* ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭ* ಟೆಸ್ಟ್‌ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡಗಳು ಮುಖಾಮುಖಿ* ಟೆಸ್ಟ್ ವಿಶ್ವಕಪ್‌ ಫೈನಲ್‌ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ನೀಡುವ ಸಾಧ್ಯತೆ

ಸೌಥಾಂಪ್ಟನ್(ಮೇ.21)‌: ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್‌ ತಂಡಗಳ ನಡುವೆ ಇದೇ ಜೂನ್ 18ರಿಂದ ಇಲ್ಲಿನ ಏಜೀಸ್‌ ಬೌಲ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೆ 4,000 ಮಂದಿಗೆ ಕ್ರೀಡಾಂಗಣಕ್ಕೆ ಪ್ರವೇಶ ನೀಡಲಿದ್ದೇವೆ ಎಂದು ಹ್ಯಾಂಪ್ಶೈರ್‌ ಕೌಂಟಿ ಕ್ಲಬ್‌ ಮುಖ್ಯಸ್ಥ ರಾಡ್‌ ಬ್ರ್ಯಾನ್ಸ್‌ಗ್ರೋವ್‌ ತಿಳಿಸಿದ್ದಾರೆ. 

ಇಂಗ್ಲೆಂಡ್‌ನಲ್ಲಿ ಕೊರೋನಾ ಸ್ಥಿತಿ ನಿಯಂತ್ರಣದಲ್ಲಿದ್ದು, ಇತ್ತೀಚೆಗಷ್ಟೇ ಇದೇ ಮೈದಾನದಲ್ಲಿ ನಡೆದ ಕೌಂಟಿ ಪಂದ್ಯವೊಂದನ್ನು ವೀಕ್ಷಿಸಲು 1,500 ಮಂದಿಗೆ ಅವಕಾಶ ನೀಡಲಾಗಿತ್ತು. 2019ರ ಸೆಪ್ಟೆಂಬರ್‌ ಬಳಿಕ ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಕ್ರಿಕೆಟ್‌ ಪಂದ್ಯ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ಸಿಕ್ಕಿದೆ.

ಸದ್ಯ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮುಂಬೈನಲ್ಲಿ ಬಯೋ ಬಬಲ್‌ನೊಳಗೆ ಎರಡು ವಾರಗಳ ಕ್ವಾರಂಟೈನ್‌ನಲ್ಲಿ ಇರಲಿದ್ದು, ಜೂನ್‌ 02ರಂದು ಇಂಗ್ಲೆಂಡ್‌ಗೆ ವಿಮಾನ ಏರಲಿದೆ. ಇಂಗ್ಲೆಂಡ್‌ಗೆ ಟೀಂ ಇಂಡಿಯಾ ಬಂದಿಳಿಯುತ್ತಿದ್ದಂತೆಯೇ ಸೌಥಾಂಪ್ಟನ್‌ನಲ್ಲಿ 10 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಲಿದೆ.

ಟೆಸ್ಟ್‌ ವಿಶ್ವಕಪ್‌ ಫೈನಲ್‌ ಡ್ರಾ ಆದರೆ ಕಪ್‌ ಯಾರ ಪಾಲಾಗುತ್ತೆ?

ಟೆಸ್ಟ್‌ ವಿಶ್ವಕಪ್‌ ಎಂದೇ ಬಿಂಬಿತವಾಗಿರುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಎರಡು ಬಲಾಢ್ಯ ತಂಡಗಳ ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ, ಕೇನ್ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲೆಂಡ್ ತಂಡ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಟೆಸ್ಟ್ ವಿಶ್ವಕಪ್ ಟ್ರೋಫಿಯನ್ನು ಯಾವ ತಂಡ ಜಯಿಸಲಿದೆ ಎನ್ನುವ ಕುತೂಹಲ ಜೋರಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona