Asianet Suvarna News Asianet Suvarna News

ಡಚ್ಚರನ್ನು ಬಗ್ಗುಬಡಿದ ದಕ್ಷಿಣ ಆಫ್ರಿಕಾ; ಏಕದಿನ ವಿಶ್ವಕಪ್ ನೇರ ಅರ್ಹತೆ ಕನಸು ಜೀವಂತ..!

* ನೆದರ್‌ಲೆಂಡ್ಸ್‌ ಎದುರು ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ ಭರ್ಜರಿ ಜಯ
* ಏಕದಿನ ವಿಶ್ವಕಪ್‌ ನೇರ ಅರ್ಹತೆಗಿಟ್ಟಿಸಿಕೊಳ್ಳುವತ್ತ ಆಫ್ರಿಕಾ ದಿಟ್ಟ ಹೆಜ್ಜೆ
* ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ ಏಯ್ಡನ್ ಮಾರ್ಕ್‌ರಮ್‌

Aiden Markram powerful Century takes South Africa to verge of ICC ODI World Cup kvn
Author
First Published Apr 3, 2023, 2:57 PM IST

ಜೋಹಾನ್ಸ್‌ಬರ್ಗ್‌(ಏ.03): ಅನುಭವಿ ಬ್ಯಾಟರ್‌ ಏಯ್ಡನ್ ಮಾರ್ಕ್‌ರಮ್‌ ಬಾರಿಸಿದ ಸಿಡಿಲಬ್ಬರದ ಶತಕ(175)ದ ನೆರವಿನಿಂದ ನೆದರ್‌ಲೆಂಡ್‌ ಎದುರಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 146 ರನ್‌ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್‌ ತಿಂಗಳಿನಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಪಡೆಯುವ ಆಸೆಯನ್ನು ಮತ್ತಷ್ಟು ಜೀವಂತವಾಗಿರಿಸಿಕೊಂಡಿದೆ. 

ಹೌದು, ಇಲ್ಲಿನ ವಾಂಡರರ್ಸ್ ಮೈದಾನದಲ್ಲಿ ಭಾನುವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಹರಿಣಗಳ ಪಡೆ ಭಾರೀ ಅಂತರದ ಗೆಲುವು ದಾಖಲಿಸಿದೆ.  ಈ ಗೆಲುವುನಿಂದ ದಕ್ಷಿಣ ಆಫ್ರಿಕಾ ತಂಡವು ಸೂಪರ್ ಲೀಗ್ ಅಂಕಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಹಿಂದಿಕ್ಕಿ ಎಂಟನೇ ಸ್ಥಾನಕ್ಕೇರಿತು. ದಕ್ಷಿಣ ಆಫ್ರಿಕಾ ತಂಡವು 2023ರ ಏಕದಿನ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆಗಿಟ್ಟಿಸಲು ಐರ್ಲೆಂಡ್‌ ತಂಡವು ಕೊಂಚ ಅಡ್ಡಿಯಾಗುವ ಸಾಧ್ಯತೆಯಿದೆ. ಒಂದು ವೇಳೆ ಐರ್ಲೆಂಡ್ ತಂಡವು, ಇಂಗ್ಲೆಂಡ್‌ನಲ್ಲಿ ಬಾಂಗ್ಲಾ ಎದುರು 3 ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್ ಮಾಡಿದರೆ, ಹರಿಣಗಳ ಪಡೆಯನ್ನು ಹಿಂದಿಕ್ಕಿ, ಏಕದಿನ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಪಡೆಯುವ ಸಾಧ್ಯತೆಯಿದೆ.

ಈಗಾಗಲೇ ನ್ಯೂಜಿಲೆಂಡ್, ಇಂಗ್ಲೆಂಡ್‌, ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ಆಫ್ಘಾನಿಸ್ತಾನ ತಂಡಗಳು ನೇರ ಅರ್ಹತೆಗಿಟ್ಟಿಸಿಕೊಂಡಿವೆ. ಒಟ್ಟು 10 ತಂಡಗಳು ಪಾಲ್ಗೊಳ್ಳುವ ಈ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಇಲ್ಲವೇ ಐರ್ಲೆಂಡ್ ಈ ಎರಡು ತಂಡಗಳ ಪೈಕಿ ಒಂದು ತಂಡವು ನೇರ ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಇನ್ನುಳಿದಂತೆ ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ತಂಡಗಳು ಕೂಡಾ ಅರ್ಹತಾ ಸುತ್ತಿನ ಪಂದ್ಯಗಳನ್ನಾಡಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡರೆ, ಏಕದಿನ ವಿಶ್ವಕಪ್ ಟೂರ್ನಿಯ ಪ್ರಧಾನ ಸುತ್ತಿಗೆ ಲಗ್ಗೆಯಿಡಲಿವೆ.

2023ರ ಐಸಿಸಿ ಏಕದಿನ ವಿಶ್ವಕಪ್‌ ಲೋಗೋ ಅನಾವರಣ, ಲೋಗೋದಲ್ಲಿದೆ ನವರಸದ ಮ್ಯಾಜಿಕ್‌..!

ಇನ್ನು ಮೂರನೇ ಏಕದಿನ ಪಂದ್ಯ ಹೇಗಿತ್ತು ಎನ್ನುವುದನ್ನು ನೋಡುವುದಾದರೇ,  28,000‌ ಪ್ರೇಕ್ಷಕರ ಸಮ್ಮುಖದಲ್ಲಿ ಮಾರ್ಕ್‌ರಮ್‌ ತಮ್ಮ ಚೊಚ್ಚಲ ಏಕದಿನ ಶತಕ ಸಿಡಿಸಿದರು. ಅವರ ಆಕ್ರಮಣಕಾರಿ ಇನಿಂಗ್ಸ್‌ನಲ್ಲಿ 17 ಬೌಂಡರಿ ಮತ್ತು ಏಳು ಸಿಕ್ಸರ್‌ಗಳು ಸೇರಿದ್ದವು. ಟಾಸ್ ಸೋತು ಮೊದಲು  ಬ್ಯಾಟಿಂಗ್‌ ಮಾಡಿದ  ದಕ್ಷಿಣ ಆಫ್ರಿಕಾ ‌ತಂಡ ಆರಂಭಿಕರನ್ನು ಬೇಗನೆ ಕಳೆದುಕೊಂಡಿತು  ಆದರೆ ನಂತರ‌ ಮಾರ್ಕ್‌ರಮ್‌‌ ಹಾಗೂ ಡೇವಿಡ್‌ ಮಿಲ್ಲರ್ ಜೋಡಿ 4ನೇ ವಿಕೆಟ್‌ಗೆ 199 ರನ್ ಜೊತೆಯಾಟದ ಸಹಾಯದಿಂದ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 370 ರನ್ ಪೇರಿಸಿತು. ಮಿಲ್ಲರ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮಾಡಿ ಕೇವಲ 61 ಎಸೆತಗಳಲ್ಲಿ 91 ರನ್ ಗಳಿಸಿದರು  ನೆದರ್‌ಲ್ಯಾಂಡ್ ತಂಡದ ಪರ ಫ್ರೆಡ್ ಕ್ಲಾಸಿನ್, ಕಿಂಗ್ಮ ಹಾಗೂ ಕೀಮರನ್ ತಲಾ ಎರಡು ವಿಕೆಟ್ ಕಬಳಿಸಿದರು.

ಗುರಿ ಬೆನ್ನತ್ತಿದ್ದ ನೆದರ್‌ಲ್ಯಾಂಡ್ ತಂಡಕ್ಕೆ ವೇಗಿ ಸಿಸಂದಾ ಮಗಲಾ ಐದು-ವಿಕೆಟ್‌ಗಳನ್ನು ಗಳಿಸುವ ಶಾಕ್ ನೀಡಿದರು. ನೆದರ್‌ಲೆಂಡ್ಸ್ ‌ತಂಡದ ಪರ ಮೂಸಾ ಅಹ್ಮದ್  61 ರನ್ ಗಳಿಸಿದರು ಮತ್ತು ಮ್ಯಾಕ್ಸ್ ಒ'ಡೌಡ್ 47 ರನ್ ಕೊಡುಗೆ ನೀಡಿದರು. ಅಂತಿಮವಾಗಿ 39.1 ಓವರ್‌ಗಳಲ್ಲಿ ಕೇವಲ 224 ರನ್ ಗಳಿಸಿ ಆಲೌಟ್ ಆಯಿತು. ಹರಿಣಗಳ ಪಡೆಯ ಪರ ಮಗಾಲ 5 ವಿಕೆಟ್ ಮತ್ತು ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ಮಾರ್ಕ್‌ರಮ್‌ ಬೌಲಿಂಗ್ ನಲ್ಲಿ 2 ವಿಕೆಟ್ ಕಿತ್ತರು. ಶಮ್ಸಿ, ಲುಂಗಿ ಎನ್ಗಿಡಿ ಹಾಗೂ ಮಾರ್ಕೋ ಹಾನ್ಸನ್ ತಲಾ ಒಂದೊಂದು ವಿಕೆಟ್ ಪಡೆದರು.
ಆಲ್ರೌಂಡ್ ಪ್ರದರ್ಶನ ನೀಡಿದ ಏಡೆನ್ ಮಾರ್ಕ್ರಾಮ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್

ದಕ್ಷಿಣ ಆಫ್ರಿಕಾ - 370/8
ಏಡೆನ್ ಮಾರ್ಕ್ರಾಮ್‌ 175
ಡೇವಿಡ್ ಮಿಲ್ಲರ್ 91
ಫ್ರೆಡ್ ಕ್ಲಾಸಿನ್ 2/43

ನೆದರ್‌ಲೆಂಡ್ಸ್  224/10
ಮೂಸಾ ಅಹ್ಮದ್  61
ಮ್ಯಾಕ್ಸ್ ಒ'ಡೌಡ್ 47 
ಸಿಸಾಂದ ಮಗಾಲ 5/43

Follow Us:
Download App:
  • android
  • ios