ರಾಜಸ್ಥಾನ ರಾಯಲ್ಸ್‌ನ 15 ವರ್ಷದ ಆಟಗಾರ ವೈಭವ್ ಸೂರ್ಯವಂಶಿ ಬ್ಯಾಟ್‌ನಲ್ಲಿ ಎಐ ಚಿಪ್ ಬಳಸುತ್ತಿದ್ದಾರೆ ಎಂದು ಪಾಕಿಸ್ತಾನದ ವಿಶ್ಲೇಷಕ ನೌಮಾನ್ ನಿಯಾಝ್ ಆರೋಪಿಸಿದ್ದಾರೆ. ವೈಭವ್ ಅವರ ಸ್ಫೋಟಕ ಬ್ಯಾಟಿಂಗ್, ವಿಶೇಷವಾಗಿ 36 ಎಸೆತಗಳ ಶತಕದ ನಂತರ ಈ ಹೇಳಿಕೆ ಬಂದಿದ್ದು, ಅವರ ಬ್ಯಾಟನ್ನು ಲ್ಯಾಬ್‌ನಲ್ಲಿ ಪರೀಕ್ಷಿಸಬೇಕೆಂದು ನಿಯಾಝ್ ಒತ್ತಾಯಿಸಿದ್ದಾರೆ.

ಮುಂಬೈ: ಐಪಿಎಲ್‌ನಲ್ಲಿ ಬ್ಯಾಟಿಂಗ್ ದಾಖಲೆಗಳನ್ನು ಧೂಳೀಪಟ ಮಾಡುತ್ತಿರುವ ರಾಜಸ್ಥಾನ ರಾಯಲ್ಸ್‌ನ 15 ವರ್ಷದ ಹುಡುಗ ವೈಭವ್ ಸೂರ್ಯವಂಶಿ ಬಗ್ಗೆ ಪಾಕಿಸ್ತಾನದ ಕ್ರಿಕೆಟ್ ವಿಶ್ಲೇಷಕ ನೌಮಾನ್ ನಿಯಾಝ್ ಒಂದು ವಿಚಿತ್ರ ಆರೋಪ ಮಾಡಿದ್ದಾರೆ. ವೈಭವ್ ಬ್ಯಾಟ್‌ನಲ್ಲಿ ಎಐ ಚಿಪ್ ಅಳವಡಿಸಲಾಗಿದೆ, ಅದಕ್ಕಾಗಿಯೇ ಚೆಂಡು ಅಷ್ಟು ರಭಸವಾಗಿ ಹೋಗುತ್ತಿದೆ. ಹಾಗಾಗಿ ಅವನ ಬ್ಯಾಟನ್ನು ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಬೇಕು ಅಂತಾ ನಿಯಾಝ್ ಹೇಳಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ವೈಭವ್ ಕೇವಲ 36 ಎಸೆತಗಳಲ್ಲಿ ಶತಕ ಬಾರಿಸಿದ ನಂತರ, 'ಸ್ಮ್ಯಾಶ್ ಹಿಟ್' ಅನ್ನೋ ಕಾರ್ಯಕ್ರಮದಲ್ಲಿ ನೌಮಾನ್ ನಿಯಾಝ್ ಈ ಮಾತುಗಳನ್ನಾಡಿದ್ದಾರೆ.

ವೈಭವ್ ಸೂರ್ಯವಂಶಿ ಬ್ಯಾಟ್ ಬಗ್ಗೆ ಗಂಭೀರ ಆರೋಪ

"ಒಮ್ಮೆ ಯೋಚಿಸಿ, ಯಾರು ಈ ಹುಡುಗ? ಅವನ ಬ್ಯಾಟ್ ಚೆಕ್ ಮಾಡಲೇಬೇಕು. WADA ಡೋಪಿಂಗ್ ಟೆಸ್ಟ್ ಮಾಡುವ ಹಾಗೆ, ಇವನ ಬ್ಯಾಟನ್ನು ಲ್ಯಾಬ್‌ಗೆ ಕಳಿಸಬೇಕು. ಅವನು ಬ್ಯಾಟ್‌ನಲ್ಲಿ ಎಐ ಚಿಪ್ ಬಳಸುತ್ತಿರಬಹುದು. 15 ವರ್ಷದ ಹುಡುಗನಿಗೆ ಇಷ್ಟೊಂದು ಶಕ್ತಿ ಇರಲು ಸಾಧ್ಯವಿಲ್ಲ. ಸಾಮಾನ್ಯವಾಗಿ 18 ವರ್ಷದ ನಂತರ ದೇಹದಲ್ಲಿ ಮಾಂಸಖಂಡಗಳು ಬೆಳೆಯುತ್ತವೆ. ಇವನಿಗೆ ಕೇವಲ 15 ವರ್ಷ. ವಿರಾಟ್ ಕೊಹ್ಲಿ ವಿಶ್ವ ಚಾಂಪಿಯನ್ ಆದಾಗ ಹುಟ್ಟಿದವನು. ಅವನ ಟೆಕ್ನಿಕ್‌ಗೂ, ಅವನು ಆಡೋ ಪವರ್ ಗೇಮ್‌ಗೂ ಸಂಬಂಧವೇ ಇಲ್ಲ. ಇದು ನಂಬೋಕೆ ಆಗ್ತಿಲ್ಲ. 360 ಡಿಗ್ರಿಯಲ್ಲಿ ಹೀಗೆ ಬಾರಿಸುವ ಇವರು ಮನುಷ್ಯರೇನಾ ಎಂಬ ಅನುಮಾನ ಬರುತ್ತೆ," ಎಂದು ನೌಮಾನ್ ನಿಯಾಝ್ ಹೇಳಿದ್ದಾರೆ.

Scroll to load tweet…

ಆದರೆ, ಪಾಕ್ ವಿಶ್ಲೇಷಕನ ಈ ಆರೋಪವನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಈ ಸೀಸನ್‌ನಲ್ಲಿ ವೈಭವ್ ತೋರುತ್ತಿರುವ ಪ್ರದರ್ಶನವೇ ಇದಕ್ಕೆ ಸಾಕ್ಷಿ. ಹೈದರಾಬಾದ್ ವಿರುದ್ಧ 36 ಎಸೆತಗಳಲ್ಲಿ 103 ರನ್ ಸಿಡಿಸಿದ ವೈಭವ್, ಐಪಿಎಲ್ ಇತಿಹಾಸದಲ್ಲೇ ಮೂರನೇ ವೇಗದ ಶತಕ ದಾಖಲಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ 12 ಸಿಕ್ಸರ್‌ಗಳನ್ನು ಬಾರಿಸಿ, ಐಪಿಎಲ್ ಇನ್ನಿಂಗ್ಸ್‌ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಈ ಸೀಸನ್‌ನಲ್ಲಿ ವೈಭವ್ ಸೂರ್ಯವಂಶಿ ಪ್ರದರ್ಶನ ಹೇಗಿದೆ?

8 ಪಂದ್ಯಗಳಿಂದ 357 ರನ್ ಗಳಿಸಿರುವ ವೈಭವ್, ಸದ್ಯ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಅವರಂತಹ ಸೀನಿಯರ್ ಆಟಗಾರರನ್ನೇ ಈತ ಹಿಂದಿಕ್ಕಿದ್ದಾನೆ. ಕಳೆದ ಫೆಬ್ರವರಿಯಲ್ಲಿ ಭಾರತಕ್ಕೆ ಆರನೇ ಅಂಡರ್-19 ವಿಶ್ವಕಪ್ ತಂದುಕೊಟ್ಟಿದ್ದರಲ್ಲೂ ವೈಭವ್ ಬ್ಯಾಟಿಂಗ್ ಪ್ರಮುಖ ಪಾತ್ರ ವಹಿಸಿತ್ತು. ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 175 ರನ್ ಬಾರಿಸಿ ಕ್ರಿಕೆಟ್ ಜಗತ್ತನ್ನೇ ಬೆರಗುಗೊಳಿಸಿದ್ದರು.

ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರಂತಹವರು ವೈಭವ್ ಅವರನ್ನು 'ಅಪರೂಪದ ಪ್ರತಿಭೆ' ಎಂದು ಹೊಗಳಿದ್ದಾರೆ. ಜೂನ್‌ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಪಂದ್ಯಗಳಿಗೆ ವೈಭವ್ ಸೂರ್ಯವಂಶಿ ಭಾರತದ ಹಿರಿಯರ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.