ಬಾರ್ಡರ್‌ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 400+ ರನ್ ಕಲೆಹಾಕಿದ ಆಸ್ಟ್ರೇಲಿಯಾಎರಡನೇ ದಿನದಾಟದ ಚಹಾ ವಿರಾಮದ ವೇಳೆ 409 ರನ್ ಗಳಿಸಿದ ಕಾಂಗರೂ ಪಡೆದ್ವಿಶತಕದತ್ತ ದಾಪುಗಾಲು ಹಾಕುತ್ತಿರುವ ಉಸ್ಮಾನ್ ಖವಾಜ

ಅಹಮದಾಬಾದ್(ಮಾ.10): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಎರಡನೇ ಸೆಷನ್‌ನಲ್ಲಿ ರವಿಚಂದ್ರನ್ ಅಶ್ವಿನ್ ಪ್ರಮುಖ 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಹೊರತಾಗಿಯೂ ಉಸ್ಮಾನ್‌ ಖವಾಜ, ದ್ವಿಶತಕದತ್ತ ದಾಪುಗಾಲಿಡುತ್ತಿದ್ದು, ಚಹಾ ವಿರಾಮದ ವೇಳೆಗೆ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡು 409 ರನ್ ಕಲೆಹಾಕಿದೆ. ಉಸ್ಮಾನ್ ಖವಾಜ ಅಜೇಯ 180 ರನ್ ಬಾರಿಸಿದರೆ, ನೇಥನ್ ಲಯನ್ 6 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕೊನೆಯ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದ ಮೊದಲ ಸೆಷೆನ್‌ನಲ್ಲಿ ವಿಕೆಟ್ ಕಬಳಿಸಲು ಟೀಂ ಇಂಡಿಯಾ ಬೌಲರ್‌ಗಳು ಪರದಾಡಿದ್ದರು. ಆದರೆ ಎರಡನೇ ಸೆಷನ್‌ನಲ್ಲಿ ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌, ಶತಕ ಸಿಡಿಸಿ ಮತ್ತಷ್ಟು ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ಕ್ಯಾಮರೋನ್ ಗ್ರೀನ್ ಬಲಿಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಅದೇ ಓವರ್‌ನಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕೇರಿಯನ್ನು ಬಲಿ ಪಡೆಯುವ ಮೂಲಕ ಆಸ್ಟ್ರೇಲಿಯಾಗೆ ಡಬಲ್ ಶಾಕ್ ನೀಡಿದರು.

ಉಸ್ಮಾನ್ ಖವಾಜ-ಗ್ರೀನ್‌ ದ್ವಿಶತಕದ ಜತೆಯಾಟ: ಮೊದಲ ದಿನದಾಟದಂತ್ಯದ ವೇಳೆಗೆ 5ನೇ ವಿಕೆಟ್‌ಗೆ 85 ರನ್‌ಗಳ ಜತೆಯಾಟವಾಡಿದ್ದ ಉಸ್ಮಾನ್ ಖವಾಜ ಹಾಗೂ ಕ್ಯಾಮರೋನ್ ಗ್ರೀನ್‌ ಜೋಡಿ ಎರಡನೇ ದಿನ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಟೀಂ ಇಂಡಿಯಾ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. 5ನೇ ವಿಕೆಟ್‌ಗೆ ಈ ಜೋಡಿ 358 ಎಸೆತಗಳನ್ನು ಎದುರಿಸಿ 208 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 375ರ ಗಡಿ ದಾಟಿಸಿದರು. ಆಕರ್ಷಕ ಬ್ಯಾಟಿಂಗ್ ನಡೆಸಿದ ಕ್ಯಾಮರೋನ್ ಗ್ರೀನ್‌ 170 ಎಸೆತಗಳನ್ನು ಎದುರಿಸಿ 18 ಬೌಂಡರಿ ಸಹಿತ 114 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. 

Scroll to load tweet…

ಖವಾಜ ದ್ವಿಶತಕದತ್ತ ದಾಪುಗಾಲು: ಈ ಬಾರಿಯ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಪರ ಶತಕ ಚಚ್ಚಿದ ಮೊದಲ ಆಸ್ಟ್ರೇಲಿಯಾದ ಬ್ಯಾಟರ್‌ ಎನಿಸಿಕೊಂಡಿರುವ ಉಸ್ಮಾನ್ ಖವಾಜ ಇದೀಗ ದ್ವಿಶತಕದತ್ತ ದಾಪುಗಾಲಿಡುತ್ತಿದ್ದಾರೆ. ಟೀಂ ಇಂಡಿಯಾ ಎದುರು ನೆಲಕಚ್ಚಿ ಆಡುತ್ತಿರುವ ಉಸ್ಮಾನ್ ಖವಾಜ, ಈಗಾಗಲೇ 400+ ಎಸೆತಗಳನ್ನು ಎದುರಿಸುವ ಮೂಲಕ, ಭಾರತದಲ್ಲಿ 400+ ಎಸೆತಗಳನ್ನು ಎದುರಿಸಿದ 8ನೇ ವಿದೇಶಿ ಬ್ಯಾಟರ್ ಎನ್ನುವ ಹಿರಿಮೆಗೆ ಖವಾಜ ಪಾತ್ರರಾಗಿದ್ದಾರೆ. ಇನ್ನು ಭಾರತ ಎದುರು ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ 2010ರ ಫೆಬ್ರವರಿಯಲ್ಲಿ 400+ ಎಸೆತಗಳನ್ನು ಕೊನೆಯ ಬಾರಿಗೆ ಎದುರಿಸಿದ್ದರು. ಇದಾಗಿ ಬರೋಬ್ಬರಿ 13 ವರ್ಷಗಳ ಬಳಿಕ ವಿದೇಶಿ ಬ್ಯಾಟರ್‌ವೊಬ್ಬ ಭಾರತದಲ್ಲಿ ಇನಿಂಗ್ಸ್‌ವೊಂದರಲ್ಲಿ 400+ ಎಸೆತಗಳನ್ನು ಎದುರಿಸಿದ ಕೀರ್ತಿಗೆ ಖವಾಜ ಪಾತ್ರರಾಗಿದ್ದಾರೆ. ಸದ್ಯ ಖವಾಜ 421 ಎಸೆತಗಳನ್ನು ಎದುರಿಸಿ 21 ಬೌಂಡರಿ ಸಹಿತ 180 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.