ಸಿಡ್ನಿ(ಡಿ.14): ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಗಾಯದ ಸಮಸ್ಯೆ ಆಸ್ಟ್ರೇಲಿಯಾ ತಂಡವನ್ನು ಬಿಟ್ಟೂ ಬಿಡದಂತೆ ಕಾಡುತ್ತಿದ್ದು, ವೇಗಿ ಸೀನ್ ಅಬೋಟ್ ತಂಡದಿಂದ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಆಲ್ರೌಂಡರ್ ಮೊಯಿಸ್ ಹೆನ್ರಿಕೇಸ್ ಕಾಂಗರೂ ಪಡೆ ಕೂಡಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ಮುಕ್ತಾಯವಾದ ಭಾರತ ಹಾಗೂ ಆಸ್ಟ್ರೇಲಿಯಾ 'ಎ' ತಂಡಗಳ ನಡುವಿನ ಅಭ್ಯಾಸ ಪಂದ್ಯದ ವೇಳೆ ಸೀನ್ ಅಬೋಟ್ ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಅಬೋಟ್ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, ಡಿಸೆಂಬರ್ 26ರಿಂದ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದ ವೇಳೆಗೆ ಸಂಪೂರ್ಣ ಫಿಟ್ ಆಗುವ ಸಾಧ್ಯತೆಯಿದೆ.

ಇನ್ನು ಸ್ನಾಯುಸೆಳೆತಕ್ಕೆ ಒಳಗಾಗಿ ಆಸ್ಟ್ರೇಲಿಯಾ 'ಎ' ತಂಡದಿಂದ ಹೊರಬಿದ್ದಿದ್ದ ಮೊಯಿಸ್ ಹೆನ್ರಿಕೇಸ್ ಸಂಪೂರ್ಣ ಗುಣಮುಖರಾಗಿದ್ದು, ರಾಷ್ಟ್ರೀಯ ತಂಡ ಕೂಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಗಷ್ಟೇ ಮುಕ್ತಾಯವಾದ ಭಾರತ ವಿರುದ್ದದ ಸೀಮಿತ ಓವರ್‌ಗಳ ಸರಣಿಯಲ್ಲಿ ಹೆನ್ರಿಕೇಸ್ ಕಮ್‌ಬ್ಯಾಕ್ ಮಾಡಿದ್ದರು.

ಇಂಡೋ-ಆಸೀಸ್ ಪಿಂಕ್ ಬಾಲ್ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯ..!

ಹೆನ್ರಿಕೇಸ್ ಸೀಮಿತ ಓವರ್‌ಗಳ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ, ಆದರೆ ಬಹಳ ಸಮಯದಿಂದ ಈ ಆಲ್ರೌಂಡರ್ ಟೆಸ್ಟ್‌ ಪಂದ್ಯವನ್ನಾಡಿಲ್ಲ. ನಾಲ್ಕು ವರ್ಷದ ಹಿಂದೆ ಹೆನ್ರಿಕೇಸ್ ಕೊನೆಯ ಬಾರಿಗೆ ಆಸ್ಟ್ರೇಲಿಯಾ ತಂಡದ ಪರ ಟೆಸ್ಟ್‌ ಕ್ರಿಕೆಟ್‌ ಆಡಿದ್ದರು. ಇದುವರೆಗೂ ಹೆನ್ರಿಕೇಸ್ 2 ಅರ್ಧಶತಕ ಹಾಗೂ ಕೇವಲ 2 ವಿಕೆಟ್‌ ಮಾತ್ರ ಕಬಳಿಸಿದ್ದಾರೆ.