Asianet Suvarna News Asianet Suvarna News

ಶಕೀಬ್ ಲಂಕಾಕ್ಕೆ ಬಂದ್ರೆ ಕಲ್ಲೇಟು: ಬಾಂಗ್ಲಾ ನಾಯಕನಿಗೆ ಮ್ಯಾಥ್ಯೂಸ್ ಬ್ರದರ್ ಖಡಕ್ ವಾರ್ನಿಂಗ್

‘ಶಕೀಬ್‌ ಮಾನವೀಯತೆ ಮತ್ತು ಕ್ರೀಡಾಸ್ಫೂರ್ತಿ ಮರೆತು ವರ್ತಿಸಿದರು. ಅವರು ಅಂತಾರಾಷ್ಟ್ರೀಯ ಅಥವಾ ಲಂಕಾ ಪ್ರೀಮಿಯರ್‌ ಪಂದ್ಯವಾಡಲು ನಮ್ಮ ದೇಶಕ್ಕೆ ಬಂದರೆ ಅಭಿಮಾನಿಗಳು ಕಲ್ಲೆಸೆಯುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Angelo Mathews Brother Warns Shakib Al Hasan Stones Will Be Thrown At Him kvn
Author
First Published Nov 9, 2023, 4:44 PM IST

ಕೊಲಂಬೊ(ನ.09): ಶ್ರೀಲಂಕಾದ ಏಂಜೆಲೋ ಮ್ಯಾಥ್ಯೂಸ್‌ರನ್ನು ಟೈಮ್ಡ್‌ ಔಟ್‌ ಮೂಲಕ ಪೆವಿಲಿಯನ್‌ಗೆ ಕಳುಹಿಸಿದ್ದ ಬಾಂಗ್ಲಾದೇಶದ ನಾಯಕ ಶಕೀಲ್‌ ಅಲ್‌-ಹಸನ್‌ ವಿರುದ್ಧ ಮ್ಯಾಥ್ಯೂಸ್‌ ಸಹೋದರ ಟ್ರೆವಿನ್‌ ಮ್ಯಾಥ್ಯೂಸ್‌ ಕಿಡಿಕಾರಿದ್ದು, ಶಕೀಬ್‌ ಲಂಕಾಗೆ ಬಂದರೆ ಕಲ್ಲೇಟು ಬೀಳುತ್ತೆ ಎಂದು ಎಚ್ಚರಿಸಿದ್ದಾರೆ. 

‘ಶಕೀಬ್‌ ಮಾನವೀಯತೆ ಮತ್ತು ಕ್ರೀಡಾಸ್ಫೂರ್ತಿ ಮರೆತು ವರ್ತಿಸಿದರು. ಅವರು ಅಂತಾರಾಷ್ಟ್ರೀಯ ಅಥವಾ ಲಂಕಾ ಪ್ರೀಮಿಯರ್‌ ಪಂದ್ಯವಾಡಲು ನಮ್ಮ ದೇಶಕ್ಕೆ ಬಂದರೆ ಅಭಿಮಾನಿಗಳು ಕಲ್ಲೆಸೆಯುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾರಾಗ್ತಾರೆ ಟೀಂ ಇಂಡಿಯಾಗೆ ಸೆಮೀಸ್ ಎದುರಾಳಿ? ಇಂಡೋ-ಪಾಕ್ ಸೆಮೀಸ್ ಸಾಧ್ಯತೆ ಎಷ್ಟು?

‘ಟೈಮ್ಡ್‌ ಔಟ್‌‘ಗೆ ವಿಡಿಯೋ ಸಾಕ್ಷ್ಯ ನೀಡಿದ ಮ್ಯಾಥ್ಯೂಸ್‌

ನವದೆಹಲಿ: ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ವಿವಾದಾತ್ಮಕ ಟೈಮ್ಡ್‌ ಔಟ್‌ಗೆ ಬಲಿಯಾಗಿದ್ದ ಶ್ರೀಲಂಕಾದ ಹಿರಿಯ ಆಲ್ರೌಂಡರ್‌ ಏಂಜೆಲೋ ಮ್ಯಾಥ್ಯೂಸ್‌, ವಿಡಿಯೊ ಸಾಕ್ಷ್ಯದ ಮೂಲಕ ಮತ್ತೆ ಔಟ್‌ ತೀರ್ಪು ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 5 ಸೆಕೆಂಡ್‌ ಬಾಕಿ ಇದ್ದಾಗಲೇ ಮೊದಲ ಎಸೆತ ಎದುರಿಸಲು ಸಿದ್ಧನಿದ್ದೆ ಎಂದು ಸಾಕ್ಷ್ಯವಿರುವ ವಿಡಿಯೋವನ್ನು ಎಕ್ಸ್‌(ಟ್ವಿಟರ್‌)ನಲ್ಲಿ ಹಂಚಿಕೊಂಡಿದ್ದಾರೆ. 

ಪಂದ್ಯದಲ್ಲಿ ಕ್ರೀಸ್‌ಗಿಳಿದು 2 ನಿಮಿಷಗಳೊಳಗೆ ಬ್ಯಾಟಿಂಗ್‌ ಆರಂಭಿಸದ್ದಕ್ಕೆ ಮ್ಯಾಥ್ಯೂಸ್‌ ಔಟಾಗಿದ್ದರು. ಬಳಿಕ ಮೀಸಲು ಅಂಪೈರ್‌ ಏಡ್ರಿಯಾನ್‌ ಹೋಲ್ಡ್‌ಸ್ಟಾಕ್‌ ಕೂಡಾ ಮ್ಯಾಥ್ಯೂಸ್‌ ಸಮಯ ಮೀರಿದ್ದಾಗಿ ತಿಳಿಸಿದ್ದರು.

ನಿಯಮ ಏನು?

ಐಸಿಸಿ ನಿಯಮಗಳ ಪ್ರಕಾರ ಹೊಸದಾಗಿ ಕ್ರೀಸ್‌ಗಿಳಿಯುವ ಬ್ಯಾಟರ್‌ 2 ನಿಮಿಷಗಳೊಳಗೆ ಮೊದಲ ಎಸೆತವನ್ನು ಎದುರಿಸಬೇಕು. ಒಂದು ವೇಳೆ 3 ನಿಮಿಷ ಮೀರಿದರೆ ಫೀಲ್ಡಿಂಗ್‌ ಮಾಡುತ್ತಿರುವ ತಂಡದ ನಾಯಕ ಟೈಮ್ಡ್‌ ಔಟ್‌ಗೆ ಮನವಿ ಸಲ್ಲಿಸಬಹುದು.

ಅಷ್ಟಕ್ಕೂ ಆಗಿದ್ದೇನು?: ಸಮರವಿಕ್ರಮ ಔಟಾಗಿ ಹೊರನಡೆದ ಬಳಿಕ ಕ್ರೀಸ್‌ಗಿಳಿದ ಮ್ಯಾಥ್ಯೂಸ್‌ ಮೊದಲ ಎಸೆತವನ್ನು ಎದುರಿಸುವ ಮುನ್ನ ಹೆಲ್ಮೆಟ್‌ನ ಪಟ್ಟಿಯನ್ನು ಸರಿಮಾಡಿಕೊಳ್ಳಲು ಹೋದಾಗ ಅದು ಹರಿದು ಕೈಗೆ ಬಂತು. ಆಗ ಬೇರೆ ಹೆಲ್ಮೆಟ್‌ ತರುವಂತೆ ಡಗೌಟ್‌ನಲ್ಲಿದ್ದ ಸಹ ಆಟಗಾರರಿಗೆ ಮ್ಯಾಥ್ಯೂಸ್‌ ಸೂಚಿಸಿದರು. ಬೇರೆ ಹೆಲ್ಮೆಟ್‌ ತರಲು ಸಾಕಷ್ಟು ಸಮಯ ಹಿಡಿದಾಗ, ಬಾಂಗ್ಲಾ ನಾಯಕ ಶಕೀಬ್‌ ಅಲ್‌-ಹಸನ್‌ ಟೈಮ್ಡ್‌ ಔಟ್‌ಗೆ ಅಂಪೈರ್‌ ಬಳಿ ಮನವಿ ಸಲ್ಲಿಸಿದರು. ಆಗ ಅಂಪೈರ್‌ ಔಟ್‌ ಎಂದು ತೀರ್ಪು ನೀಡಿ ಮ್ಯಾಥ್ಯೂಸ್‌ಗೆ ಮೈದಾನ ತೊರೆಯುವಂತೆ ಸೂಚಿಸಿದರು.

ಮ್ಯಾಥ್ಯೂಸ್‌ ಮಾಡಿದ ತಪ್ಪುಗಳೇನು?

1. ಕ್ರೀಸ್‌ಗಿಳಿಯುವ ಮುನ್ನ ಹೆಲ್ಮೆಟ್‌ ಸರಿಯಿದೆಯೇ ಎನ್ನುವುದನ್ನು ಖಾತರಿಪಡಿಸಿಕೊಳ್ಳದೆ ಇದ್ದಿದ್ದು.

2. ಬೇರೆ ಹೆಲ್ಮೆಟ್‌ ತರಿಸಿಕೊಳ್ಳುವ ಮುನ್ನ ಅಂಪೈರ್‌, ಎದುರಾಳಿ ನಾಯಕನಿಗೆ ವಿಷಯ ತಿಳಿಸಿ ಸಮಯ ಕೋರಿದ್ದರೆ ವಿವಾದಾತ್ಮಕ ತೀರ್ಪಿಗೆ ಬಲಿಯಾಗುವುದನ್ನು ತಪ್ಪಿಸಬಹುದಿತ್ತು.

3. ಮ್ಯಾಥ್ಯೂಸ್‌ ಕ್ರೀಸ್‌ಗಿಳಿದಾಗ ಬೌಲ್‌ ಮಾಡುತ್ತಿದ್ದಿದ್ದು ಶಕೀಬ್‌. ಸ್ಪಿನ್ನರನ್ನು ಎದುರಿಸಲು ಹೆಲ್ಮೆಟ್‌ ಬೇಕೇ ಬೇಕು ಎಂದೇನಿಲ್ಲ. ಶಕೀಬ್‌ರ ಓವರ್‌ ಮುಗಿದ ಮೇಲೆ ಬೇರೆ ಹೆಲ್ಮೆಟ್‌ ತರಿಸಿಕೊಳ್ಳಬಹುದಿತ್ತು.

ವಜಾಗೊಂಡಿದ್ದ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಅಸ್ತಿತ್ವಕ್ಕೆ!

ಕೊಲಂಬೊ: ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಹೀನಾಯ ಸೋಲಿನ ಬಳಿಕ ಸೋಮವಾರವಷ್ಟೇ ವಜಾಗೊಂಡಿದ್ದ ಶ್ರೀಲಂಕಾ ಕ್ರಿಕೆಟ್‌ ಮಂಡಳಿ(ಎಸ್‌ಎಲ್‌ಸಿ)ಯನ್ನು ಅಲ್ಲಿನ ನ್ಯಾಯಾಲಯ ಮತ್ತೆ ಮರುಸ್ಥಾಪಿಸಿ ಆದೇಶಿಸಿದೆ. ಲಂಕಾದ ಕ್ರೀಡಾ ಸಚಿವ ರೋಶನ್‌ ರಣಸಿಂಘೆ ಅವರು ಮಂಡಳಿಯಲ್ಲಿದ್ದ ಎಲ್ಲಾ ಅಧಿಕಾರಿಗಳನ್ನು ಹುದ್ದೆಯಿಂದ ಕೆಳಗಿಳಿಸಿ, ಮಾಜಿ ನಾಯಕ ಅರ್ಜುನ ರಣತುಂಗ ನೇತೃತ್ವದಲ್ಲಿ 7 ಸದಸ್ಯರ ತಾತ್ಕಾಲಿಕ ಕ್ರಿಕೆಟ್‌ ಸಮಿತಿ ರಚಿಸಿದ್ದರು. ಇದನ್ನು ಪ್ರಶ್ನಿಸಿ ಎಸ್‌ಎಲ್‌ಸಿ ಮುಖ್ಯಸ್ಥ ಶಮ್ಮಿ ಸಿಲ್ವಾ ಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ಮುಂದಿನ ಆದೇಶದ ವರೆಗೆ ಅಂದರೆ 14 ದಿನಗಳ ಕಾಲ ಮಂಡಳಿಯನ್ನು ಮರುಸ್ಥಾಪಿಸಿದೆ.
 

Follow Us:
Download App:
  • android
  • ios