ಐಪಿಎಲ್ ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ಸೇರಿದ್ದರೆ, ಅರ್ಷದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ. ಈ ವರ್ಗಾವಣೆ ಬಗ್ಗೆ ಆಕಾಶ್ ಅಂಬಾನಿ ಭಾವುಕ ಪ್ರತಿಕ್ರಿಯೆ ನೀಡಿದ್ದಾರೆ.
ಐಪಿಎಲ್ ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಸಿಂಗ್ ತಮ್ಮ ತಂಡವನ್ನು ಬದಲಾಯಿಸಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕನಾಗಿದ್ದ ಪಾಂಡ್ಯ, ಪಂಜಾಬ್ ಕಿಂಗ್ಸ್ ತಂಡ ಸೇರಿಕೊಂಡಿದ್ದಾರೆ. ಇತ್ತ ಪ್ರತಿಯಾಗಿ ಪಂಜಾಬ್ ಕಿಂಗ್ಸ್ ತನ್ನ ಬೌಲಿಂಗ್ ದೈತ್ಯ ಅರ್ಷದೀಪ್ ಸಿಂಗ್ ಅವರನ್ನು ಮುಂಬೈ ಇಂಡಿಯನ್ಸ್ಗೆ ಬಿಟ್ಟುಕೊಟ್ಟಿದೆ.
ಆಕಾಶ್ ಅಂಬಾನಿ ಭಾವುಕ ಪೋಸ್ಟ್
ಹಾರ್ದಿಕ್ ಪಾಂಡ್ಯ ಅವರು 18 ಕೋಟಿಗೆ ಪಂಜಾಬ್ ಸೇರಿದ್ದರೆ, ಅರ್ಷದೀಪ್ ಸಿಂಗ್ ಕೂಡ 18 ಕೋಟಿಗೆ ನೀಲಿ ಜರ್ಸಿ ತೊಟ್ಟಿದ್ದಾರೆ. ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ತಂಡದ ಮಾಲೀಕ ಆಕಾಶ್ ಅಂಬಾನಿ ಪಾಂಡ್ಯ ಕುರಿತು ಭಾವನಾತ್ಮಕ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಜೊತೆ ಕಳೆದ ವಿಶೇಷ ಕ್ಷಣವನ್ನು ಹಂಚಿಕೊಂಡಿರುವ ಆಕಾಶ್ ಅಂಬಾನಿ.. ಯುವ ಕ್ರಿಕೆಟಿಗನಿಂದ ವಿಶ್ವ ಕ್ರಿಕೆಟ್ನಲ್ಲಿ ಚಾಪು ಮೂಡಿಸುವವರೆಗೆ ಬೆಳೆದು ತಂಡಕ್ಕೆ ನಾಯಕನಾಗಿ ಮುನ್ನಡೆಸಿರೋದನ್ನು ನೋಡಿದ್ದೇವೆ. ಮೈದಾನದಲ್ಲಿ ಅವರ ಕೊಡುಗೆಗಳು ಅವರ ಶಕ್ತಿ ಪಾಂಡ್ಯರ ಹೋರಾಟದ ಅನುಭವ ಮುಂಬೈ ಇಂಡಿಯನ್ಸ್ಗೆ ಅಮೂಲ್ಯವಾಗಿತ್ತು. ಒಬ್ಬ ಆಟಗಾರ ಮತ್ತು ವ್ಯಕ್ತಿಯಾಗಿ ನನಗೆ ಅವರ ಮೇಲೆ ಅಪಾರವಾದ ಗೌರವ ಇದೆ. ಅವರ ಭವಿಷ್ಯದ ಪ್ರಯತ್ನಗಳಿಗೆ ನಾನು ಶುಭ ಹಾರೈಸುತ್ತೇನೆ ಎಂದರು.
ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಪರ ನಾಲ್ಕು ಬಾರಿ (2015, 2017, 2019, 2020) ಐಪಿಎಲ್ ಪ್ರಶಸ್ತಿಯನ್ನ ಗೆದ್ದಿದ್ದಾರೆ. ಆದರೆ ಅವರ ನಾಯಕತ್ವವು ಮುಂಬೈ ಇಂಡಿಯನ್ಸ್ಗೆ ಸವಾಲಿನಿಂದ ಕೂಡಿತ್ತು. ಒಟ್ಟು 39 ಪಂದ್ಯಗಳಲ್ಲಿ ಮುನ್ನಡೆಸಿ 15 ಗೆಲುವು, 24 ಸೋಲುಗಳನ್ನ ದಾಖಲಿಸಿದೆ.
ಇದೇ ವೇಳೆ ಅರ್ಷದೀಪ್ ಸಿಂಗ್ ಆಗಮನವನ್ನು ಸ್ವಾಗತಿಸಿರುವ ಅವರು, ಅವರು ಎಂಟು ಋತುಗಳಲ್ಲಿ ಪಂಜಾಬ್ ತಂಡದ ಭಾಗವಾಗಿದ್ದಾರೆ. 96 ಪಂದ್ಯಗಳಲ್ಲಿ 111 ವಿಕೆಟ್ ಕಬಳಿಸುವ ಮೂಲಕ ಪಂಜಾಬ್ ಇತಿಹಾಸದಲ್ಲಿ ಅತ್ಯಂತ ಶಕ್ತಿಯುತ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಅರ್ಷದೀಪ್ ಸಿಂಗ್ ಆಗಮನವು ನಮ್ಮ ತಂಡದ ಬೌಲಿಂಗ್ ವಿಭಾಗದ ಶಕ್ತಿಯನ್ನು ಹೆಚ್ಚಿಸುತ್ತದೆ. ಅನುಭವ, ಸ್ಕಿಲ್, ಗೆಲುವಿನ ಹಸಿವು ಹೊಂದಿರುವ ಸಮತೋಲನದ ತಂಡ ನಿರ್ಮಿಸಲು ಅವರ ಎಂಟ್ರಿ ಸಹಕಾರ ಆಗಲಿದೆ. ನಾವು ಯಾವಾಗಲೂ ಶ್ರಮಿಸುತ್ತೇವೆ. ಅರ್ಷದೀಪ್ ಸಿಂಗ್ ಈ ಎಲ್ಲಾ ಗುಣಗಳನ್ನು ಹೊಂದಿದ್ದಾರೆ. ನಾವು ಅವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ ಎಂದಿದ್ದಾರೆ.
ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ಆಟಗಾರರ ವರ್ಗಾವಣೆ ಪ್ರಕ್ರಿಯೆ ಜೋರಾಗಿದೆ. ಈಗಾಗಲೇ ರಿಷಭ್ ಪಂತ್, ಕುಲ್ದೀಪ್ ಯಾದವ್, ಟಿ. ನಟರಾಜನ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ಸೇರಿದಂತೆ ಒಟ್ಟು ಎಂಟು ಆಟಗಾರರು ಬೇರೆ ಬೇರೆ ಫ್ರಾಂಚೈಸಿಗಳ ಪಾಲಾಗಿದ್ದಾರೆ. ಮೂರು ಪ್ರತ್ಯೇಕ ಟ್ರೇಡ್ ಒಪ್ಪಂದಗಳ ಮೂಲಕ ಈ ಆಟಗಾರರು ತಂಡಗಳನ್ನು ಬದಲಿಸಿಕೊಂಡಿದ್ದಾರೆ.
ಗೋವಾದಲ್ಲಿ ಡಿಸೆಂಬರ್ 16ರಂದು ಐಪಿಎಲ್ 2027ರ ಮಿನಿ ಹರಾಜು ನಡೆಯಲಿದ್ದು, ಅದಕ್ಕೂ ಮುನ್ನ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಬಲಪಡಿಸುವ ಕಾರ್ಯದಲ್ಲಿ ತೊಡಗಿವೆ. ಪ್ರಮುಖ ಬೆಳವಣಿಗೆಯೊಂದರಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿದ್ದ ರಿಷಭ್ ಪಂತ್ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಿದ್ದಾರೆ. ಇಂಗ್ಲೆಂಡ್ನ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಇದರೊಂದಿಗೆ ಸನ್ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಾಲ್ವರು ಆಟಗಾರರ ವಿನಿಮಯವೂ ನಡೆದಿದೆ.














