ನವದೆಹಲಿ(ಮೇ.19): ಈಗಾಗಲೇ ಹಲವು ಕ್ರೀಡಾಪಟುಗಳ ಬಯೋಪಿಕ್ ತೆರೆಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿವೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಬಯೋಪಿಕ್ ಬರಬಹುದು ಎಂದು ಅವರ ಅಭಿಮಾನಿಗಳು ಆಸೆಗಣ್ಣಿನಿಂದ ನೋಡುತ್ತಿದ್ದಾರೆ. 

ಈ ಬಗ್ಗೆ ಟೀಂ ಇಂಡಿಯಾ ರನ್‌ ಮಷೀನ್ ವಿರಾಟ್ ಕೊಹ್ಲಿ ತುಟಿ ಬಿಚ್ಚಿದ್ದಾರೆ, ಮಾತ್ರವಲ್ಲ ಒಂದು ಕಂಡೀಷನ್ ಸಹಾ ಹಾಕಿದ್ದಾರೆ. ಹೌದು, ‘ನನ್ನ ಜೀವನಾಧಾರಿತ ಸಿನಿಮಾದಲ್ಲಿ ನಾನೇ ನಟಿಸಲು ಸಿದ್ಧವಿದ್ದೇನೆ. ಆದರೆ ಈ ಬಯೋಪಿಕ್‌ನಲ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ನಟಿಸಬೇಕು ಎಂದು ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ. 

ಭಾರತ ಫುಟ್ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಜೊತೆ ಇನ್‌ಸ್ಟಾಗ್ರಾಮ್‌ ಲೈವ್‌ ಚಾಟ್‌ನಲ್ಲಿ ಮಾತನಾಡಿದ ವೇಳೆ ಕೊಹ್ಲಿ ಹೀಗೆ ಹೇಳಿದ್ದಾರೆ. ತಮ್ಮ ವ್ಯಕ್ತಿತ್ವವನ್ನು ರೂಪಿಸಲು ಅನುಷ್ಕಾ ಬಹಳ ನೆರವಾಗಿದ್ದಾರೆ. ನನ್ನ ಆತ್ಮವಿಶ್ವಾಸವನ್ನು ವೃದ್ಧಿಸಿದ್ದಾರೆ. ಸಮಾಜದಲ್ಲಿ ನಾನು ಉತ್ತಮ ವ್ಯಕ್ತಿಯಾಗಲು ಅನುಷ್ಕಾ ಕಾರಣ ಎಂದು ಕೊಹ್ಲಿ ಪತ್ನಿಯನ್ನು ಹೊಗಳಿದ್ದಾರೆ.

ಲಾಕ್‌ಡೌನ್ ವೇಳೆ ನೆಟ್ ಪ್ರಾಕ್ಟೀಸ್; ವಿರಾಟ್‌ಗೆ ಬೌನ್ಸರ್ ಎಸೆದ ಅನುಷ್ಕಾ!

ವಿರುಷ್ಕಾ ಜೋಡಿ ಈಗಾಗಲೇ ಕೆಲವು ಜಾಹೀರಾತುಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ಫೀಲ್ಡ್‌ನಲ್ಲಿ ಮಾತ್ರವಲ್ಲ ತೆರೆಯ ಮೇಲೂ ಮಿಂಚಬಲ್ಲೇ ಎನ್ನುವ ಸಂದೇಶ ರವಾನಿಸಿದ್ದಾರೆ.

ಅನುಷ್ಕಾ ಜೊತೆ ಕ್ರಿಕೆಟ್‌ ಆಡಿದ ಕೊಹ್ಲಿ

ಕ್ರಿಕೆಟ್‌ಗೆ ಹಿಂತಿರುಗಲು ಈಗಾಗಲೇ ಅಭ್ಯಾಸ ಶುರು ಮಾಡಿರುವ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಶನಿವಾರವಷ್ಟೇ ತಮ್ಮ ಮನೆಯ ಅಂಗಳದಲ್ಲಿ ದೈಹಿಕ ಕಸರತ್ತು ನಡೆಸಿದರು. 

ಈ ವೇಳೆ ಪತ್ನಿ ಅನುಷ್ಕಾ ಶರ್ಮಾ ಜೊತೆ ಕೊಹ್ಲಿ ಕ್ರಿಕೆಟ್‌ ಆಟವಾಡಿದರು. ಮೊದಲು ಅನುಷ್ಕಾ ಬ್ಯಾಟ್‌ ಮಾಡಿದರೆ, ನಂತರ ಅನುಷ್ಕಾ ಬೌಲಿಂಗ್‌ಗೆ ಕೊಹ್ಲಿ ಬ್ಯಾಟ್‌ ಮಾಡಿದರು. ಈ ನಡುವೆ, ಭಾರತ ಕ್ರಿಕೆಟ್‌ ತಂಡದ ಮತ್ತೊಬ್ಬ ಯುವ ಬೌಲರ್‌ ನವದೀಪ್‌ ಸೈನಿ ತಮ್ಮ ಮನೆಯಲ್ಲಿ ಟೆನಿಸ್‌ ಬಾಲ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.