ದಕ್ಷಿಣ ಆಫ್ರಿಕಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದು 27 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿದೆ. ಏಯ್ಡನ್ ಮಾರ್ಕ್‌ರಮ್ ಅವರ ಅದ್ಭುತ ಇನ್ನಿಂಗ್ಸ್ ಗೆಲುವಿನ ರೂವಾರಿ ಎನಿಸಿಕೊಂಡಿತು. ವಿರಾಟ್ ಕೊಹ್ಲಿ ಅವರ ಹಳೆಯ ಟ್ವೀಟ್ ಈಗ ವೈರಲ್ ಆಗುತ್ತಿದೆ.

ಬೆಂಗಳೂರು: ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಬರೋಬ್ಬರಿ 27 ವರ್ಷಗಳ ಬಳಿಕ ಹರಿಣಗಳ ಪಡೆ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ದಕ್ಷಿಣ ಆಫ್ರಿಕಾ ತಂಡವು ಚಾಂಪಿಯನ್ ಆಗುವಲ್ಲಿ ಆರಂಭಿಕ ಬ್ಯಾಟರ್ ಏಯ್ಡನ್ ಮಾರ್ಕ್‌ರಮ್ ಪ್ರಮುಖ ಪಾತ್ರವಹಿಸಿದ್ದಾರೆ. ಇನ್ನು ಏಯ್ಡನ್ ಮಾರ್ಕ್‌ರಮ್ ಕುರಿತಂತೆ ಭಾರತದ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ಅವರ ಭವಿಷ್ಯ ಈಗ ನಿಜವಾಗಿದೆ. ಜತೆಗೆ ಕೊಹ್ಲಿ ಮಾಡಿದ್ದ ಹಳೆಯ ಟ್ವೀಟ್ ಪೋಸ್ಟ್‌ ವೈರಲ್ ಆಗುತ್ತಿದೆ.

ಹೌದು, ಟೆಸ್ಟ್ ವಿಶ್ವಕಪ್ ಗೆಲ್ಲಲು 282 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು 70 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಕೊಂಚ ಆತಂಕಕ್ಕೆ ಒಳಗಾಗಿತ್ತು. ಅದರಲ್ಲೂ ಚೋಕರ್ಸ್ ಎನ್ನುವ ಹಣೆಪಟ್ಟಿ ಹೊತ್ತುಕೊಂಡಿರುವ ಹರಿಣಗಳ ಕಡೆ ಐಸಿಸಿಯ ಮಹತ್ವದ ಟೂರ್ನಿಯಲ್ಲಿ ಎಡವುತ್ತಲೇ ಬಂದಿದೆ. ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್‌ನಲ್ಲೂ ಭಾರತ ಎದುರು ದಕ್ಷಿಣ ಆಫ್ರಿಕಾ ತಂಡವು ರೋಚಕ ಸೋಲು ಅನುಭವಿಸುವ ಮೂಲಕ ಐಸಿಸಿ ಟ್ರೋಫಿ ಗೆಲ್ಲುವ ಅವಕಾಶ ಕೈಚೆಲ್ಲಿತ್ತು. ಇದುವರೆಗೂ ಐಸಿಸಿ ಟೂರ್ನಿಯಲ್ಲಿ 2 ಕ್ವಾರ್ಟರ್ ಫೈನಲ್, 12 ಸೆಮಿಫೈನಲ್ ಹಾಗೂ ಒಂದು ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಸೋಲು ಅನುಭವಿಸಿತ್ತು. ಇದೀಗ ಏಯ್ಡನ್ ಮಾರ್ಕ್‌ರಮ್ ಜವಾಬ್ದಾರಿಯುತ ಆಟ ದಕ್ಷಿಣ ಆಫ್ರಿಕಾ ತಂಡಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟಿದೆ.

ವಿರಾಟ್ ಕೊಹ್ಲಿ ಹಳೆಯ ಟ್ವೀಟ್ ವೈರಲ್:

2018ರ ಮಾರ್ಚ್ 24ರಂದು ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಏಯ್ಡನ್ ಮಾರ್ಕ್‌ರಮ್ ಆಕರ್ಷಕ 84 ರನ್ ಸಿಡಿಸಿದ್ದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ, 'ಏಯ್ಡನ್ ಮಾರ್ಕ್‌ರಮ್ ಆಟ ನೋಡುವುದಕ್ಕೆ ಖುಷಿ ಎನಿಸುತ್ತಿದೆ' ಎಂದು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಖುಷಿ ವ್ಯಕ್ತಪಡಿಸಿದ್ದರು. ಈ ಟ್ವಿಟರ್ ಪೋಸ್ಟ್ ಈಗ ವೈರಲ್ ಆಗುತ್ತಿದೆ.

Scroll to load tweet…

ದಕ್ಷಿಣ ಆಫ್ರಿಕಾ ತಂಡವು ನಾಲ್ಕನೇ ದಿನದಾಟದಲ್ಲಿ ಗೆಲ್ಲಲು 69 ರನ್‌ಗಳ ಅಗತ್ಯವಿತ್ತು. ಮೂರನೇ ದಿನದಾಟದಿಂದಲೂ ಅತ್ಯಂತ ಜವಾಬ್ದಾರಿಯುತ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಆಸರೆಯಾದರು. ಅದರಲ್ಲೂ ಮೂರನೇ ವಿಕೆಟ್‌ಗೆ ತೆಂಬಾ ಬವುಮಾ ಹಾಗೂ ಏಯ್ಡನ್ ಮಾರ್ಕ್‌ರಮ್ 250 ಎಸೆತಗಳನ್ನು ಎದುರಿಸಿ 147 ರನ್‌ಗಳ ಅಮೂಲ್ಯ ಜತೆಯಾಟ ಆಸೀಸ್‌ ಕೈಯಿಂದ ಪಂದ್ಯ ಜಾರುವಂತೆ ಮಾಡುವಲ್ಲಿ ಯಶಸ್ವಿಯಾಯಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದ ಏಯ್ಡನ್ ಮಾರ್ಕ್‌ರಮ್ ಎರಡನೇ ಇನ್ನಿಂಗ್ಸ್‌ನಲ್ಲಿ 207 ಎಸೆತಗಳನ್ನು ಎದುರಿಸಿ 14 ಬೌಂಡರಿ ಸಹಿತ 136 ರನ್ ಸಿಡಿಸಿ ದಕ್ಷಿಣ ಆಫ್ರಿಕಾ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಏಯ್ಡನ್ ಮಾರ್ಕ್‌ರಮ್ ಅವರ ಅದ್ಭುತ ಇನ್ನಿಂಗ್ಸ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಅರಸಿ ಬಂದಿತು.

ಟೆಸ್ಟ್‌ ವಿಶ್ವಕಪ್ ಫೈನಲ್ ಹೇಗಿತ್ತು?

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 213 ರನ್‌ಗಳಿಸಿ ಸರ್ವಪತನ ಕಂಡಿತು. ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ, ಪ್ಯಾಟ್ ಕಮಿನ್ಸ್ ಮಾರಕ ದಾಳಿಗೆ ತತ್ತರಿಸಿ ಕೇವಲ 138 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 74 ರನ್‌ಗಳ ಅಮೂಲ್ಯ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 207 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹರಿಣಗಳ ಪಡೆಗೆ 282 ರನ್‌ಗಳ ಕಠಿಣ ಗುರು ನೀಡಿತು. ಈ ಗುರಿಯನ್ನು ದಕ್ಷಿಣ ಆಫ್ರಿಕಾ 5 ವಿಕೆಟ್ ಕಳೆದುಕೊಂಡು ಇನ್ನೂ ಒಂದೂವರೆ ದಿನ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.