ಮುಂಬೈ(ಜ.03): ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ರ ಪುತ್ರ ಅರ್ಜುನ್‌ ತೆಂಡುಲ್ಕರ್‌ ಇದೇ ಮೊದಲ ಬಾರಿಗೆ ಮುಂಬೈ ಹಿರಿಯರ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಜನವರಿ 10ರಿಂದ ಆರಂಭಗೊಳ್ಳಲಿರುವ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಗೆ ಮುಂಬೈ ತಂಡದಲ್ಲಿ ಎಡಗೈ ವೇಗಿಯಾಗಿರುವ ಅರ್ಜುನ್‌ಗೆ ಸ್ಥಾನ ನೀಡಲಾಗಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಸಲೀಲ್‌ ಅಂಕೋಲಾ ತಿಳಿಸಿದ್ದಾರೆ. ಸಲೀಲ್‌ ಇತ್ತೀಚೆಗಷ್ಟೇ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. 

21 ವರ್ಷದ ಅರ್ಜುನ್‌, ಭಾರತ ಅಂಡರ್‌-19 ತಂಡದ ಪರ ಆಡಿದ್ದರು. ಹಲವು ಬಾರಿ ಭಾರತ ತಂಡದ ಜೊತೆ ನೆಟ್ಸ್‌ ಅಭ್ಯಾಸದಲ್ಲೂ ಕಾಣಿಸಿಕೊಂಡಿದ್ದರು. ಮುಂಬೈ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಆಧಿತ್ಯ ತಾರೆಗೆ ಉಪನಾಯಕ ಪಟ್ಟ ಕಟ್ಟಲಾಗಿದೆ.

IPL 2020 ಸದ್ದಿಲ್ಲದೇ ಮುಂಬೈ ಇಂಡಿಯನ್ಸ್ ಕೂಡಿಕೊಂಡ್ರಾ ಅರ್ಜುನ್ ತೆಂಡುಲ್ಕರ್..!

ಮುಂಬೈ ತಂಡವು ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ 'ಇ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಡೆಲ್ಲಿ, ಹರ್ಯಾಣ, ಕೇರಳ, ಆಂಧ್ರ ಹಾಗೂ ಪುದುಚೆರಿ ತಂಡಗಳು ಸ್ಥಾನ ಪಡೆದಿವೆ. ಮುಂಬೈ ತಂಡವು ಜನವರಿ 11, 13, 15, 17 ಹಾಗೂ 19ರಂದು ಲೀಗ್‌ ಹಂತದ ಪಂದ್ಯಗಳನ್ನು ತವರಿನಲ್ಲೇ ಆಡಲಿದೆ. ಇನ್ನು ನಾಕೌಟ್ ಪಂದ್ಯಗಳಿಗೆ ಅಹಮದಾಬಾದ್‌ ಆತಿಥ್ಯ ವಹಿಸಿದೆ.