ಐಪಿಎಲ್‌ನಲ್ಲಿ ಬ್ಯುಸಿಯಾಗಿರುವ ಸಿಎಸ್‌ಕೆ ಕ್ರಿಕೆಟಿಗ ಅಂಬಟಿ ರಾಯುಡುರಾಜಕೀಯಕ್ಕೆ ಎಂಟ್ರಿಯಾಗುವ ಸುಳಿವು ಕೊಟ್ಟ ಅನುಭವಿ ಕ್ರಿಕೆಟಿಗಐಪಿಎಲ್‌ನಲ್ಲಿ ಚೆನ್ನೈ ತಂಡವನ್ನು ಪ್ರತಿನಿಧಿಸುತ್ತಿರುವ ರಾಯುಡು

ಹೈದರಾಬಾದ್‌(ಏ.21): ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಸ್ಪೋಟಕ ಬ್ಯಾಟರ್‌ ಅಂಬಟಿ ರಾಯುಡು ಸದ್ಯ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಕ್ರಿಕೆಟ್‌ ಬಳಿಕ ಅಂಬಟಿ ರಾಯುಡು, ರಾಜಕೀಯದಲ್ಲಿ ಹೊಸ ಇನಿಂಗ್ಸ್‌ ಆರಂಭಿಸುವ ಮುನ್ಸೂಚನೆ ನೀಡಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಅಂಬಟಿ ರಾಯುಡು ವ್ಯಕ್ತಪಡಿಸಿದ ಅಭಿಪ್ರಾಯವು, ಅವರು ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆಯೇ ಎನ್ನುವ ಚರ್ಚೆ ಆಂಧ್ರಪ್ರದೇಶದಾದ್ಯಂತ ಜೋರಾಗಿದೆ. ಅಂಬಟಿ ರಾಯುಡು ಯಾವ ಪಕ್ಷಕ್ಕೆ ಸೇರುತ್ತಾರೆ ಎನ್ನುವ ವಿಚಾರ ಸ್ಪಷ್ಟವಾಗಿಲ್ಲವಾದರೂ, ಇತ್ತೀಚೆಗೆ ರಾಯುಡು ಮಾಡಿರುವ ಟ್ವೀಟ್‌ ಮಾತ್ರ ಸಕ್ಕತ್ ವೈರಲ್ ಆಗಿದೆ. 

ಕೆಲದಿನಗಳ ಹಿಂದಷ್ಟೇ ಅಂಬಟಿ ರಾಯುಡು, ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್‌ ಜಗಮೋಹನ್‌ ರೆಡ್ಡಿ ಅವರನ್ನು ಟ್ವೀಟ್‌ವೊಂದರಲ್ಲಿ ಕೊಂಡಾಡಿದ್ದರು. ಕಳೆದ ಬುಧವಾರ ಶ್ರೀಕಕುಲಂ ಜಿಲ್ಲೆಯ ನೌಪದಾ ಸಭಾದಲ್ಲಿ ಆಂಧ್ರ ಮುಖ್ಯಮಂತ್ರಿ ಮಾಡಿದ ಭಾಷಣವನ್ನು ರಾಯುಡು ಗುಣಗಾನ ಮಾಡಿದ್ದರು. " ನಮ್ಮ ಮುಖ್ಯಮಂತ್ರಿ ಜಗನ್‌ ಅವರ ಮಾತುಗಳು ಅದ್ಭುತವಾಗಿದ್ದವು. ರಾಜ್ಯದ ಪ್ರತಿಯೊಬ್ಬರು ನಿಮ್ಮ ಮೇಲೆ ವಿಶ್ವಾಸ ಹಾಗೂ ನಂಬಿಕೆಯಿಟ್ಟಿದ್ದಾರೆ ಸರ್ ಎಂದು ರಾಯುಡು ಟ್ವೀಟ್ ಮಾಡಿ, ಆಂಧ್ರ ಸಿಎಂ ಪರ ಬ್ಯಾಟ್ ಬೀಸಿದ್ದರು.

Scroll to load tweet…

ಈ ಮೊದಲು ಕೆಲವು ಬಾರಿ ಅಂಬಟಿ ರಾಯುಡು, ತಾವು ಸಮಾಜಕ್ಕಾಗಿ ಸೇವೆ ಮಾಡಬೇಕು ಎನ್ನುವ ಇಂಗಿತ ವ್ಯಕ್ತಪಡಿಸಿದ್ದರು. ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ, ತಾವು ಜನರ ಸೇವೆ ಮಾಡಲು ಬಯಸುವುದಾಗಿ ತಿಳಿಸಿದ್ದರು. ಇದೇ ವೇಳೆ ಅವಕಾಶ ಸಿಕ್ಕರೇ ರಾಜಕೀಯ ಪಕ್ಷವನ್ನು ಸೇರಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಅಂಬಟಿ ರಾಯುಡು ತಿಳಿಸಿದ್ದರು. ಇದೀಗ ಕ್ರಿಕೆಟ್ ವೃತ್ತಿಜೀವನದ ಸಂಧ್ಯಾಕಾಲದಲ್ಲಿರುವ ಅಂಬಟಿ ರಾಯುಡು 16ನೇ ಆವೃತ್ತಿಯ ಐಪಿಎಲ್‌ ಬಳಿಕ ಜಗನ್‌ಮೋಹನ್ ರೆಡ್ಡಿ ನೇತೃತ್ವದ YSRCP ಪಕ್ಷ ಸೇರುವ ಸಾಧ್ಯತೆಯಿದೆ ಎನ್ನುವ ಚರ್ಚೆ ಜೋರಾಗಿದೆ.

IPL 2023 ಚೆನ್ನೈನಲ್ಲಿ ಸನ್‌ರೈಸ​ರ್ಸ್‌ಗೆ ಚೆನ್ನೈ ಸೂಪರ್ ಕಿಂಗ್ಸ್‌ ಸ್ಪಿನ್‌ ಪರೀಕ್ಷೆ!

ಅಂಬಟಿ ರಾಯುಡು, ಗುಂಟೂರಿನಲ್ಲಿ ಜನಿಸಿದರೂ, ಬೆಳೆದಿದ್ದೆಲ್ಲಾ ಹೈದರಾಬಾದ್‌ನಲ್ಲಿಯೇ. ಅವರು ಹೈದರಾಬಾದ್‌ ಜತೆಗೆ ಬರೋಡ ತಂಡದ ಪರವೂ ರಣಜಿ ಕ್ರಿಕೆಟ್ ಆಡಿದ್ದಾರೆ. ಟೀಂ ಇಂಡಿಯಾಗೂ ಪಾದಾರ್ಪಣೆ ಮಾಡಿದ್ದ ರಾಯುಡು, 2019ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದರು. ಇನ್ನು ಐಪಿಎಲ್‌ನಲ್ಲಿ ರಾಯುಡು, ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ಪರ ಕಣಕ್ಕಿಳಿದಿದ್ದಾರೆ. 37 ವರ್ಷದ ಅಂಬಟಿ ರಾಯುಡು ಸದ್ಯದಲ್ಲಿಯೇ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.