನ್ ಲಯನ್ ಸದ್ಯ ಮೀನಖಂಡ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಇನ್ನುಳಿದ ಮೂರು ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಇನ್ನು ನೇಥನ್ ಲಯನ್ ಬದಲಿಗೆ ಇನ್ನು ಬದಲಿ ಆಟಗಾರನನ್ನು ಆಸ್ಟ್ರೇಲಿಯಾ ಹೆಸರಿಸಿಲ್ಲ.
ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ಮಾಡುವ ಸಂದರ್ಭದಲ್ಲಿ ನೇಥನ್ ಲಯನ್ ಮೀನಖಂಡ ನೋವಿಗೆ ಒಳಗಾಗಿದ್ದರು. ನೇಥನ್ ಲಯನ್, ಲಾರ್ಡ್ಸ್ ಟೆಸ್ಟ್ ಗೆಲುವಿನ ಅನ್‌ಸಂಗ್ ಹೀರೋ ಎನಿಸಿಕೊಂಡಿದ್ದರು. ಕ್ಷೇತ್ರರಕ್ಷಣೆ ವೇಳೆ ನೋವಿನಿಂದಾಗಿ ಮೈದಾನ ತೊರೆದಿದ್ದ ಲಯನ್, ಎರಡನೇ ಇನಿಂಗ್ಸ್‌ನಲ್ಲಿ ಕುಂಟುತ್ತಲೇ ಮೈದಾನಕ್ಕಿಳಿದ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ಅಮೂಲ್ಯ ರನ್ ಕಾಣಿಕೆ ನೀಡಿದ್ದರು. ಲಯನ್ ಬ್ಯಾಟಿಂಗ್ ಮಾಡಲಿಳಿದಾಗ ಇಡೀ ಆಸ್ಟ್ರೇಲಿಯಾ ತಂಡ ಹಾಗೂ ಲಾರ್ಡ್ಸ್‌ನಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ಲಯನ್ ಅವರನ್ನು ಹುರಿದುಂಬಿಸಿದ್ದರು.
ಇನ್ನು 5ನೇ ದಿನದಾಟದಲ್ಲಿ ನೇಥನ್ ಲಯನ್ ಅವರ ಬದಲಿಗೆ ಕ್ಷೇತ್ರರಕ್ಷಣೆ ಮಾಡಿದ್ದ ಮ್ಯಾಟ್ ರೆನ್‌ಶೋ ಅವರನ್ನು ತಂಡದಿಂದ ಕೈಬಿಡಲಾಗಿದೆ. ಆದರೆ ರೆನ್‌ಶೋ ಮೀಸಲು ಆಟಗಾರನಾಗಿರಲಿದ್ದು, ಆಸ್ಟ್ರೇಲಿಯಾ ಅಟಗಾರರ ಸಂಖ್ಯೆ 16ಕ್ಕೆ ಇಳಿಕೆಯಾಗಿದೆ.
Ashes 2023: ಬೆನ್ ಸ್ಟೋಕ್ಸ್ ಸಾಹಸಕ್ಕೆ ಒಲಿಯದ ಜಯ
ನೇಥನ್ ಲಯನ್, 2011ರಲ್ಲಿ ಪಾದಾರ್ಪಣೆ ಮಾಡಿದಾಗಿನಿಂದ ಗಾಯದ ಸಮಸ್ಯೆಯಿಂದಾಗಿ ಒಂದೇ ಒಂದು ಟೆಸ್ಟ್ ಪಂದ್ಯದಿಂದ ವಂಚಿತರಾಗಿರಲಿಲ್ಲ. ಆದರೆ 2013ರಲ್ಲಿ ನಡೆದ ಆ್ಯಷಸ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳ ಬಳಿಕ ನೇಥನ್ ಲಯನ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಇದೀಗ ನೇಥನ್ ಲಯನ್ ಅವರ ಅಲಭ್ಯತೆ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ. ನೇಥನ್ ಲಯನ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ಹಾಗೂ ಅನುಭವಿ ಬೌಲರ್ ಎನಿಸಿಕೊಂಡಿದ್ದಾರೆ. ಸ್ಪಿನ್ ದಂತಕಥೆ ಶೇನ್ ವಾರ್ನ್ ಬಳಿಕ ನೇಥನ್ ಲಯನ್(495) ಎರಡನೇ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡಿದ್ದಾರೆ.
ಇಂಗ್ಲೆಂಡ್ ಎದುರಿನ ಮೂರನೇ ಟೆಸ್ಟ್‌ಗೆ ಆಸ್ಟ್ರೇಲಿಯಾ ತಂಡ ಹೀಗಿದೆ:
ಪ್ಯಾಟ್ ಕಮಿನ್ಸ್(ನಾಯಕ), ಸ್ಕಾಟ್ ಬೋಲೆಂಡ್, ಅಲೆಕ್ಸ್ ಕೇರಿ(ವಿಕೆಟ್ ಕೀಪರ್), ಕ್ಯಾಮರೋನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಶ್(ವಿಕೆಟ್ ಕೀಪರ್), ಉಸ್ಮಾನ್ ಖವಾಜ, ಮಾರ್ನಸ್ ಲಬುಶೇನ್, ಮಿಚೆಲ್ ಮಾರ್ಶ್, ಟೋಡ್ ಮರ್ಫಿ, ಮಿಚೆಲ್ ನೀಸರ್, ಜಿಮ್ಮಿ ಪೀರ್ಸನ್(ವಿಕೆಟ್ ಕೀಪರ್), ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್.