ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ಆಯ್ಕೆ
ಟೀಮ್ ಇಂಡಿಯಾ ಮಾಜಿ ಆಲ್ರೌಂಡರ್ ಆಗೂ 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದ ಅಜಿತ್ ಅಗರ್ಕರ್ ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.
ಮುಂಬೈ (ಜು.4): ಟೀಮ್ ಇಂಡಿಯಾ ಮಾಜಿ ಆಟಗಾರ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಸದಸ್ಯರಾಗಿದ್ದ ಆಲ್ರೌಂಡರ್ ಅಜಿತ್ ಅಗರ್ಕರ್ ರಾಷ್ಟ್ರೀಯ ಆಯ್ಕೆ ಸಮಿತಿಯ ಚೇರ್ಮನ್ ಆಗಿ ನೇಮಕವಾಗಿದ್ದಾರೆ. ಮಂಗಳವಾರ ಬಿಸಿಸಿಐ ಈ ಕುರಿತಾಗಿ ಅಧಿಕೃತವಾಗಿ ಪ್ರಕಟಣೆ ನೀಡಿದೆ. ಈ ಹಿಂದೆ ಸಮಿತಿಯ ಅಧ್ಯಕ್ಷರಾಗಿದ್ದ ಚೇತನ್ ಶರ್ಮ್, ಕಳೆದ ಫೆಬ್ರವರಿಯಲ್ಲಿ ನಡೆದ ಸ್ಟಿಂಗ್ ಆಪರೇಷನ್ ಬೆನ್ನಲ್ಲಿಯೇ ತಮ್ಮ ಸ್ಥಾನ ಕಳೆದುಕೊಂಡಿದ್ದರು. ಅಲ್ಲಿಂದ ಈ ಹುದ್ದೆ ಖಾಲಿಯಾಗಿ ಉಳಿದಿತ್ತು.ಟೀಮ್ ಇಂಡಿಯಾ ಮಾಜಿ ವೇಗಿ 45 ವರ್ಷದ ಅಜಿತ್ ಅಗರ್ಕರ್, ಆಯ್ಕೆ ಸಮಿತಿಯಲ್ಲಿ ಚೇತನ್ ಶರ್ಮ ಸ್ಥಾನವನ್ನು ತುಂಬಲಿದ್ದಾರೆ. 5 ತಿಂಗಳ ಹಿಂದೆ ಚೇತನ್ ಶರ್ಮ, ಸ್ಟಿಂಗ್ ಆಪರೇಷನ್ ಒಂದರಲ್ಲಿ ಟೀಮ್ ಇಂಡಿಯಾ ಆಟಗಾರರು ಫಿಟ್‌ನೆಸ್ ಸಾಬೀತು ಮಾಡಲು ಇಂಜೆಕ್ಷನ್ ಪಡೆದುಕೊಳ್ಳುತ್ತಾರೆ ಎಂದು ಹೇಳಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಹೊಸ ಆಯ್ಕೆ ಸಮಿತಿಯಲ್ಲಿ ಶಿವಸುಂದರ್ ದಾಸ್, ಸಲೀಲ್ ಅಂಕೋಲಾ, ಸುಬ್ರೋತೊ ಬ್ಯಾನರ್ಜಿ ಮತ್ತು ಶ್ರೀಧರನ್ ಶರತ್ ಇದ್ದು, ಇವರಿಗೆ ಅಜಿತ್ ಅಗರ್ಕರ್ ಮುಖ್ಯಸ್ಥರಾಗಿ ಇರಲಿದ್ದಾರೆ.
ಈ ಐದು ತಿಂಗಳ ಅವಧಿಯಲ್ಲಿ ಶಿವಸುಂದರ್ ದಾಸ್, ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ) ಪುರುಷರ ಆಯ್ಕೆ ಸಮಿತಿಯಲ್ಲಿ ಒಬ್ಬ ಆಯ್ಕೆಗಾರನ ಸ್ಥಾನಕ್ಕಾಗಿ ಅರ್ಜಿದಾರರನ್ನು ಸಂದರ್ಶಿಸಿತು. ಮೂವರು ಸದಸ್ಯರ ಸಿಎಸಿ ಅಜಿತ್ ಅಗರ್ಕರ್ ಅವರನ್ನು ಈ ಸ್ಥಾನಕ್ಕೆ ಸರ್ವಾನುಮತದಿಂದ ಶಿಫಾರಸು ಮಾಡಿದೆ ಎಂದು ಬಿಸಿಸಿಐ ತಿಳಿಸಿದೆ.
ಭಾರತದ ಮಾಜಿ ಆಲ್‌ರೌಂಡರ್ 110 ಪ್ರಥಮ ದರ್ಜೆ, 270 ಲಿಸ್ಟ್ ಎ, ಮತ್ತು 62 ಟಿ20 ಪಂದ್ಯಗಳನ್ನು ಆಡುವುದರ ಜೊತೆಗೆ 26 ಟೆಸ್ಟ್‌ಗಳು, 191 ಏಕದಿನ ಮತ್ತು ನಾಲ್ಕು T20I ಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಮಾಜಿ ವೇಗದ ಬೌಲರ್ ಆಗಿ, ಅವರು 2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ T20 ವಿಶ್ವಕಪ್‌ನಲ್ಲಿ ವಿಜೇತ ಭಾರತ ತಂಡದ ಭಾಗವಾಗಿದ್ದರು. ಏಕದಿನದಲ್ಲಿ ಭಾರತೀಯ ಬ್ಯಾಟರ್‌ನಿಂದ 21 ಎಸೆತಗಳಲ್ಲಿ ಸಾಧಿಸಿದ ವೇಗದ ಅರ್ಧಶತಕದ ದಾಖಲೆಯನ್ನು ಅವರು ಇನ್ನೂ ಹೊಂದಿದ್ದಾರೆ. 2000 ರಲ್ಲಿ ಜಿಂಬಾಬ್ವೆ ವಿರುದ್ಧ ಅವರು ಈ ಅರ್ಧಶಯಕ ಬಾರಿಸಿದ್ದರು. ಅಂದಾಜು ಒಂದು ದಶಕದ ಕಾಲ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 50 ವಿಕೆಟ್ ಸಾಧನೆ ಮಾಡಿದ ಭಾರತದ ಬೌಲರ್ ಎನ್ನುವ ದಾಖಲೆಯನ್ನು ಹೊಂದಿದ್ದರು. ಕೇವಲ 23 ಪಂದ್ಯಗಳಲ್ಲಿ ಅವರು ಈ ಸಾಧನೆ ಮಾಡಿದ್ದರು.
ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ನೇಮಕ? ಸ್ಯಾಲರಿ ಭರ್ಜರಿ ಏರಿಕೆ!
ನಿವೃತ್ತಿಯ ಬಳಿಕ ಅಗರರ್ಕರ್, ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಮುಖ್ಯ ಆಯ್ಕೆಗಾರರಾಗಿದ್ದರು. ಅದರೊಂದಿಗೆ ದೆಹಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಕಳೆದ ವಾರ ಅವರು ಐಪಿಎಲ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್‌ನ ಸಹಾಯಕ ಕೋಚ್ ಸ್ಥಾನದಿಂದ ಕೆಳಗಿಳಿದ ಬೆನ್ನಲ್ಲಿಯೇ ಅವರು ಟೀಮ್ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷರಾಗುತ್ತಾರೆ ಎನ್ನುವುದು ಖಚಿತವಾಗಿತ್ತು.
ಧೋನಿಯನ್ನು ಟೀಂ ಇಂಡಿಯಾ ಮಿಸ್ ಮಾಡಿಕೊಳ್ಳಲಿದೆ ಎಂದೆನಿಸುತ್ತಿಲ್ಲ ಎಂದಿದ್ದ: ಅಜಿತ್ ಅಗರ್ಕರ್
ಆಯ್ಕೆ ಸಮಿತಿಯ ಚೇರ್ಮನ್‌ಗೆ ನೀಡಲಾಗುವ ವೇತನವನ್ನು ಬಿಸಿಸಿಐ ದೊಡ್ಡ ಪ್ರಮಾಣದಲ್ಲಿ ಏರಿಸಲಿದೆ ಎನ್ನುವ ಭರವಸೆಯೊಂದಿಗೆ ಅಜಿತ್ ಅಗರ್ಕರ್ ಈ ಹುದ್ದೆ ವಹಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.